122 ವರ್ಷಗಳಲ್ಲೇ ‘ಬಿಸಿ ಫೆಬ್ರವರಿ ‘: ಹವಾಮಾನ ಬದಲಾವಣೆ ಸೂಚಕ

122 ವರ್ಷಗಳಲ್ಲೇ ‘ಬಿಸಿ ಫೆಬ್ರವರಿ ‘: ಹವಾಮಾನ ಬದಲಾವಣೆ ಸೂಚಕ

 

 

 

ಹೊಸದಿಲ್ಲಿ: ದೇಶದ ಹವಾಮಾನ ಅಂಕಿ ಅಂಶಗಳು ಲಭ್ಯವಿರುವ 1901ರಿಂದೀಚೆಗೆ ಈ ವರ್ಷದ ಫೆಬ್ರವರಿ ತಿಂಗಳು ಅತಿ ಹೆಚ್ಚು ತಾಪಮಾನ ದಾಖಲಾದ ತಿಂಗಳು ಎಂಬ ಕುಖ್ಯಾತಿಗೆ ಪಾತ್ರವಾಗಿದೆ. 2023ರ ಫೆಬ್ರವರಿಯಲ್ಲಿ ದೇಶದ ಮಾಸಿಕ ಸರಾಸರಿ ಉಷ್ಣಾಂಶ 29.54 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ. ದೇಶದಲ್ಲಿ ಗರಿಷ್ಠ ತಾಪಮಾನ ದಾಖಲಾದ ಐದು ಫೆಬ್ರವರಿ ತಿಂಗಳುಗಳು ಕಳೆದ 14 ವರ್ಷಗಳಲಿವೆ. ಇದು ದೇಶದ ಹವಾಮಾನ ಸಂಕಷ್ಟದ ಸೂಚಕ ಎಂದು ವಿಶ್ಲೇಷಿಸಲಾಗುತ್ತಿದೆ.

 

 

 

 

 

ಕನಿಷ್ಠ ತಾಪಮಾನ ಅಧಾರದಲ್ಲೂ 2023ರ ಫೆಬ್ರವರಿ ತಿಂಗಳು ಐದನೇ ‘ಬಿಸಿ ಫೆಬ್ರವರಿ’ ಎನಿಸಿಕೊಂಡಿದೆ. ಫೆಬ್ರವರಿಯಲ್ಲಿ ಸರಾಸರಿ ಗರಿಷ್ಠ ತಾಪಮಾನ ವಾಡಿಕೆ ಮಟ್ಟಕ್ಕಿಂತ 1.73 ಡಿಗ್ರಿ ಸೆಲ್ಷಿಯಸ್ ಅಧಿಕ ಇದ್ದರೆ, ಕನಿಷ್ಠ ತಾಪಮಾನ 0.81 ಡಿಗ್ರಿ ಸೆಲ್ಷಿಯಸ್‍ನಷ್ಟು ಅಧಿಕವಾಗಿದೆ ಎಂದು ಭಾರತದ ಹವಾಮಾನ ಇಲಾಖೆ ಮಂಗಳವಾರ ಪ್ರಕಟಿಸಿದೆ.

 

 

 

 

“ದೇಶದಲ್ಲಿ ನಿಧಾನವಾಗಿ ಚಳಿಗಾಲ ಕಡಿಮೆಯಾಗುತ್ತಿದ್ದು, ತೀವ್ರ ಬೇಸಿಗೆಯ ಅವಧಿ ಹೆಚ್ಚುತ್ತಿದೆ. ಸ್ಥಳೀಯ ಅಂಶಗಳು ಪ್ರಧಾನ ಪಾತ್ರ ವಹಿಸಿದರೂ, ತಾಪಮಾನ ದಾಖಲಾಗುವಲ್ಲಿ ಹವಾಮಾನ ಬದಲಾವಣೆಯ ಪರಿಣಾಮವೂ ಇದೆ. ಈ ಹವಾಮಾನ ವೈಪರಿತ್ಯದ ಪರಿಸ್ಥಿತಿ ನಗರ ಕೇಂದ್ರಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ” ಎಂದು ಸ್ಕೈಮೆಟ್ ವೆದರ್ ಸರ್ವೀಸಸ್‍ನ ಉಪಾಧ್ಯಕ್ಷ ಮಹೇಶ್ ಪಾಲಾವತ್ ಹೇಳಿದ್ದಾರೆ.

 

 

 

 

 

ದೆಹಲಿ ಸೇರಿದಂತೆ ವಾಯವ್ಯ ಭಾರತದಲ್ಲಿ ತಾಪಮಾನ ಹೆಚ್ಚಳ ರಾಷ್ಟ್ರೀಯ ಸರಾಸರಿ ಹೆಚ್ಚಲು ಕಾರಣ. ಕೇಂದ್ರ ಭಾರತ ಎರಡನೇ ಗರಿಷ್ಠ ತಾಪಮಾನದ ಫೆಬ್ರವರಿಗೆ ಸಾಕ್ಷಿಯಾಗಿದೆ. ವಾಯವ್ಯ ಭಾರತದಲ್ಲಿ ಸರಾಸರಿ 24.86 ಡಿಗ್ರಿ ಸೆಲ್ಷಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ದೆಹಲಿಯಲ್ಲಿ ಫೆಬ್ರವರಿಯಲ್ಲಿ ಸರಾಸರಿ 27.7 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದೆ ಎನ್ನುವುದು ಹವಾಮಾನ ಇಲಾಖೆ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!