ಹೊಸಕೋಟೆ
ಗ್ರಾಪಂ ಸಭೆ ವೇಳೆ ಲಾಂಗ್ ನಿಂದ ಹಲ್ಲೆ
ಸಭೆಗೆ ಕರೆಯಲಿಲ್ಲವೆಂದು ವಾಟರ್ ಮ್ಯಾನ್ ಮೇಲೆ ಲಾಂಗ್ ನಿಂದ ಹಲ್ಲೆ
ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಬೆಂಬಲಿಗರಿಂದ ಹಲ್ಲೆ
ಹೊಸಕೋಟೆ ತಾಲೂಕು ಬೈಲನರಸಾಪುರ ಗ್ರಾಮ ಪಂಚಾಯತ್ ಸಭೆ ನಡೆಯುವ ಸಂದರ್ಭದಲ್ಲಿ ಲಾಂಗ್, ಮಚ್ಚು ಝಳಪಿಸಿದೆ. ಇಷ್ಟು ಮಾತ್ರವಲ್ಲದೇ ಗ್ರಾಪಂ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳನ್ನು ಸಭೆಗೆ ಕರೆಯಲಿಲ್ಲ ಎಂದು ರೊಚ್ಚಿಗೆದ್ದ ಕೆಲವು ಮಂದಿ ಲಾಂಗ್ ನಿಂದ ಹಲ್ಲೆ ಕೂಡ ನಡೆಸಿದ್ದಾರೆ. ಈ ಸಂಬಂಧ ದೂರು, ಪ್ರತಿ ದೂರು ದಾಖಲಾಗಿದೆ.
ಬೈಲನರಸಾಪುರ ಗ್ರಾಮ ಪಂಚಾಯತ್ ನಲ್ಲಿ ಇಂದು ಪಂಚಾಯತ್ ಸದಸ್ಯರುಗಳು ಯಾವಾಗ ಸಭೆ ಮಾಡಬೇಕು, ಯಾವ ಕೆಲಸಗಳನ್ನು ಮಾಡಬೇಕು ಎಂದು ಚರ್ಚಿಸುತ್ತಿದ್ದರು. ಈ ಸಂದರ್ಭದಲ್ಲಿ ಗ್ರಾಪಂ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ನಮ್ಮನ್ನು ಕರೆಯದೆ ಮೀಟಿಂಗ್ ಮಾಡುತ್ತಿದ್ದೀರಾ ಎಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಪಿಡಿಓ ಅವರು ಗಲಾಟೆ ಮಾಡುವವರನ್ನು ಹೊರಗೆ ಕಳುಹಿಸಿದ್ದಾರೆ.
ಬಳಿಕ ನೀರಿನ ಬಾಟಲ್ ತರಲೆಂದು ವಾಟರ್ ಮ್ಯಾನ್ ಪಂಚಾಯತ್ ಆಫೀಸ್ ನಿಂದ ಹೊರಗೆ ಹೋದಾಗ ಕೆಲವರು ಲಾಂಗ್ ಹಿಡಿದುಕೊಂಡು ಬಂದಿದ್ದಾರೆ. ವಾಟರ್ ಮ್ಯಾನ್ ಪಾಜೀಲ್ ಅಹ್ಮದ್ ಅವರ ತಲೆಗೆ ಲಾಂಗ್ ನಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಕೈ ಅಡ್ಡಿ ಮಾಡಿದಾಗ ಪಾಜೀಲ್ ಕೈಗೆ ಗಾಯವಾಗಿದೆ.
ಹಲ್ಲೆ ಮಾಡಿದ್ದನ್ನು ಪಾಜೀಲ್ ಅಣ್ಣ ಆಗಮಿಸಿ ಪ್ರಶ್ನಿಸಿದಾಗ ಆತನ ಮೇಲೂ ಲಾಂಗ್ ನಿಂದ ಹಲ್ಲೆ ಮಾಡಲಾಗಿದೆ. ನಂತರ ಇಬ್ಬರೂ ಪಂಚಾಯತ್ ಆಫೀಸ್ ಒಳಗೆ ಹೋಗಿ ಸೇರಿಕೊಂಡು ಪೊಲೀಸರಿಗೆ ಫೋನ್ ಮಾಡಿದೆವು ಎಂದು ಪಾಜೀಲ್ ಅವರು ನಂದಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆ ಸಂಬಂಧ ದೂರು, ಪ್ರತಿ ದೂರು ದಾಖಲಾಗಿದ್ದು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಲಾಂಗ್ ಹಿಡಿದು ಹೋದ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಹೇಳಲಾಗುತ್ತಿದೆ.
ಪ್ರಕರಣ ದಾಖಲಿಸಿಕೊಂಡ ನಂದಗುಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ
ಗ್ರಾಪಂ ಬೈಲನರಸಾಪುರ ಲಾಂಗ್ .
ತಲ್ವಾರ್ ಝಳಪಿಸಿದ
ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು
ಗುರುಮೂರ್ತಿ ಬೂದಿಗೆರೆ