ರೋಲ್ಸ್ ರಾಯ್ಸ್ ಕಾರಿಗೆ ತೆರಿಗೆ ವಿನಾಯಿತಿ ಕೋರಿದ್ದ ತಮಿಳು ನಟ ವಿಜಯ್ ಹೈಕೋರ್ಟ್ ಕುಟುಕು

 

ಚೆನ್ನೈ: 2012ರಲ್ಲಿ ಇಂಗ್ಲೆಂಡ್‌ನಿಂದ ಆಮದು ಮಾಡಿಕೊಂಡಿದ್ದ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿಗೆ ಪ್ರವೇಶ ತೆರಿಗೆ ವಿನಾಯಿತಿ ಕೋರಿದ್ದ ನಟ ವಿಜಯ್ ಮನವಿಯನ್ನು ತೀವ್ರವಾಗಿ ತಿರಸ್ಕರಿಸಿರುವ ಮದ್ರಾಸ್ ಹೈಕೋರ್ಟ್ ನಟರು ನಿಜ ನಾಯಕನಂತೆ ವರ್ತಿಸಬೇಕು ಎಂದು ಹೇಳಿದೆ.

 

ಅಲ್ಲದೆ ತಮಿಳುನಾಡು ಮುಖ್ಯಮಂತ್ರಿಯ ಸಾರ್ವಜನಿಕ ಪರಿಹಾರ ನಿಧಿಗೆ 1 ಲಕ್ಷ ರುಪಾಯಿ ಪಾವತಿಸುವಂತೆ ಕೋರ್ಟ್ ಸೂಚಿಸಿದೆ.

 

ನ್ಯಾಯಮೂರ್ತಿ ಎಸ್.ಎಂ.ಸುಬ್ರಮಣ್ಯಂ ತಮ್ಮ ಆದೇಶದಲ್ಲಿ ನಿಜ ನಾಯಕರು ತಮ್ಮ ತೆರಿಗೆಯನ್ನು ತ್ವರಿತವಾಗಿ ಪಾವತಿಸುತ್ತಾರೆ ಎಂದು ಹೇಳಿದರು. ಪ್ರತಿಯೊಬ್ಬ ನಾಗರಿಕನು ತೆರಿಗೆಯನ್ನು ಕರ್ತವ್ಯದಿಂದ ಸರ್ಕಾರಕ್ಕೆ ಕಟ್ಟುವುದು ಅತ್ಯಗತ್ಯ. ಅಂತಹ ಪಾವತಿ ಕಡ್ಡಾಯ ಕೊಡುಗೆಯಾಗಿದೆ ಹೊರತು ಸ್ವಯಂಪ್ರೇರಿತ ಪಾವತಿ ಅಥವಾ ದೇಣಿಗೆಯಲ್ಲ. ಬಡವರಿಗೆ ಶಾಲೆಗಳು, ಆಸ್ಪತ್ರೆಗಳು ಮತ್ತು ವಸತಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರಕ್ಕೆ ತೆರಿಗೆ ಹಣ ಬಳಕೆಯಾಗುತ್ತದೆ. ಅಲ್ಲದೆ ರೈಲ್ವೆ, ಬಂದರುಗಳಿಂದ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಹೇಳಿದರು.

 

