ಚನ್ನಪಟ್ಟಣ: ನೀರಿನ ಟ್ಯಾಂಕ್‌ನಲ್ಲಿ ಮಹಿಳೆಯ ಶವ ಪತ್ತೆ, ನೀರು ಪೂರೈಕೆ ಸ್ಥಗಿತ
ರಾಮನಗರ: ಓವರ್ ಹೆಡ್ ನೀರಿನ ಟ್ಯಾಂಕ್‌ನಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿರುವ ಘಟನೆ ಚನ್ನಪಟ್ಟಣ ನಗರದ ಕೋರ್ಟ್ ಬಳಿ ನಡೆದಿರುವುದಾಗಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಕೆಲವು ಪ್ರದೇಶಗಳಿಗೆ ನೀರು ಪೂರೈಕೆ ಸ್ಥಗಿತಗೊಂಡಿದೆ.
ನೀರಿನ ಟ್ಯಾಂಕ್ ಬಳಿ ಮಹಿಳೆಯ ಬಟ್ಟೆ ಹಾಗೂ ಚಪ್ಪಲಿ ದೊರೆತಿದೆ. ಟ್ಯಾಂಕ್ ಮೇಲೇರಿ ನೀರಿಗೆ ಬಿದ್ದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಹಿಳೆಯು ಕೆಲವು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.
ನೀರಿನ ರಭಸಕ್ಕೆ ಶವದ ಕೆಲವು ಅಂಗಗಳು ಶನಿವಾರ ಪೈಪ್ ಮೂಲಕ ಕೆಳಗೆ ಬಂದಿವೆ. ವಿಷಯ ತಿಳಿದ ಕೂಡಲೇ ಟ್ಯಾಂಕ್ ನಿಂದ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಸದ್ಯ ಪೈಪುಗಳನ್ನು ಕತ್ತರಿಸಿ ದೇಹದ ಅಂಗಾಂಗಗಳನ್ನು ಹೊರ ತೆಗೆಯುವ ಕಾರ್ಯಾಚರಣೆ ನಡೆಯಿತು.
ಟ್ಯಾಂಕರ್ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಎಚ್‌ಡಿಕೆ ಸೂಚನೆ
ಚನ್ನಪಟ್ಟಣದ ಹೊಸ ಕೋರ್ಟ್ ಹಿಂಭಾಗದಲ್ಲಿರುವ ಓವರ್ ಹೆಡ್ ಟ್ಯಾಂಕ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಸುದ್ದಿ ತಿಳಿದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಜತೆ ದೂರವಾಣಿಯಲ್ಲಿ ಮಾತನಾಡಿದ ಕ್ಷೇತ್ರದ ಶಾಸಕರೂ ಆದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೂಡಲೇ ಟ್ಯಾಂಕರ್ಗಳ ಮೂಲಕ ಜನರಿಗೆ ನೀರು ಪೂರೈಕೆ ಮಾಡುವಂತೆ ಸೂಚಿಸಿದ್ದಾರೆ.
ಓವರ್ ಹೆಡ್ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಿ, ಆ ನಂತರ ಅದರ ಸ್ವಚ್ಛತೆ ಖಾತರಿಪಡಿಸಿಕೊಂಡ ನಂತರ ಅಧಿಕಾರಿಗಳು ಅಧಿಕೃತವಾಗಿ ಹೇಳುವ ತನಕ ಯಾರೂ ಆ ಟ್ಯಾಂಕಿನ ನೀರನ್ನು ಬಳಸಬಾರದು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.