ಜಮೀನಿನಲ್ಲಿ ಕಾವಲು ಕಾಯುತಿದ್ದ ರೈತನ ಮೇಲೆ ಚಿರತೆ ದಾಳಿ
ಹನೂರು :-ಕೊಳ್ಳೇಗಾಲ ತಾಲೂಕಿನ ಸಿಂಗನಾಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗುಂಡಾಲ್ ಜಲಾಶಯದ ಮೋಡಳ್ಳಿ ಸಮೀಪದ ಕಂಚಗಳ್ಳಿ ಗ್ರಾಮದ ಜಮೀನಿನಲ್ಲಿ ಕಾವಲು ಕಾಯುತ್ತಿದ್ದ ಅಣಕೆರೆ ಮಾರಮ್ಮ ದೇವಸ್ಥಾನದ ಅರ್ಚಕ ನಂಜಪ್ಪ ಎಂಬುವವರ ಮೇಲೆ ಚಿರತೆಯೊಂದು ದಾಳಿ ಮಾಡಿದೆ.
ಮಂಗಳವಾರ ರಾತ್ರಿ ಜೋಳದ ಫಸಲು ಕಾವಲಿಗಾಗಿ ತೆರಳಿದ್ದ ನಂಜಪ್ಪ ಅವರು ಫೋನಿನಲ್ಲಿ ಮಾತಾಡಿಕೊಂಡು ಮಲಗಿದ್ದರು. ರಾತ್ರಿ 9 ಗಂಟೆ ಸಮಯದಲ್ಲಿ ಗುಡಿಸಲಿಗೆ ನುಗ್ಗಿದ ಚಿರತೆ ನಂಜಪ್ಪ ಅವರ ಮೇಲೆ ಬಿದ್ದು ಅವರ ಎಡಗೈ ತೋಳಿಗೆ ಹುಗುರಿನಿಂದ ಪರಚಿದೆ. ಅವರು ಬೆಕ್ಕು ಇರಬೇಕೆಂದು ತಿಳಿದು ರಗ್ಗಿನ ಸಮೇತ ಬಿಸಾಡಿದ್ದಾರೆ. ಹೊರಗೆ ಬಿದ್ದಾಗ ಅದು ಚಿರತೆ ಎಂದು ಗೊತ್ತಾಗಿದೆ. ಕೂಡಲೇ ದೊಣ್ಣೆ ಹಿಡಿದು ಬೆದರಿಸಿದಾಗ ಓಡಿ ಹೋಗಿದೆ.
ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದು ಕೊಳ್ಳೇಗಾಲ ವಲಯದ ಉಪ ಅರಣ್ಯ ಅಧಿಕಾರಿ ಪ್ರಭುಸ್ವಾಮಿ ಸಿ ರವರು ಬೆಳಿಗ್ಗೆ ನಂಜಪ್ಪರನ್ನು ಹತ್ತಿರದ ಕಾಮಗೆರೆ ಗ್ರಾಮದ ಹೋಲಿಕ್ರಾಸ್ ಆಸ್ಪತ್ರೆಗೆ ಕರೆದೋಯ್ದು ರಕ್ತ ಪರೀಕ್ಷೆ ಮಾಡಿಸಿ ತಪಾಷಣೆ ಮಾಡಿದ್ದಾರೆ. ಸದ್ಯ ಯಾವುದೇ ಗಂಭೀರ ಗಾಯಗಳಾಗಿಲ್ಲ.ಸ್ಥಳೀಯ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.ಸೋಮವಾರ ಕಗ್ಗಲಿಗುಂದಿ ಗ್ರಾಮದಲ್ಲಿ ಬಾಲಕಿಯೊಬ್ಬಳ ಮೇಲೆ ದಾಳಿ ನಡೆಸಿದ್ದ ಚಿರತೆ ಇದೆ ಇರಬೇಕು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.
ಕಗ್ಗಲಿಗುಂದಿ ಗ್ರಾಮಸ್ಥರು ಆತಂಕದ ಸಮಯದಲ್ಲಿರುವಾಗಲೇ ಕಂಚಗಳ್ಳಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿರುವುದು ಮೋಡಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರನ್ನು ಮತ್ತಷ್ಟು ಆತಂಕಕ್ಕೀಡಾಗುವಂತೆ ಮಾಡಿದೆ. ಅರಣ್ಯ ಇಲಾಖೆ ಶೀಘ್ರವಾಗಿ ಚಿರತೆಯನ್ನು ಹಿಡಿದು ಬೇರೆಡೆ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ವರದಿ :- ನಾಗೇಂದ್ರ ಪ್ರಸಾದ್