ಕಾಂಗ್ರೆಸ್ ಪಕ್ಷ ಒಡೆದ ಮನೆ: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್.
ಬೆಂಗಳೂರು: ಕಾಂಗ್ರೆಸ್ ಮುಖಂಡರ ಬಳಿ ಯಾವುದೇ ವಿಷಯಗಳಿಲ್ಲ. ಕಾಂಗ್ರೆಸ್ ಪಕ್ಷವು ಒಡೆದ ಮನೆಯಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವೆ ತೀವ್ರ ಭಿನ್ನಾಭಿಪ್ರಾಯವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು.
ನಗರದ ಕೆ.ಕೆ.ಗೆಸ್ಟ್ ಹೌಸ್ ನಲ್ಲಿ ಇಂದು ಪತ್ರಕರ್ತರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಒಳಜಗಳ ಕೇವಲ ಕರ್ನಾಟಕದಲ್ಲಷ್ಟೇ ಇಲ್ಲ. ಛತ್ತೀಸ್‍ಗಡ, ಪಂಜಾಬ್ ರಾಜ್ಯಗಳಲ್ಲೂ ಒಳಜಗಳ ಇದೆ. ಕಾಂಗ್ರೆಸ್ ನಾಯಕತ್ವದ ವೈಫಲ್ಯವೇ ಇದಕ್ಕೆ ಕಾರಣ ಎಂದರು.
ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುವುದಾಗಿ ಅವರು ತಿಳಿಸಿದರು. ಬೂತ್‍ಗಳಲ್ಲಿ ಪಕ್ಷವನ್ನು ಬಲಪಡಿಸುವುದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲುವ ಬಗ್ಗೆ ಚರ್ಚಿಸಲಾಗುವುದು. 2023ರ ವಿಧಾನಸಭಾ ಚುನಾವಣೆಯಲ್ಲಿ ಅತ್ಯಧಿಕ ಬಹುಮತದಿಂದ ಗೆಲ್ಲುವ ಕಡೆ ಪಕ್ಷವು ಗಮನ ಕೇಂದ್ರೀಕರಿಸಲಿದೆ. ಪ್ರತಿಯೊಬ್ಬರೂ ಈ ಕಡೆ ಗಮನ ಹರಿಸಲಿದ್ದೇವೆ ಎಂದು ಅರುಣ್ ಸಿಂಗ್ ಹೇಳಿದರು.
ಬಿಟ್ ಕಾಯಿನ್ ಹಗರಣದ ಕುರಿತು ಮುಖ್ಯಮಂತ್ರಿ ತಕ್ಷಣ ಕ್ರಮ ಕೈಗೊಂಡಿದ್ದಾರೆ. ಕಾಂಗ್ರೆಸ್ ಬಳಿ ಯಾವುದೇ ವಿಷಯಗಳಿಲ್ಲದ ಕಾರಣ ಅದು ಬಿಜೆಪಿ ಬಗ್ಗೆ ಸುಳ್ಳು ಆರೋಪ- ಆಧಾರರಹಿತ ಟೀಕೆ ಮಾಡುತ್ತಿದೆ ಎಂದು ಅವರು ಈ ಕುರಿತ ಪ್ರಶ್ನೆಗೆ ಉತ್ತರ ನಿಡಿದರು.
ರಾಜ್ಯದಲ್ಲಿ ನಡೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಪಕ್ಷದ ಸಮಗ್ರ ಸಾಧನೆ ಚೆನ್ನಾಗಿದೆ ಎಂದು ಅವರು ತಿಳಿಸಿದರು.