ಮೆಕ್ಸಿಕೋದಲ್ಲಿ 7.5 ತೀವ್ರತೆಯ ಭಾರಿ ಭೂಕಂಪನ; ಸುನಾಮಿ ಆತಂಕ

ಮೆಕ್ಸಿಕೋದಲ್ಲಿ 7.5 ತೀವ್ರತೆಯ ಭಾರಿ ಭೂಕಂಪನ; ಸುನಾಮಿ ಆತಂಕ

 

ಮೆಕ್ಸಿಕೋದ ಮಿಚೌಕಾನ್ ರಾಜ್ಯದ ಲಾ ಪಸಿಟಾ ಡೇ ಮೊರೆಲಾಸ್‌ನ ಆಗ್ನೇಯಕ್ಕಿರುವ ಪ್ರದೇಶದಿಂದ ಸುಮಾರು 46 ಕಿಮೀ ದೂರದಲ್ಲಿ ಅಂದಾಜು 10 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಅಮೆರಿಕದ ಭೂಕಂಪಶಾಸ್ತ್ರ ತಜ್ಞರು ತಿಳಿಸಿದ್ದಾರೆ.

 

ಮೆಕ್ಸಿಕೋ ಸಿಟಿ: ಮೆಕ್ಸಿಕೋ ದೇಶದ ಪಶ್ಚಿಮ ಭಾಗದಲ್ಲಿ ಭಾರಿ ಪ್ರಮಾಣದ ಭೂಕಂಪನ ಸಂಭವಿಸಿದೆ. ಈ ನಗರಿಯಿಂದ ಮೈಲುಗಟ್ಟಲೆ ದೂರದಲ್ಲಿರುವ ನೂರಾರು ಕಟ್ಟಡಗಳು ಅಲುಗಾಡಿದ ಅನುಭವವಾಗಿದೆ. ಕಾಕತಾಳೀಯವೆಂಬಂತೆ, 1985 ಮತ್ತು 2017ರಲ್ಲಿ ನಡೆದ ಭಾರಿ ಭೂಕಂಪನದ ವಾರ್ಷಿಕೋತ್ಸವದಂದೇ ದುರ್ಘಟನೆ ಮರುಕಳಿಸಿದೆ. ಈ ವಿಚಾರವನ್ನು ಭೂಕಂಪನಶಾಸ್ತ್ರ ತಜ್ಞರು ಸ್ಪಷ್ಟಪಡಿಸಿದ್ದಾರೆ.

 

 

ಭೂಕಂಪನದ ಕೇಂದ್ರ ಭಾಗ (ಭೂಕಂಪನವಾಗುವ ಪ್ರದೇಶದ ಮೇಲು ಭೂಮಿ) ಪೆಸಿಫಿಕ್ ಕಡಲ ತೀರದಲ್ಲಿರುವ ರಾಜ್ಯ ಮಿಚೌಕನ್‌ನ ದಕ್ಷಿಣ ಭಾಗದಲ್ಲಿತ್ತು ಎಂದು ತಿಳಿದುಬಂದಿದೆ. ಮೆಕ್ಸಿಕನ್‌ ಮಹಿಳೆಯೊಬ್ಬರು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, “ಅಬ್ಬಾ, ಇದೊಂದು ಭಯಾನಕ ಅನುಭವ” ಎಂದು ನಿಟ್ಟುಸಿರುಬಿಟ್ಟರು. ಇಲ್ಲಿಯವರೆಗೆ ಘಟನೆಯಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಮೆಕ್ಸಿಕನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

ಈ ಹಿಂದಿನ ಘಟನೆಗಳು: 1985 ಸೆಪ್ಟೆಂಬರ್‌ 19 ರಂದು ರಿಕ್ಟರ್ ಮಾಪಕದಲ್ಲಿ 8.1 ರ ತೀವ್ರತೆಯ ಭೂಕಂಪನ ಸಂಭವಿಸಿ 10 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದರು. ನೂರಾರು ಕಟ್ಟಡಗಳು ನೆಲಸಮವಾಗಿದ್ದವು. ನಂತರ 2017 ರಲ್ಲಿ ಈ ಭೂಕಂಪನದ ವಾರ್ಷಿಕೋತ್ಸವದ ದಿನವೇ ಮತ್ತೆ 7.1 ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿ 370 ಮಂದಿ ಸಾವಿಗೀಡಾಗಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version