ಉದ್ಯಮಿಗೆ ವಂಚನೆ: ಬಿಜೆಪಿ ರಾಜ್ಯ ಎಸ್ ಟಿ ಘಟಕದ ಉಪಾಧ್ಯಕ್ಷ ಆರ್.ಅನಿಲ್ ಕುಮಾರ್ ವಿರುದ್ದ ಪ್ರಕರಣ ದಾಖಲು..
ತುಮಕೂರು_ಗಣಿಗಾರಿಕೆ ಕಂಪನಿಯಲ್ಲಿ ಪಾಲುದಾರಿಕೆ ಕೊಡಿಸುವುದಾಗಿ ನಂಬಿಸಿ ತುಮಕೂರಿನ ಉದ್ಯಮಿ ಜಿ. ಶ್ರೀನಿವಾಸ ಮಿತ್ರ ಬಳಿ 6.40 ಕೋಟಿ ರೂ. ಪಡೆದು ವಂಚಿಸಿದ ಆರೋಪ ಸಂಬಂಧ ತುಮಕೂರಿನ ರಾಜ್ಯ ಬಿಜೆಪಿ ಎಸ್ ಟಿ ಘಟಕದ ಉಪಾಧ್ಯಕ್ಷ ಆರ್.ಅನಿಲ್ ಕುಮಾರ್ ಸೇರಿದಂತೆ ಐವರ ವಿರುದ್ಧ ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ಯಮಿಗಳಾದ ಕೆ.ಆರ್. ಶ್ರೀನಿವಾಸರೆಡ್ಡಿ, ಡಿ.ಆರ್.ಇಂದಿರಾ, ಬಸವರಾಜು ಹಾಗೂ ಶಶಿ ಎಂಬುವವರ ವಿರುದ್ಧ ಕ್ರಿಮಿನಲ್ ಪಿತೂರಿ, ವಂಚನೆ ಹಾಗೂ ನಂಬಿಕೆ ದ್ರೋಹ ಆರೋಪದ ಮೇರೆಗೆ ಎಫ್‌ಐಆರ್ ದಾಖಲಿಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.
ತುಮಕೂರು ಮೂಲದ ಶ್ರೀನಿವಾಸ ಮಿತ್ರ ಅವರಿಗೆ 2023ರ ಮಾರ್ಚ್‌ನಲ್ಲಿ ಬಸವರಾಜು ಹಾಗೂ ಶಶಿ ಮುಖಾಂತರ ಅನಿಲ್‌ಕುಮಾರ್ ಇತರರು ಪರಿಚಯವಾಗಿದ್ದರು. ಹೊಳಲ್ಕೆರೆ ತಾಲೂಕಿನ 210 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ವಿಟು ಎ ಐರನ್ ಮೈನಿಂಗ್ ಲಿಮಿಟೆಡ್ ಕಂಪನಿ ಗಣಿಗಾರಿಕೆ ನಡೆಸುತ್ತಿದ್ದು, 10 ಕೋಟಿ ರೂ ಬಂಡವಾಳ ಹೂಡಿದರೆ ಕಂಪನಿಯಲ್ಲಿ 25ರಷ್ಟು ಮಾಲೀಕತ್ವ ನೀಡಿ ಲಾಭ ಕೊಡಲಾಗುವುದು ಎಂದು ನಂಬಿಸಿದ್ದರು.
ಅನಿಲ್‌ಕುಮಾರ್ ಮಾತು ನಂಬಿ ಆರೋಪಿಗಳು ನೀಡಿದ್ದ ಬ್ಯಾಂಕ್ ಖಾತೆಗಳಿಗೆ 2023ರ ಏಪ್ರಿಲ್‌ನಲ್ಲಿ ಹಂತ ಹಂತವಾಗಿ 6.40 ಕೋಟಿ ರೂ. ಆರ್‌ಟಿಜಿಎಸ್ ಮುಖಾಂತರ ವರ್ಗಾವಣೆ ಮಾಡಿದ್ದೆ. 60 ಲಕ್ಷ ರೂ.ನಗದು ನೀಡಿದ್ದೆ. ಇದಾದ ಬಳಿಕ ಮೈನಿಂಗ್ ಲೈಸೆನ್ಸ್ ನಂಬರ್ ನೀಡಿದ್ದರು. ಆದರೆ ಆರೋಪಿಗಳು ನೀಡಿದ್ದ ಗಣಿಗಾರಿಕೆ ವಿಳಾಸದಲ್ಲಿ ಗಣಿಗಾರಿಕೆ ನಿಂತು ವರ್ಷಗಳೇ ಕಳೆದಿದ್ದವು ಎಂದು ದೂರುದಾರ ಆರೋಪಿಸಿದ್ದಾರೆ.
ಆರ್ ಅನಿಲ್ ಕುಮಾರ್ ಈ ಹಿಂದೆ ಜೆಡಿಎಸ್ ಪಕ್ಷದಿಂದ ಎಂಎಲ್ಸಿ ಸ್ತಾನಕ್ಕೆ ನಿಂತು ಪರಾಜಿತರಾಗಿದ್ದರು,ಆರ್.ಅನಿಲ್‌ಕುಮಾರ್ 2023ರಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.