ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಸರಕಾರದ ಎಲ್ಲಾ ಟೆಂಡರ್‌ಗಳಲ್ಲೂ ಮೀಸಲಾತಿ ನೀಡಿ: ಬಿಬಿಎಂಪಿ ವಿದ್ಯುತ್‌ ಗುತ್ತಿಗೆದಾರರ ಆಗ್ರಹ

 

*ಬೆಂಗಳೂರು ಜುಲೈ 13*: ಸೇವಾ ಕ್ಷೇತ್ರದ ಕಾರ್ಯಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ಗುತ್ತಿಗೆದಾರರಿಗೆ, ಕೆಟಿಪಿಪಿ ಕಾಯ್ದೆಯಲ್ಲಿ ಮೀಸಲಾತಿ ನೀಡುವ ಅಧಿಸೂಚನೆಯಲ್ಲಿನ ಅಸ್ಪಷ್ಟತೆಯ ಹಿನ್ನಲೆಯಲ್ಲಿ ತೀವ್ರತೊಂದರೆ ಉಂಟಾಗುತ್ತಿದೆ. ಅದರಲ್ಲೂ ಬಿಬಿಎಂಪಿ ವ್ಯಾಪ್ತಿಯಲ್ಲಿನ ವಿದ್ಯುತ್‌ ಗುತ್ತಿಗೆದಾರರಿಗೆ ವರ್ಕ್‌ ಆರ್ಡರ್‌ ನೀಡಲಾಗಿದ್ದ ಕಾರ್ಯಗಳನ್ನು ರದ್ದುಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ ಕೂಡಲೇ ಸರಕಾರದ ಎಲ್ಲಾ ಕಾಮಗಾರಿಗಳಲ್ಲೂ ಮೀಸಲಾತಿ ಅನ್ವಯವಾಗುವಂತಹ ತಿದ್ದುಪಡಿಯನ್ನು ಕೂಡಲೇ ಮಾಡಬೇಕು ಎಂದು ಬಿಬಿಎಂಪಿ ವಿದ್ಯುತ್‌ ಗುತ್ತಿಗೆದಾರ ಮಂಜುನಾಥ್‌ ಆಗ್ರಹಿಸಿದ್ದಾರೆ.

 

ಇಂದು ಪ್ರೆಸ್‌ಕ್ಲಬ್‌ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್‌, ನಾವುಗಳು ಕ್ಲಾಸ್‌ 1 ವಿದ್ಯುತ್‌ ಗುತ್ತಿಗೆದಾರರಾಗಿದ್ದು ಬಿಬಿಎಂಪಿ ಗೆ ಹಲವಾರು ವಿದ್ಯುತ್‌ ಸಂಬಂಧಿತ ಕಾಮಗಾರಿಗಳನ್ನು ನಿರ್ವಹಿಸಿದ್ದೇವೆ. ರಾಜ್ಯ ಸರಕಾರ ಪರಿಶಿಷ್ಟ ಪಂಗಡ ಹಾಗೂ ಜಾತಿಯ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ 50 ಲಕ್ಷ ರೂಪಾಯಿಗಳಿಗೆ ಮೀರದ ಕಾಮಗಾರಿಗಳಲ್ಲಿ ಮೀಸಲಾತಿಯನ್ನು ನೀಡಿದೆ. ಇದರಿಂದ ನೂರಾರು ಗುತ್ತಿಗೆದಾರರಿಗೆ ಅನುಕೂಲ ಅಗಿದೆ. ಆದರೆ, ಈ ಅಧಿಸೂಚನೆಯಲ್ಲಿ ಬಳಸಲಾಗಿರುವ ಪದಗಳಲ್ಲಿ ಎಲ್ಲಾ ಕಾಮಗಾರಿಗಳು ಮತ್ತು ಟೆಂಡರ್‌ಗಳಲ್ಲಿ ಮೀಸಲಾತಿ ಅನ್ವಯವಾಗುವುದನ್ನು ಸ್ಪಷ್ಟಪಡಿಸಲಾಗಿಲ್ಲ.