ಇನ್ನು ವಿಜಯ್ ಸಲ್ಲಿಸಿದ ಅರ್ಜಿಯಲ್ಲಿ ತನ್ನ ಉದ್ಯೋಗವನ್ನು ತಿಳಿಸದೆ ಇರುವುದನ್ನು ನ್ಯಾಯಾಧೀಶರು ಟೀಕಿಸಿದ್ದಾರೆ. ಅರ್ಜಿದಾರರು ತಮ್ಮ ಅಫಿಡವಿಟ್ನಲ್ಲಿ ತಮ್ಮ ವೃತ್ತಿ ಅಥವಾ ಉದ್ಯೋಗವನ್ನು ಸಹ ತಿಳಿಸಿಲ್ಲ ಎಂಬುದು ಆಶ್ಚರ್ಯಕರವಾಗಿದೆ. ಇಂಗ್ಲೆಂಡ್‌ನಿಂದ ಪ್ರತಿಷ್ಠಿತ ದುಬಾರಿ ಕಾರನ್ನು ಆಮದು ಮಾಡಿಕೊಂಡಿದ್ದಾರೆ. ಆದರೆ ದುರದೃಷ್ಟವಶಾತ್ ಕಾನೂನು ಪ್ರಕಾರ ಪ್ರವೇಶ ತೆರಿಗೆಯನ್ನು ಪಾವತಿಸಿಲ್ಲ. ತೆರಿಗೆ ಪಾವತಿಸುವುದನ್ನು ತಪ್ಪಿಸಲು ಅವರು ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಖ್ಯಾತ ನಟರಾಗಿರುವ ಅರ್ಜಿದಾರರು ತೆರಿಗೆಯನ್ನು ತ್ವರಿತವಾಗಿ ಮತ್ತು ಸಮಯೋಚಿತವಾಗಿ ಪಾವತಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

 

ನಟನಿಗೆ ಬೆಳ್ಳಿಪರದೆ ಮತ್ತು ನಿಜಜೀವನದ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸಿದ ನ್ಯಾಯಾಧೀಶರು, ‘ಈ ನಟರು ಸಮಾಜದಲ್ಲಿ ಸಾಮಾಜಿಕ ನ್ಯಾಯವನ್ನು ತರಲು ತಮ್ಮನ್ನು ಚಾಂಪಿಯನ್‌ಗಳಾಗಿ ಚಿತ್ರಿಸಿಕೊಳ್ಳುತ್ತಾರೆ. ಅವರ ಸಿನಿಮಾಗಳು ಸಮಾಜದಲ್ಲಿನ ಭ್ರಷ್ಟ ಚಟುವಟಿಕೆಗಳಿಗೆ ವಿರುದ್ಧವಾಗಿರುತ್ತವೆ. ಆದರೆ ಅವರು ತೆರಿಗೆ ತಪ್ಪಿಸುತ್ತಿದ್ದಾರೆ. ಜೀವಿಸುತ್ತಿದ್ದಾರೆ. ಇದು ಕಾನೂನುಗಳ ನಿಬಂಧನೆಗಳಿಗೆ ಅನುಗುಣವಾಗಿಲ್ಲ ಎಂದರು.

 

ಅಭಿಮಾನಿಗಳು ಅಂತಹ ನಟರನ್ನು ನಿಜವಾದ ನಾಯಕನಂತೆ ನೋಡುತ್ತಾರೆ. ಅಂತಹ ನಟರು ರಾಜ್ಯದ ಆಡಳಿತಗಾರರಾಗಿರುವ ತಮಿಳುನಾಡಿನಂತಹ ರಾಜ್ಯದಲ್ಲಿ ರೀಲ್ ಹೀರೋನಂತೆ ವರ್ತಿಸುವುದು ಸರಿಯಲ್ಲ. ತೆರಿಗೆ ವಂಚನೆ ರಾಷ್ಟ್ರ ವಿರೋಧಿ ಅಭ್ಯಾಸ, ವರ್ತನೆ ಮತ್ತು ಮನಸ್ಥಿತಿ. ಅಸಂವಿಧಾನಿಕ ಎಂದು ನಿರ್ಣಯಿಸಬೇಕು ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

 

ಇಲಾಖೆಗೆ ಇನ್ನೂ ತೆರಿಗೆ ಪಾವತಿಸದಿದ್ದರೆ ಇನ್ನು ಎರಡು ವಾರಗಳಲ್ಲಿ ತೆರಿಗೆಯನ್ನು ಪಾವತಿಸುವಂತೆ ನ್ಯಾಯಾಲಯವು ನಟನಿಗೆ ನಿರ್ದೇಶನ ನೀಡಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!