ಸರ್ಕಾರ- ರಾಜ್ಯಪಾಲರ ಸಭೆ ಬಳಿಕ ಬಂಗಾಳದ ಆರು ಕುಲಪತಿಗಳ ರಾಜೀನಾಮೆ
ಕೊಲ್ಕತ್ತಾ: ಬಂಗಾಳದ ವಿವಿಧ ವಿಶ್ವವಿದ್ಯಾನಿಲಯಗಳಿಗೆ ತಾತ್ಕಾಲಿಕವಾಗಿ ನೇಮಕಗೊಂಡಿದ್ದ ಆರು ಮಂದಿ ಕುಲಪತಿಗಳು ಮಂಗಳವಾರ ರಾಜ್ಯಪಾಲ ಸಿ.ವಿ.ಆನಂದ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ರಾಜಭವನದಲ್ಲಿ ಎರಡು ಗಂಟೆಗಳ ಸುಧೀರ್ಘ ಸಭೆ ನಡೆಸಿದ ರಾಜ್ಯ ಶಿಕ್ಷಣ ಸಚಿವ ಬೃತ್ಯ ಬಸು ಅವರ ಸಮ್ಮುಖದಲ್ಲಿ ಕುಲಪತಿಗಳು ಪದತ್ಯಾಗ ಮಾಡಿದರು.
“ಆರು ಮಂದಿ ಕುಲಪತಿಗಳು ತಮ್ಮ ರಾಜೀನಾಮೆ ಪತ್ರಗಳನ್ನು ರಾಜ್ಯಪಾಲರಿಗೆ ಕಳುಹಿಸಿದ್ದಾರೆ. ಮತ್ತೆ ಕೆಲವರು ನಾಳೆ ರಾಜೀನಾಮೆ ನೀಡಲಿದ್ದಾರೆ. ಉಳಿದವರು ಹಂತ ಹಂತವಾಗಿ ಈ ಕ್ರಮ ಅನುಸರಿಸುವರು” ಎಂದು ಬಸು ಹೇಳಿದ್ದಾರೆ.
ವಿಶ್ವವಿದ್ಯಾನಿಲಯ ಕಾಯ್ದೆ ಅನ್ವಯ ರೂಪಿಸಿರುವ ಶೋಧ ಸಮಿತಿ ಮೂಲಕ ನೇಮಕ ಮಾಡುವ ಹಳೆಯ ನೇಮಕಾತಿ ವಿಧಾನ ಅನುಸರಿಸುವ ಮುನ್ನ ರಾಜ್ಯಪಾಲರು ಆರು ಮಂದಿ ಕುಲಪತಿಗಳ ಅಧಿಕಾರಾವಧಿಯನ್ನು ಮೂರು ತಿಂಗಳು ವಿಸ್ತರಿಸಿದ್ದರು. ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳ ಕುಲಾಧಿಪತಿಯಾಗಿರುವ ರಾಜ್ಯಪಾಲರಿಗೆ ರಾಜ್ಯ ಶಿಕ್ಷಣ ಸಚಿವರು ಶೋಧ ಸಮಿತಿಯನ್ನು ರಚಿಸುವ ಪ್ರಕ್ರಿಯೆ ಆರಂಭಿಸುವುದಾಗಿ ಭರವಸೆ ನೀಡಿದರು.
ಹಿಂದಿನ ಶಿಕ್ಷಣ ಸಚಿವ ಪಾರ್ಥ ಚಟರ್ಜಿಯವರ ಅಧಿಕಾರಾವಧಿಯಲ್ಲಿ ಕುಲಪತಿಗಳ ನೇಮಕಾತಿ ರಾಜ್ಯಪಾಲರು ಹಾಗೂ ಸರ್ಕಾರದ ನಡುವಿನ ಸಂಘರ್ಷಕ್ಕೆ ಕಾರಣವಾಗಿತ್ತು. ರಾಜ್ಯ ಸರ್ಕಾರ ಪಶ್ಚಿಮ ಬಂಗಾಳ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳ (ಆಡಳಿತ ಮತ್ತು ನಿಬಂಧನೆ) ಕಾಯ್ದೆ-2017 ಹಾಗೂ ಪಶ್ಚಿಮ ಬಂಗಾಳ ವಿಶ್ವವಿದ್ಯಾನಿಲಯಗಳ ನಿಯಮಾವಳಿ- 2019ನ್ನು ರೂಪಿಸಿತ್ತು. ಇದರ ಪ್ರಕಾರ ಕುಲಾಧಿಪತಿಗಳ ಬದಲಾಗಿ ರಾಜ್ಯ ಸರ್ಕಾರ, ಶೋಧ ಸಮಿತಿಯನ್ನು ಕಡೆಗಣಿಸಿ ಕುಲಪತಿಗಳನ್ನು ನೇಮಕ ಮಾಡಬಹುದಾಗಿದೆ.