 

ಈ ಗೊಂದಲದಿಂದಾಗಿ, ಈಗಾಗಲೇ ನೂರಾರು ಕಾಮಗಾರಿಗಳನ್ನು ನಿರ್ವಹಣೆ ಮಾಡಿದ್ದರೂ ಕೂಡಾ ಮೀಸಲಾತಿ ವಿದ್ಯುತ್‌ ಕಾಮಗಾರಿಗಳ ನಿರ್ವಹಣೆಯಲ್ಲಿ ಅನ್ವಯವಾಗುವುದಿಲ್ಲ ಎಂದು ವರ್ಕ್‌ ಆರ್ಡರ್‌ ನೀಡಿದ್ದ ವಿದ್ಯುತ್‌ ಕೆಲಸಗಳನ್ನು ರದ್ದುಗೊಳಿಸಲಾಗಿದೆ. ವರ್ಕ್‌ ಆರ್ಡರ್‌ ನೀಡಿದ್ದ ಕಾರಣದಿಂದ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಜೀಪುಗಳು ಮತ್ತಿತರ ಉಪಕರಣಗಳನ್ನು ಖರೀದಿಸಿದ್ದೇವೆ. ಒಂದು ವರ್ಷ ಕೆಲಸದ ಭರವಸೆಯ ಮೇಲೆ ಕಾರ್ಮಿಕರಿಗೂ ವೇತನ ನೀಡಿದ್ದೇವೆ. ಆದರೆ, ಮಾನ್ಯ ಕರ್ನಾಟಕ ಹೈಕೋರ್ಟ್‌ ಮೀಸಲಾತಿ ಕೇವಲ ನಿರ್ಮಾಣ ಕಾಮಗಾರಿಗಳಿಗೆ ಅನ್ವಯವಾಗುತ್ತದೆ, ಎಲೆಕ್ಟ್ರಿಕ್‌ ಲೈಟ್‌ ನಿರ್ವಹಣಾ ಟೆಂಡರ್‌ ಗೆ ಅನ್ವಯವಾಗುವುದಿಲ್ಲ ಎಂದು ಬಿಬಿಎಂಪಿ 25.02.2021 ರ ಟೆಂಡರನ್ನು ರದ್ದುಗೊಳಿಸಿದೆ.

 

ಇದಕ್ಕೆ ಮೂಲ ಕಾರಣ ಕೆಟಿಪಿಪಿ ಅಧಿಸೂಚನೆಯಲ್ಲಿ ಎಲ್ಲಾ ಕಾಮಗಾರಿಗಳಿಗೂ ಮೀಸಲಾತಿ ಅನ್ವಯ ವಾಗುತ್ತದೆ ಎನ್ನುವುದು ಸರಿಯಾಗಿ ಸ್ಪಷ್ಟತೆ ಇಲ್ಲದೆ ಇರುವುದು. ಕೆಳಸ್ತರದ ವರ್ಗಗಳಿಗೆ ಸೇರಿದ ನಾವುಗಳು ಬಹುತೇಕ ಸೇವಾ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಸೇವಾ ವಲಯದ ಕಾಮಗಾರಿಗಳಲ್ಲೂ ಮೀಸಲಾತಿ ಅನ್ವಯ ಮಾಡಿ ಕೆಟಿಪಿಪಿ ಕಾಯ್ದೆಯಲ್ಲಿ ಅಗತ್ಯ ತಿದ್ದುಪಡಿಯ ಅಧಿಸೂಚನೆ ಹೊರಡಿಸುವುದರಿಂದ ರಾಜ್ಯದ ಲಕ್ಷಾಂತರ ಪರಿಶಿಷ್ಟ ಜಾತಿ ಹಾಗೂ ಪಂಗಡದ ಗುತ್ತಿಗೆದಾರರಿಗೆ ಅನುಕೂಲವಾಗುತ್ತದೆ. ಅನೇಕ ಬಾರಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಸ್ಪಷ್ಟತೆಯನ್ನು ನೀಡಿಲ್ಲ. ಈ ಹಿನ್ನಲೆಯಲ್ಲಿ ಶೀಘ್ರ ಎಲ್ಲಾ ಕಾಮಗಾರಿ ಹಾಗೂ ಸೇವಾ ಟೆಂಡರ್‌ ಗಳಲ್ಲೂ ಮೀಸಲಾತಿ ಅನ್ವಯಿಸುವ ತಿದ್ದಪಡಿಯನ್ನು ಹೊರಡಿಸುವಂತೆ ಆಗ್ರಹಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version