ಗುಣಮಟ್ಟದ ಕಾಮಗಾರಿಗಳಿಗೆ ಒತ್ತು: ಸಚಿವ ಬಸವರಾಜು  

 

ತುಮಕೂರು- ಕೊರೊನಾ ಸಂಕಷ್ಟದ ನಡುವೆಯೂ ರಾಜ್ಯದ ಎಲ್ಲ ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಅಗತ್ಯ ಅನುದಾನ ಬಿಡ‌ಗಡೆ ಮಾಡುವ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು ತಿಳಿಸಿದರು. ‌

 

ರಾಜ್ಯದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾಗಿರುವ ನಗರ ಪ್ರದೇಶಗಳು ಸೇರಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡುವಂತೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

 

ನಗರದಲ್ಲಿ ವಿವಿಧ ಅಬಿವೃದ್ಧಿ ಕಾಮಗಾರಿಗಳ ಪರಿವೀಕ್ಷಣೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗದಿತ ಕಾಲ ಮಿತಿಯೊಳಗೆ ಸ್ಮಾರ್ಟ್‌ಸಿಟಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ಕೈಗೊಂಡಿರುವ ಕಾಮಗಾರಿಗಳ ಗುಣಮಟ್ಟ ಕಾಪಾಡಿಕೊಂಡು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸುವಂತೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

 

ಈ ಹಿಂದೆ ತಾವು ತುಮಕೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಅದರಂತೆ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ ಎಂದರು.

 

ರಾಜ್ಯದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾಗಿರುವ ನಗರಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯಲ್ಲಿ ತುಮಕೂರು 9ನೇ ಸ್ಥಾನದಲ್ಲಿದೆ. ನಿಗದಿಯಂತೆ ಕಾಮಗಾರಿಗಳು ಗುಣಮಟ್ಟದೊಂದಿಗೆ ನಡೆದಿವೆ ಎಂದರು.

 

ತಾವು ಈ ಹಿಂದೆ ಪಾರ್ಕ್‌ಗಳ ಒತ್ತುವರಿ ತೆರವುಗೊಳಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದೆ. ಅದರಂತೆ 12 ಪಾರ್ಕ್‌ಗಳ ಒತ್ತುವರಿ ತೆರವುಗೊಳಿಸಿದ್ದಾರೆ. ಇನ್ನು 13 ಪಾರ್ಕ್‌ಗಳ ಒತ್ತುವರಿ ತೆರವುಗೊಳಿಸುವ ಕಾರ್ಯ ಬಾಕಿ ಇದೆ. ಈ ಕಾರ್ಯವನ್ನು ಕೂಡಲೇ ಕೈಗೊಳ್ಳವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿರುವುದಾಗಿ ಹೇಳಿದರು.

 

ನಗರದ ಅಮಾನಿಕೆರೆ ಹಿಂಭಾಗ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿರುವ ಬಗ್ಗೆ ಹಾಗೂ ರಾಜಗಾಲು ಒತ್ತುವರಿ ಮಾಡಿಕೊಂಡು ಬಿಲ್ಡಿಂಗ್ ಕಟ್ಟಿರುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುವುದಾಗಿ ಅವರು ತಿಳಿಸಿದರು.

 

ನಗರದ ಉಪನೋಂದಣಾಧಿಕಾರಿಗಳ ಕಚೇರಿ ಮುಂಭಾಗ ಅವೈಜ್ಞಾನಿಕವಾಗಿ ರಸ್ತೆ, ಚರಂಡಿ ನಿರ್ಮಾಣವಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂಬ ಬಗ್ಗೆ ಪತ್ರಕರ್ತರು ಸಚಿವರ ಗಮನ ಸೆಳೆದಾಗ, ಸ್ಥಳದಲ್ಲೇ ಇದ್ದ ಪಾಲಿಕೆ ಆಯುಕ್ತೆ ಹಾಗೂ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆಗಿರುವ ಅವ್ಯವಸ್ಥೆಯನ್ನು ಸರಿಪಡಿಸುವಂತೆ ತಾಕೀತು ಮಾಡಿದರು.

 

ಸ್ಮಾರ್ಟ್‌ಸಿಟಿ ತುಮಕೂರು 9ನೇ ಸ್ಥಾನದಲ್ಲಿದೆ ರಾಜ್ಯದಲ್ಲಿ

 

ತಾವು ಮತ್ತೆ ತುಮಕೂರಿಗೆ ಭೇಟಿ ನೀಡುವ ವೇಳೆಗೆ ಪಾರ್ಕ್‌ಗಳ ಒತ್ತುವರಿ ತೆರವು, ಸಬ್‌ರಿಜಿಸ್ಟ್ರಾರ್ ಕಚೇರಿ ಮುಂಭಾಗದ ಅವ್ಯವಸ್ಥೆಗಳು ಸರಿ ಹೋಗಿರಬೇಕು. ಮತ್ತೆ ಈ ಬಗ್ಗೆ ದೂರುಗಳ ಕೇಳಿ ಬರಬಾರದು ಎಂದು ಅಧಿಕಾರಿಗಳು ಸೂಚನೆ ನೀಡಿದರು.

 

ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ ಕೊರೊನಾ ಸಂಕಷ್ಟದ ನಡುವೆಯೂ ಮುಖ್ಯಮಂತ್ರಿಗಳು 125 ಕೋಟಿ ರೂ. ಅನುದಾನ ನೀಡಿದ್ದಾರೆ. ಈ ಅನುದಾನದ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸದ್ಯದಲ್ಲೇ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ ಎಂದರು.

 

ತಾವು ನಗರಾಭಿವೃದ್ಧಿ ಸಚಿವನಾದ ಮೇಲೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಿಗೂ ಎರಡು-ಮೂರು ಬಾರಿ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ್ದೇನೆ. ಎಲ್ಲೆಲ್ಲಿ ನೆನೆಗುದಿಗೆ ಬಿದ್ದಿದ್ದವೋ ಅಲ್ಲೆಲ್ಲಾ ಕಾಮಗಾರಿಗಳು ಚುರುಕುಗೊಳ್ಳುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

 

3ನೇ ಅಲೆ ತಡೆಗೆ ಸಿದ್ದತೆ

 

ರಾಜ್ಯದಲ್ಲಿ ಕೊರೊನಾ 3ನೇ ಅಲೆ ಬರಲಿದೆ ಎಂಬ ಬಗ್ಗೆ ತಜ್ಞರು ವರದಿ ನೀಡಿದ್ದಾರೆ. ಅದರ ಆಧಾರದ ಮೇಲೆ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.

 

3ನೇ ಅಲೆ ಬರದೇ ಇರಲಿ, ಬಂದರೂ ಯಾರಿಗೂ ತೊಂದರೆಯಾಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದರು.

 

ಪತ್ರಿಕಾಗೋಷ್ಠಿಯಲ್ಲಿ ಜಿ.ಎಸ್. ಬಸವರಾಜು, ಶಾಸಕ ಜ್ಯೋತಿಗಣೇಶ್, ಮೇಯರ್ ಬಿ.ಜಿ. ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!