ಹೇಮಾವತಿ ಎಕ್ಸ್ಪ್ರೆಸ್ ಕೆನಲ್ ವಿರುದ್ಧ ತುಮಕೂರು ಜಿಲ್ಲೆಯ ವಿವಿಧ ಪಕ್ಷಗಳ ನಾಯಕರ ಒಗ್ಗಟ್ಟಿನ ಹೋರಾಟ ಯಶಸ್ವಿ

ಹೇಮಾವತಿ ಎಕ್ಸ್ಪ್ರೆಸ್ ಕೆನಲ್ ವಿರುದ್ಧ ತುಮಕೂರು ಜಿಲ್ಲೆಯ ವಿವಿಧ ಪಕ್ಷಗಳ ನಾಯಕರ ಒಗ್ಗಟ್ಟಿನ ಹೋರಾಟ ಯಶಸ್ವಿ 

 

 

 

 

ತುಮಕೂರು : ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ನಾಲಾ ಯೋಜನೆ ವಿರೋಧಿಸಿ ಗುಬ್ಬಿ ತಾಲ್ಲೂಕು ಡಿ.ರಾಂಪುರ ಬಳಿ ಇರುವ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಹೋರಾಟಕ್ಕೆ ಪಕ್ಷಾತೀತವಾಗಿ ಸಾವಿರಾರು ರೈತರು ಭಾಗವಹಿಸಿ ಬೆಂಬಲ ಸೂಚಿಸಿದರು.

 

 

 

 

 

 

ಮಾಜಿ ಸಚಿವರಾದ ಸೊಗಡು ಶಿವಣ್ಣ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಮಠಾಧೀಶರ ಸಾನಿಧ್ಯ ಹಾಗೂ ಶಾಸಕರು, ಮಾಜಿ ಶಾಸಕರು, ರೈತ ಸಂಘಟನೆಗಳ ಮುಖಂಡರು, ಸ್ಥಳೀಯ ರೈತರು ಮತ್ತು ಅಪಾರ ಸಂಖ್ಯೆಯ ಸಾರ್ವಜನಿಕರು ಈ ಹೋರಾಟದಲ್ಲಿ ಭಾಗವಹಿಸಿ ಎಕ್ಸ್‌ಪ್ರೆಸ್ ಕೆನಾಲ್ ಮುಚ್ಚುವವರೆಗೂ ನಮ್ಮಗಳ ಹೋರಾಟ ನಿಲ್ಲುವುದಿಲ್ಲ ಎಂದು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.

 

 

 

 

ಪ್ರತಿಭಟನೆಯನ್ನುದ್ದೇಶಿಸಿ ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ ತುಮಕೂರು ಜಿಲ್ಲೆಗೆ ೨೪.೫ ಟಿಎಂಸಿ ಹೇಮಾವತಿ ನೀರು ಹಂಚಿಕೆಯಾಗಿದೆ, ಹಂಚಿಕೆಯಾಗಿರುವ ನೀರನ್ನೇ ಜಿಲ್ಲೆಯ ಜನರು ಪಡೆಯಲು ಸಾಧ್ಯವಾಗುತ್ತಿಲ್ಲ, ಈ ಮಧ್ಯೆ ಯಾವುದೇ ಡಿಪಿಆರ್ ಯೋಜನೆ ಮಾಡದೇ ಅನುಮೋದನೆ ಪಡೆಯದೇ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಈ ಯೋಜನೆ ಮುಂದುವರೆಯಲು ಬಿಡುವುದಿಲ್ಲ, ಮೊದಲು ಜಿಲ್ಲೆಯ ರೈತರ ಹಿತ ಕಾಪಾಡುವುದು ಅತೀ ಮುಖ್ಯ, ಸ್ವಹಿತಾಸಕ್ತಿಗಾಗಿ ರೂಪಿಸುತ್ತಿರುವ ಈ ಯೋಜನೆ ಜಿಲ್ಲೆಯ ರೈತರ ಪಾಲಿಗೆ ಮರಣಶಾಸನವಾಗಲಿದೆ, ಈ ಯೋಜನೆಯ ಸ್ಥಗಿತವಾಗುವವರೆಗೂ ಹೋರಾಟ ನಿರಂತರವಾಗಿರುತ್ತದೆಂದರು.

 

 

 

 

 

 

 

ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಮಾತನಾಡಿ ಜಿಲ್ಲೆಯಲ್ಲಿ ಸಾವಿರಾರು ಜನ ಹೋರಾಟ ಮಾಡಿ ತುಮಕೂರು ಜಿಲ್ಲೆಗೆ ಹೇಮಾವತಿ ತಂದಿದ್ದಾರೆ, ಅದರಲ್ಲಿ ವೈ.ಕೆ.ರಾಮಯ್ಯ, ಎಸ್.ಮಲ್ಲಿಕಾರ್ಜುನಯ್ಯ, ಸೊಗಡು ಶಿವಣ್ಣ ಹಾಗೂ ಇನ್ನಿತರೆ ನಾಯಕರ ಹೋರಾಟದ ಫಲವಾಗಿ ಜಿಲ್ಲೆಗೆ ಹೇಮಾವತಿ ನೀರು ಹರಿಯುತ್ತಿದೆ. ಈ ಮಧ್ಯೆ ನೀರಾವರಿ ಸಚಿವರು ಡಿ.ಕೆ.ಶಿವಕುಮಾರ್ ತಮ್ಮ ಸ್ವಹಿತಾಸಕ್ತಿಗಾಗಿ ರಾಮನಗರಕ್ಕೆ ಕೊಂಡೊಯ್ಯಲು ಮುಂದಾಗುತ್ತಿದ್ದಾರೆ, ರಕ್ತ ಕೊಟ್ಟೇವು ನೀರು ಬಿಡೆವು, ನಿಮ್ಮ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಒಂದು ರೂಪಾಯಿ ಅನುದಾನ ಬಿಡುಗಡೆ ಮಾಡಿಲ್ಲ, ಆದರೆ ಈ ಯೋಜನೆಗೆ ೨೦೦ ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಕಮೀಷನ್ ಲಪಟಾಯಿಸುವುದರ ಜೊತೆಗೆ ನಿಮ್ಮ ರಕ್ತ ಸಂಬಂಧ ಉಳಿಸಿಕೊಳ್ಳುವ ಹುನ್ನಾರ ಮಾಡುತ್ತಿದ್ದು, ತುಮಕೂರು ಜನರ ಬಾಯಿಗೆ ಮಣ್ಣು ಹಾಕಿ ನೀರು ತೆಗೆದುಕೊಂಡು ಹೋಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಹ ಸಿದ್ಧ, ತುಮಕೂರು ಜಿಲ್ಲೆಯ ಎಲ್ಲಾ ಶಾಸಕರು ಸಾಮೂಹಿಕವಾಗಿ ರಾಜೀನಾಮೆ ಕೊಡುತ್ತೇವೆ, ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆ ಬಂದ್ ಮಾಡಿ ಹೇಮಾವತಿ ಕಛೇರಿಗೆ ಬೀಗ ಹಾಕಿ ನಂತರ ಗೃಹ ಸಚಿವರ ಮನೆಯ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

 

 

 

 

 

 

 

 

ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಗುಬ್ಬಿ ತಾಲ್ಲೂಕಿನಲ್ಲಿ ಯೋಗ್ಯ ರಾಜಕಾರಣಿಗಳು ಚುನಾಯಿತರಾಗಿದ್ದರೆ, ಜನರು ಇಂದು ನೀರಿಗಾಗಿ ಹೋರಾಟ ಮಾಡುವ ಪ್ರಮೇಯ ಬರುತ್ತಿರಲಿಲ್ಲ. ಇಲ್ಲಿರುವ ರಾಜಕಾರಣಿಗಳು ಹಣ ನೋಡಿ, ಕಮೀಷನ್ ಆಸೆಗೆ ಕೆಲಸ ಮಾಡುತ್ತಿದ್ದಾರೆ. ಈ ಯೋಜನೆಗೆ ಡಿಪಿಆರ್ ಆಗಿಲ್ಲ, ಸರ್ಕಾರಿ ಆದೇಶವಿಲ್ಲ, ರೈತರಿಗೆ ನೋಟೀಸ್ ನೀಡಿಲ್ಲ, ಇವರಿಗೆ ಕಾಮಗಾರಿ ಮಾಡುವ ಅಧಿಕಾರ ಕೊಟ್ಟವರು ಯಾರು ಇವರು ಕಾಮಗಾರಿ ನಡೆಸಲಿ, ನಾವು ನಾಲೆ ಮುಚ್ಚೋಣ, ನಿಮಗೆ ತಾಕತ್ತು ಇದ್ದರೆ ತಮಿಳುನಾಡಿಗೆ ಹರಿದು ಹೋಗುತ್ತಿರುವ ಕಾವೇರಿ ನೀರನ್ನು ರಾಮನಗರಕ್ಕೆ ತರಲು ಹೋರಾಟ ರೂಪಿಸಿ, ನಿಮ್ಮ ಹೋರಾಟಕ್ಕೆ ನಾವು ಬೆಂಬಲ ಸೂಚಿಸುತ್ತೇವೆ ಎಂದು ಜಲಸಂಪನ್ಮೂಲ ಸಚಿವರ ವಿರುದ್ಧ ಹರಿಹಾಯ್ದರು. ನಾಲಾ ಮಾರ್ಗದ ಉದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಹೋರಾಟಗಾರರು ನಾಲೆಗೆ ಮೂರು ಹಿಡಿ ಮಣ್ಣು ಹಾಕಿ ಶ್ರದ್ಧಾಂಜಲಿ ಸಲ್ಲಿಸಿವುದರ ಜೊತೆಗೆ ಡಿ.ಕೆ.ಶಿವಕುಮಾರ್ ಅವರ ಶವಯಾತ್ರೆ ಮಾಡಿ, ಅದನ್ನು ನಾಲೆಯಲ್ಲಿ ವಿಸರ್ಜನೆ ಮಾಡಿ ವಿನೂತನವಾಗಿ ಪ್ರತಿಭಟಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!