ವೈದ್ಯೆ ಗುರುಪ್ರೀತ್ ಕೌರ್ ಅವರನ್ನು ವಿವಾಹವಾದ ಪಂಜಾಬ್ ಸಿಎಂ ಭಗವಂತ್ ಮಾನ್
ಹೊಸದಿಲ್ಲಿ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು 32ರ ಹರೆಯದ ವೈದ್ಯೆ ಗುರುಪ್ರೀತ್ ಕೌರ್ ಅವರನ್ನು ಚಂಡೀಗಢದ ತಮ್ಮ ಮನೆಯಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಮದುವೆಯಾದರು.
ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ರಾಘವ್ ಚಡ್ಡಾ ಅವರು ಸರಳ ವಿವಾಹ ಸಮಾರಂಭದಲ್ಲಿ ಅತಿಥಿಗಳಾಗಿದ್ದರು.
ರಾಘವ್ ಚಡ್ಡಾ ಅವರು ವರನ ಧಿರಿಸು ಧರಿಸಿದ್ದ ಮುಖ್ಯಮಂತ್ರಿ ಮಾನ್ ಅವರು ಮದುವೆಯ ವಿಧಿವಿಧಾನಗಳನ್ನು ನೆರವೇರಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
48 ವರ್ಷದ ಭಗವಂತ್ ಮಾನ್ ಅವರು ಕೆಲವು ವರ್ಷಗಳಿಂದ ಪರಿಚಿತರಾಗಿರುವ ವೈದ್ಯೆ ಗುರುಪ್ರೀತ್ ಕೌರ್ ಅವರನ್ನು ಮದುವೆಯಾಗಿದ್ದಾರೆ. 32ರ ಹರೆಯದ ಗುರುಪ್ರೀತ್ ಕೌರ್ ಪಂಜಾಬ್ ಚುನಾವಣಾ ಪ್ರಚಾರದ ವೇಳೆಯೂ ಮಾನ್ ಅವರಿಗೆ ಸಹಾಯ ಮಾಡಿದ್ದಾರೆ ಎಂದು ವರದಿಯಾಗಿದೆ
ಮಾಜಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮಾನ್ ಆರು ವರ್ಷಗಳ ಹಿಂದೆ ತನ್ನ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದರು ಹಾಗೂ ಮಾನ್ ಗೆ ಇಬ್ಬರು ಮಕ್ಕಳಿದ್ದಾರೆ. ಮಾನ್ ಅವರ ಮಕ್ಕಳು ತಮ್ಮ ತಾಯಿ ಜೊತೆ ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ. ಮಕ್ಕಳಿಬ್ಬರು ಮಾರ್ಚ್ 16 ರಂದು ಮಾನ್ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದ ಸಮಾರಂಭಕ್ಕೆ ಆಗಮಿಸಿದ್ದರು.