ಸದನದಲ್ಲಿ ಸಚಿವರ ಕಡ್ಡಾಯ ಹಾಜರಿಗೆ ಸೂಚನೆ ನೀಡಲು ಸಿಎಂಗೆ ಸಭಾಪತಿ ಹೊರಟ್ಟಿ ಮನವಿ

ಸದನದಲ್ಲಿ ಸಚಿವರ ಕಡ್ಡಾಯ ಹಾಜರಿಗೆ ಸೂಚನೆ ನೀಡಲು ಸಿಎಂಗೆ ಸಭಾಪತಿ ಹೊರಟ್ಟಿ ಮನವಿ

ಬೆಂಗಳೂರು: ವಿಧಾನ ಪರಿಷತ್ ಕಲಾಪ ಸೆ.13ರಿಂದ ಆರಂಭಗೊಳ್ಳಲಿದ್ದು, ಸದನದ ಸಂದರ್ಭದಲ್ಲಿ ಸಚಿವರು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಸಂಪುಟ ಸಹೋದ್ಯೊಗಿಗಳಿಗೆ ಸೂಚನೆ ನೀಡಬೇಕು’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೋರಿದ್ದಾರೆ.

 

ಗುರುವಾರ ಈ ಸಂಬಂಧ ಪ್ರತಿಕಾ ಪ್ರಕಟನೆ ನೀಡಿರುವ ಅವರು, `ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಧಾನಮಂಡಲದ ಅಧಿವೇಶನ ಬಹು ಮುಖ್ಯವಾಗಿದ್ದು. ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಹಾಗೂ ಸಾರ್ವಜನಿಕರ ಸಂಕಷ್ಟಗಳ ಕುರಿತು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಅಧಿವೇಶನ ಸೂಕ್ತ ವೇದಿಕೆಯಾಗಿದೆ. ಹೀಗಾಗಿ ಶಾಸನಸಭೆಯ ಕಲಾಪಗಳು ನಡೆಯುವಾಗ ಸಚಿವರು ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು’ ಎಂದು ಮನವಿ ಮಾಡಿದ್ದಾರೆ.

 

`ಈ ಹಿಂದೆ ನಡೆದಿರುವ ಅಧಿವೇಶನಗಳ ಸಂದರ್ಭದಲ್ಲಿ ಹಲವು ಸಚಿವರು, ತಮ್ಮ ಕ್ಷೇತ್ರಕ್ಕೆ ಸಂಬಂಧಿತ ಕಾರ್ಯಗಳ ಕಾರಣದ ಮೇಲೆ ಸದನಕ್ಕೆ ಗೈರುಹಾಜರಾಗುವ ಕುರಿತು ಅನುಮತಿ ಕೋರುತ್ತಿದ್ದುದ್ದು ಸಾಮಾನ್ಯವಾಗಿತ್ತು. ಸದಸ್ಯರು ಸಾರ್ವಜನಿಕ ಮಹತ್ವದ ವಿಚಾರಗಳ ಬಗ್ಗೆ ಸದನದಲ್ಲಿ ಕೇಳುವ ಪ್ರಶ್ನೆಗಳಿಗೆ ಸಂಬಂಧಿತ ಸಚಿವರು ಉತ್ತರ ನೀಡಬೇಕಾಗಿರುವುದು ಅವರ ಕರ್ತವ್ಯ ಹಾಗೂ ಜವಾಬ್ದಾರಿ. ಆದರೆ, ಚರ್ಚೆಯ ವೇಳೆ ಸಚಿವರು ಸದನದಲ್ಲಿ ಇಲ್ಲದೆ ಇರುವುದರಿಂದ ಸಂಬಂಧಪಟ್ಟ ಪ್ರಶ್ನೆಗೆ ಸಮರ್ಪಕ ಉತ್ತರ ದೊರೆಯದೇ ಸಮಸ್ಯೆಗೆ ಸೂಕ್ತ ಪರಿಹಾರ ಸಿಗುವುದಿಲ್ಲ. ಸಚಿವರ ಗೈರಿನಿಂದಾಗಿ ಕಲಾಪ ನಡೆಸುವ ಉದ್ದೇಶ ಸಾಫಲ್ಯಗೊಳ್ಳುವುದಿಲ್ಲ ಎಂದು ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.

`ಸಚಿವರ ಅನುಪಸ್ಥಿತಿಯು, ಆಡಳಿತಾರೂಢ ಸರಕಾರದಿಂದ ಉತ್ತರ ಪಡೆಯುವ ಸದಸ್ಯರ ಹಕ್ಕು ಮತ್ತು ಅವಕಾಶವನ್ನು ವಂಚಿಸಿದಂತಾಗುತ್ತದೆ, ಕಾರಣ ಸಚಿವರು ಸದನದಲ್ಲಿ ಹಾಜರಿರುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ಮುಖ್ಯಮಂತ್ರಿಗೆ ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ. ಸಂಪುಟದ ಎಲ್ಲ ಸದಸ್ಯರು ಸ್ಯಯಂಪ್ರೇರಿತರಾಗಿ ಕಡ್ಡಾಯವಾಗಿ ಸದನದ ಕಲಾಪಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಜವಾಬ್ದಾರಿ ನಿರ್ವಹಿಸುವಂತೆ ಸೂಚಿಸಿರುವ ಬಸವರಾಜ ಹೊರಟ್ಟಿ, ಅಧಿವೇಶನದ ವೇಳೆ ತಮ್ಮ ಕ್ಷೇತ್ರಗಳ ಕಾರ್ಯಕ್ರಮಗಳನ್ನು ಉಲ್ಲೇಖಿಸಿ ಸದನ ಕಲಾಪದಿಂದ ವಿನಾಯಿತಿ ಕೋರಿ ಮನವಿ ಸಲ್ಲಿಸದಂತೆ ಎಲ್ಲ ಸಚಿವರಿಗೆ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version