ಗೋಕಾಕ
ಮೂರ್ನಾಲ್ಕು ದಿನಗಳ ಒಳಗೆ ರಮೇಶ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸುತ್ತೇನೆ:ಬಾಲಚಂದ್ರ ಜಾರಕಿಹೊಳಿ
ಸಚಿವ ಸ್ಥಾನಕ್ಕೆ ನಾನು ಕ್ಲೇಮ ಮಾಡಿಲ್ಲ; ರಮೇಶ ಜಾರಕಿಹೊಳಿಯವರೇ ಮಂತ್ರಿ ಆಗಬೇಕೆಂಬುದು ನಮ್ಮೆಲ್ಲರ ಆಸೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಮೇಶ ಜಾರಕಿಹೊಳಿ ಸಚಿವರಾಗಲು ಕೆಲವೊಂದಿಷ್ಟು ಕಾನೂನು ತೊಡಕುಗಳಿವೆ. ಅವುಗಳನ್ನು ಸರಿಪಡಿಸಿಕೊಳ್ಳುತ್ತೇವೆ, ರಮೇಶ ಅವರನ್ನೇ ಸಚಿವರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದೇವೆ” ಎಂದರು.
ಮೂರ್ನಾಲ್ಕು ದಿನಗಳಲ್ಲಿ ಜಂಟಿ ಸುದ್ದಿಗೋಷ್ಠಿ:
“ರಮೇಶ ಅವರು ಸದ್ಯ ಬೆಂಗಳೂರಿನಲ್ಲಿ ಇದ್ದಾರೆ. ನಾಳೆ ಅವರು ಗೋಕಾಕಗೆ ಬರಲಿದ್ದಾರೆ. ಇಲ್ಲಿ ಅವರೊಂದಿಗೆ ಇನ್ನೊಂದು ಸುತ್ತಿನ ಮಾತುಕತೆ ನಡೆಸುತ್ತೇವೆ. ಸಭೆಯ ನಂತರ ಮೂರ್ನಾಲ್ಕು ದಿನಗಳಲ್ಲಿ ಇಬ್ಬರು ಸೇರಿ ಜಂಟಿ ಸುದ್ದಿಗೋಷ್ಠಿ ನಡೆಸಿ, ಕೆಲವೊಂದಿಷ್ಟು ವಿಚಾರಗಳನ್ನು ಕ್ಲಿಯರ್ ಮಾಡುತ್ತೇವೆ” ಎಂದು ತಿಳಿಸಿದರು.
ಸಚಿವ ಸ್ಥಾನಕ್ಕೆ ನಾನು ಕ್ಲೇಮ ಮಾಡಿಲ್ಲ:
“ಸಚಿವ ಸ್ಥಾನಕ್ಕಾಗಿ ನಾನು ಕ್ಲೇಮ ಮಾಡಿಲ್ಲ. ಯಾರು ಆಫರ್ ಕೂಡ ನೀಡಿಲ್ಲ. ಮಾಧ್ಯಮಗಳಲ್ಲಿ ಈ ವಿಷಯ ಏಕೆ ಬರುತ್ತಿದೆಯೋ ಗೊತ್ತಿಲ್ಲ. ನನ್ನ ಪಾಡಿಗೆ ಕ್ಷೇತ್ರದಲ್ಲಿ ಶಾಸಕನಾಗಿ, ಕೆಎಂಎಫ್ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ” ಎಂದು ಪತ್ರಕರ್ತರ ಪ್ರಶ್ನೆಗೆ ಸ್ಪಷ್ಟನೆ ನೀಡಿದರು.
“ರಾಜಕಾರಣದಲ್ಲಿ ಅಸಮಾಧಾನ, ಬೇಜಾರು ಇದ್ದೇ ಇರುತ್ತದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತಹ ಇಸ್ಯೂ ಏನೂ ಇಲ್ಲ. ಪಕ್ಷದಲ್ಲಿದ್ದು ಬೆನ್ನಿಗೆ ಚೂರಿ ಹಾಕಿದವರ ಬಗ್ಗೆ ನನಗೆ ಗೊತ್ತಿಲ್ಲ” ಎಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.