ಮಹಿಳೆಯರು ಸ್ವಾವಲಂಬಿ ಬದುಕು‌ ಕಟ್ಟಿಕೊಳ್ಳಿ: ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್

 

ಮಹಿಳೆಯರು ಸ್ವಾವಲಂಬಿ ಬದುಕು‌ ಕಟ್ಟಿಕೊಳ್ಳಿ: ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಾರ್ಚ್ 08

ಭಾರತದ ಸಂವಿಧಾನದಲ್ಲಿ ಮಹಿಳೆಯರಿಗಾಗಿ ಶೇ.33%ರಷ್ಟು ಮೀಸಲಾತಿ ಕಲ್ಪಿಸಲಾಗಿದ್ದು, ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ತಿಳಿಸಿದರು.

ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ನಡೆದ “ಜಿಲ್ಲಾ ಮಟ್ಟದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ” ಕಾರ್ಯಕ್ರಮದಲ್ಲಿ ಮಹಿಳಾ ಅಧಿಕಾರಿಗಳು, ಸಿಬ್ಬಂದಿಗೆ ಶುಭಾಶಯ ತಿಳಿಸಿ ಅವರು ಮಾತನಾಡಿದರು.

ಮಹಿಳೆಯರು ಆರ್ಥಿಕ, ಸಾಮಾಜಿಕ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದು, ಲಿಂಗ ಸಮಾನತೆಯನ್ನು ಸಾಧಿಸಿ, ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟಬೇಕಿದೆ ಎಂದರಲ್ಲದೆ, ವಿವಿಧ ಇಲಾಖೆಗಳಡಿ ಬರುವ ಮಹಿಳಾ ಯೋಜನೆಗಳ ಬಗ್ಗೆ ಅರಿವು ಮೂಡಿಸಿ, ಸೌಲಭ್ಯಗಳನ್ನು ತಲುಪಿಸಿ ಎಂದರು.

ಸಮಾಜದಲ್ಲಿ ಹೆಣ್ಣು-ಗಂಡು ಇಬ್ಬರು ಸಮಾನರಾಗಿದ್ದು, ಲಿಂಗ ಸಮಾನತೆಯನ್ನು ಸಾಧಿಸಬೇಕು ಎಂದರು. ಅಲ್ಲದೆ, ತಿಂಗಳಲ್ಲಿ ಎರಡು ಬಾರಿ ಆರೋಗ್ಯ ಶಿಬಿರಗಳನ್ನು ಆಯೋಜಿಸಿ, ಮಹಿಳೆಯರ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ. ಜಗದೀಶ್.ಕೆ.ನಾಯಕ ಅವರು ಮಾತನಾಡಿ, ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಸಬಲರಾಗಬೇಕು ಎಂದರಲ್ಲದೆ, ಶೋಷಿತ ಮಹಿಳೆಯರನ್ನು ಮುಖ್ಯ ವಾಹಿನಿಗೆ ತರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

 

  ಮಹಿಳೆಯರಿಗೆ ಅವಕಾಶ ದೊರೆತರೆ ಪುರುಷರಷ್ಟೇ ಸಮಾನವಾಗಿ ಕೆಲಸ ಮಾಡಬಲ್ಲರು. ಆದುದರಿಂದ

ಭಾರತದ ಸಂವಿಧಾನದಲ್ಲಿ ಲಿಂಗ ಸಮಾನತೆಯನ್ನು ನೀಡಲಾಗಿದೆ ಎಂದರಲ್ಲದೆ, ಮಹಿಳೆಯರು ಹೋರಾಟದ ಮನೋಭಾವ ಬೆಳೆಸಿಕೊಂಡು ತಮ್ಮ ಹಕ್ಕುಗಳನ್ನು ತಾವು ಪಡೆದುಕೊಳ್ಳಬೇಕು ಹಾಗೂ ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವ ಕೆಲಸವಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರಾದ ರೂಪ ಮರಿಯಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಬಿ.ವಿನುತಾರಾಣಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಪುಪ್ಪಲತಾ.ಜಿ.ರಾಯರ್, ಜಿಲ್ಲಾಧಿಕಾರಿ ಕಚೇರಿ ಸಹಾಯಕರಾದ ರಾಜೀವಲೋಚನ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಮಹಿಳಾ ಅಧಿಕಾರಿಗಳು ಹಾಗೂ ಮಹಿಳಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

 

ಗುರುಮೂರ್ತಿ ಬೂದಿಗೆರೆ

8861100990

Leave a Reply

Your email address will not be published. Required fields are marked *

You cannot copy content of this page

error: Content is protected !!