ಕೇಂದ್ರದ ಅನುದಾನಕ್ಕೆ ಕಾಯದೆ ರೈತರ ನೆರವಿಗೆ ಧಾವಿಸಿ: ಮುಖ್ಯಮಂತ್ರಿ ಬೊಮ್ಮಾಯಿಗೆ ಯಡಿಯೂರಪ್ಪ ಆಗ್ರಹ
ಬೆಳಗಾವಿ: ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿಯಿಂದಾಗಿ ಕಂಡು ಕೇಳರಿಯದಂತಹ ಸಂಕಷ್ಟ ಎದುರಾಗಿದೆ. ಆದುದರಿಂದ, ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ, ಕೇಂದ್ರ ಸರಕಾರದಿಂದ ಅನುದಾನ ಬರುವವರೆಗೆ ಕಾಯದೆ ರೈತರ ನೆರವಿಗೆ ಧಾವಿಸಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ನಡೆದ ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹ ಮತ್ತು ಅತಿವೃಷ್ಟಿಯಿಂದ ರೈತರ ಬೆಳೆ, ರಸ್ತೆ, ಸೇತುವೆ, ಸರಕಾರಿ ಕಟ್ಟಡಗಳು, ಸಾರ್ವಜನಿಕ ಮನೆಗಳು ಹಾನಿಯಾಗಿದ್ದು, ಜನ ಜಾನುವಾರುಗಳ ಪ್ರಾಣ ಹಾನಿಯಾಗಿರುವುದರಿಂದ ರೈತರು ಹಾಗೂ ರಾಜ್ಯದ ಜನತೆ ಸಂಕಷ್ಟದಲ್ಲಿರುವ ಬಗ್ಗೆ ಬುಧವಾರ ನಿಯಮ 69ರಡಿಯಲ್ಲಿ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಧ್ಯಪ್ರವೇಶಿಸಿ ಅವರು ಮಾತನಾಡಿದರು.
ರೈತರ ಬೆಳೆ ಸಂಪೂರ್ಣ ನಾಶವಾಗಿದೆ. ಮುಂದಿನ ಬಿತ್ತನೆಗೆ ಅಗತ್ಯವಿರುವ ಬೀಜ ಖರೀದಿಸಲು ರೈತರ ಜೇಬಿನಲ್ಲಿ 10 ರೂ.ಇಲ್ಲದಂತಹ ವಿಚಿತ್ರವಾದ ಸಂದರ್ಭ ಇದಾಗಿದೆ. ಮುಖ್ಯಮಂತ್ರಿ ವಾಸ್ತವಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಎಲ್ಲ ಅಭಿವೃಧಿ ಕಾರ್ಯಗಳನ್ನು ನಿಲ್ಲಿಸಿ, ರೈತರು, ಕೂಲಿ ಕಾರ್ಮಿಕರ ರಕ್ಷಣೆ ಮಾಡಬೇಕು. ಇಲ್ಲಿರುವ 224 ಜನರ ಅಭಿಪ್ರಾಯವೂ ಇದೆ ಆಗಿದೆ ಎಂದು ಯಡಿಯೂರಪ್ಪ ಹೇಳಿದರು.
ರೈತರು, ಸಾಮಾನ್ಯ ಜನರು ಬೀದಿ ಪಾಲಾಗಿದ್ದಾರೆ. ರೈತರು ಮಾಡಿದ್ದ ಉಳಿತಾಯ, ದುಡಿಮೆ ಎಲ್ಲ ನಾಶವಾಗಿದೆ. ಕಳೆದ 35-40 ವರ್ಷಗಳಲ್ಲಿ ಕಂಡು ಕೇಳರಿಯದ ಪರಿಸ್ಥಿತಿಯನ್ನು ನಾವು ನೋಡುವಂತಾಗಿದೆ. ಕೇಂದ್ರದಿಂದ ಹೆಚ್ಚಿನ ಅನುದಾನ ಪಡೆಯಲು ಪ್ರಯತ್ನಿಸೋಣ. ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ಸರಕಾರದ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.