ಬೃಹತ್ ಲೋಕ ಅದಾಲತ್ ನಲ್ಲಿ ರಾಜ್ಯಾದ್ಯಂತ 3.37 ಲಕ್ಷ ಪ್ರಕರಣ ಇತ್ಯರ್ಥ
ಬೆಂಗಳೂರು: ರಾಜ್ಯಾದ್ಯಂತ 2021ರ ಡಿ.18ರಂದು ನಡೆದ ಬೃಹತ್ ಲೋಕ ಅದಾಲತ್‍ನಲ್ಲಿ 3.37 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷ ಬಿ.ವೀರಪ್ಪ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 3.37 ಲಕ್ಷ ಪ್ರಕರಣಗಳ ಇತ್ಯರ್ಥದಿಂದ, ರಾಜ್ಯದ ಬೊಕ್ಕಸಕ್ಕೆ ದಂಡದ ರೂಪದಲ್ಲಿ 79.72 ಕೋಟಿ ರೂ.ಆದಾಯ ಬಂದಿದೆ ಮತ್ತು ಆ ಪ್ರಕರಣಗಳ ವಿಚಾರಣೆ ವೇಳೆ ನ್ಯಾಯಾಧೀಶರು ಮತ್ತು ಸಿಬ್ಬಂದಿಯ ವೇತನಕ್ಕೆ ಪಾವತಿಸಬೇಕಾಗಿದ್ದ 132.60 ಕೋಟಿ ರೂ.ಉಳಿತಾಯವಾಗಿದೆ ಎಂದರು.
ರಾಜ್ಯಾದ್ಯಂತ ಇತ್ಯರ್ಥವಾದ ವೈವಾಹಿಕ ವಿವಾದಗಳಿಗೆ ಸಂಬಂಧಿಸಿದ 1,528 ಪ್ರಕರಣಗಳ ಪೈಕಿ 37 ಪ್ರಕರಣಗಳಲ್ಲಿ ದಂಪತಿಗಳು ಮತ್ತೆ ಒಂದಾಗಿದ್ದಾರೆ. ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಅದಾಲತ್‍ನಲ್ಲಿ 142 ಕೌಟುಂಬಿಕ ಪ್ರಕರಣಗಳು ಇತ್ಯರ್ಥಗೊಂಡಿವೆ. ಅವರಲ್ಲಿ 25 ಜೋಡಿಗಳು ಒಟ್ಟಿಗೆ ವಾಸಿಸಲು ತೀರ್ಮಾನಿಸಿದ್ದಾರೆ.
ಅದೇ ರೀತಿ ಗದಗನಲ್ಲಿ 8 ಜೋಡಿಗಳು, ಧಾರವಾಡದಲ್ಲಿ 2 ಜೋಡಿಗಳು ಹಾಗೂ ಚಿತ್ರದುರ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ ಒಂದು ಜೋಡಿ ಲೋಕ ಅದಾಲತ್‍ನಲ್ಲಿ ರಾಜಿ ಸಂಧಾನದ ನಂತರ ಮತ್ತೆ ಒಂದಾಗಿವೆ ಎಂದು ನ್ಯಾ.ವೀರಪ್ಪ ತಿಳಿಸಿದರು.
ಧಾರವಾಡ ಜಿಲ್ಲೆಯಲ್ಲಿ 35 ವರ್ಷದಿಂದ ಬಾಕಿ ಉಳಿದಿದ್ದ ಆಸ್ತಿ ವ್ಯಾಜ್ಯ ಇತ್ಯರ್ಥಪಡಿಸಲಾಗಿದೆ. ಹೊಳೆನರಸೀಪುರದಲ್ಲಿ ಬಾಕಿ ಉಳಿದಿದ್ದ 22 ವರ್ಷಕ್ಕಿಂತ ಹೆಚ್ಚು ಮತ್ತು 17 ವರ್ಷ ಹಳೆಯ ಜೀವನಾಂಶ ಪ್ರಕರಣವನ್ನು ಇತ್ಯರ್ಥಗೊಳಿಸಲಾಯಿತು ಎಂದು ಹೇಳಿದರು