ಕುಣಿಗಲ್ ಕುದುರೆಯ ‘ಜಾಕಿ’ ಯಾರಾಗಲಿದ್ದಾರೆ?

ಕುಣಿಗಲ್ ಕುದುರೆಯ ‘ಜಾಕಿ’ ಯಾರಾಗಲಿದ್ದಾರೆ?

 

 

ಕುಣಿಗಲ್ : ವಿಧಾನಸಭಾ ಕದನ ರಂಗೇರಲಿದ್ದು,‌ ತ್ರಿಕೋನ ಪೈಪೋಟಿ ಏರ್ಪಡಲಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯ ಮೂರೂ ಪಕ್ಷಗಳ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮಾಡುತ್ತಿದ್ದಾರೆ.

 

ಐದು ವರ್ಷಗಳನ್ನು‌ ಪೂರೈಸಿ ಮತ್ತೊಮ್ಮೆ ಶಾಸಕನಾಗಬೇಕೆನ್ನುವ ಹಂಬಲದಿಂದ ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ಮನೆ ಮನೆ ಸುತ್ತುತ್ತಿದ್ದಾರೆ. ಸಂಸದ ಡಿ.ಕೆ ಸುರೇಶ್ ಗಾಡ್ ಫಾದರ್ ಆಗಿ ಬಂಬಲಕ್ಕೆ ನಿಂತಿರುವುದು ಕೂಡ ಮತ್ತೊಷ್ಟು ಶಕ್ತಿ ಬಂದಂತಾಗಿದೆ.

ಕಾಂಗ್ರೆಸ್ ನ ಈ ಕುಣಿಗಲ್ ಕುದುರೆಯ ವೇಗಕ್ಕೆ ತಡೆ‌ ನೀಡಲು ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣ ಕುಮಾರ್ ಹಗ್ಗ ಹಿಡಿದು ನಿಂತಿದ್ದಾರೆ. ಅವರ ಸಹೋದರನ ಮಗನಾದ ಜೆಡಿಎಸ್ ಅಭ್ಯರ್ಥಿ ಡಾ.ರವಿ.ಡಿ.ನಾಗರಾಜಯ್ಯ ಗೆಲ್ಲುತ್ತಾರಾ? ಅಥವಾ ಚಿಕ್ಕಪ್ಪನ ಮಗನ ಸ್ಪರ್ಧೆಯಲ್ಲಿ ಕಾಂಗ್ರೆಸ್ ಕಟ್ಟಾಳು ಡಾ.ಎಚ್.ಡಿ.ರಂಗನಾಥ್ ವಿಧಾನಸಭೆಗೆ ಹೋಗುತ್ತಾರಾ ಎಂಬುದು ಈಗ ಕುತೂಹಲದ ಸಂಗತಿ.

 

ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ.ರಂಗನಾಥ್ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಕೋವಿಡ್ ಸಂದರ್ಭದಲ್ಲಿ ಜನರ ಜೊತೆಗಿದ್ದಾರೆ. ಈ ವಿಶ್ವಾಸ ಅವರ ಕೈ ಹಿಡಿಯಲಿದೆಯಾ ಕಾದು ನೋಡಬೇಕಿದೆ. ಜೊತೆಗೆ ಈ ಮೇಲೆ ಹೇಳಿದಂತೆ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ರಂಗನಾಥ್ ಸಂಬಂಧಿ ಎನ್ನುವುದು ಕೂಡ ಇವರಿಗೆ ಪ್ಲಸ್ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮಾಜಿ ಶಾಸಕ ಬಿಬಿ ರಾಮಸ್ವಾಮಿ ಪಕ್ಷೇತರವಾಗಿ ಕಣಕ್ಕಿಳಿದಿರುವುದರಿಂದ ಕಾಂಗ್ರೆಸ್ ಮತ ಬ್ಯಾಂಕ್ ನಲ್ಲಿರುವ ಒಂದಷ್ಟು ಮತಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಳ್ಳುವ ಸಾಧ್ಯತೆ ಇರುವುದು ರಂಗನಾಥ್ ಗೆ ತಲೆನೋವಾಗಿ ಪರಿಣಮಿಸಿದೆ. ಇದರಿಂದ ಮತ್ತೊಷ್ಟು ಕ್ಷೇತ್ರ ಸಂಚಾರ ಮಾಡುವ ಮುಖಾಂತರ ಜನರೊಂದಿಗೆ ಬೆರೆತು ಪರಿಚಯಿಸಿಕೊಳ್ಳಲು ಸೆಣಸಾಡುತ್ತಿದ್ದಾರೆ. ಹೀಗೆ ಶಾಸಕರು ಆತಂಕದೊಂದಿಗೆ ವಿಶ್ವಾಸಿಗರಾಗಿ ಚುನಾವಣೆಗೆ ಸಿದ್ಧರಾಗಿದ್ದಾರೆ.

ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣ ಕುಮಾರ್ ಅವರಿಗೆ ಮಾಜಿ ಸಂಸದ ಎಸ್‌ಪಿ ಮುದ್ದಹನುಮೇ ಗೌಡ ಅವರ ಬೆಂಬಲ ಇದೆಯಾದರೂ ಟಿಕೇಟ್ ಸಿಗದ ಹತಾಶೆಯಲ್ಲಿರುವುದರಿಂದ ಗೌಡರಿಂದ ಪೂರ್ಣ ಪ್ರಮಾಣದ ಬೆಂಬಲ ನಿರೀಕ್ಷಿಸುವಂತಿಲ್ಲ. ಬಂಡಾಯದಿಂದ ಹಿಂದೆ ಸರಿದಿರುವ ಎಚ್.ಡಿ.ರಾಜೇಶ್ ಗೌಡರ ಸಪೋರ್ಟ್ ರಂಗನಾಥ್ ಗೆ ದೊರೆತಿದೆ ಎನ್ನಲಾಗಿದೆ.

ಕಳೆದ ಮೂರು ಚುನಾವಣೆಯಲ್ಲಿ ಸೋತಿರುವ ಕೃಷ್ಣ ಕುಮಾರ್ ಗೆ ಅನುಕಂಪದ ಅಲೆಯಿರುವುದಂತೂ ಸತ್ಯ. ಇದು ಎಷ್ಟರ ಮಟ್ಟಿಗೆ ವರ್ಕ್ ಆಗುತ್ತದೆ ಎಂಬುದು ಮೇ. 13ರ ನಂತರ ನೋಡಬೇಕಿದೆ.

ಜೆಡಿಎಸ್ ಅಭ್ಯರ್ಥಿ ಡಾ.ರವಿ.ಡಿ.ನಾಗರಾಜಯ್ಯ ವಿಧಾನಸಭಾ ಚುನಾವಣೆಗೆ ಮೊದಲಬಾರಿಗೆ ಧುಮುಕಿದ್ದಾರೆ. ಆದರೂ ಕ್ಷೇತ್ರಕ್ಕೆ ಇವರು ಪರಿಚಿತರಾಗಿದ್ದಾರೆ. ಜಿಪಂ ಟಿಕೇಟ್ ಪಡೆದು ಅಮೃತೂರು ಕ್ಷೇತ್ರದಿಂದ ಗೆದ್ದು ತುಮಕೂರು ಜಿಪಂ ಅಧ್ಯಕ್ಷರೂ ಆಗಿದ್ದ ಅನುಭವ ಇವರಿಗಿದೆ. ಮತ್ತು ಇವರ ತಂದೆಯ ವರ್ಚಸ್ಸು ಅನುಕೂಲ ಮಾಡಿಕೊಡಲಿದೆ.

ಬಿಜೆಪಿಯ ಆರ್ ಅಶೋಕ್ ಹಾಗೂ ಮುಂತಾದ ನಾಯಕರು ಕ್ಷೇತ್ರಕ್ಕೆ ವಿಜಯ ಸಂಕಲ್ಪ ರಥಯಾತ್ರೆಯನ್ನೂ ತರುವ ಮೂಲಕ ಸಂಚಲನ ಮೂಡಿಸಿ ಅಲೆ ಎಬ್ಬಿಸಿದ್ದರು.

ಮೂರೂ ಪಕ್ಷಗಳು ಪೈಪೋಟಿಗೆ ಬಿದ್ದಿದ್ದು, ತಾವು ಗೆಲುವಿನ ಖಾತೆ ತೆರೆಯಲು ಹರಸಾಹಸ ಪಡುತ್ತಿದ್ದಾರೆ. ಈ ಬಾರಿ ಶಾಸಕರ ಸ್ಥಾನ ಯಾರ ಕೈ ವಶವಾಗಲಿದೆ ಎಂಬುದು ಕಾದು ನೋಡಬೇಕಿದೆ.

 

 

 

ಒಟ್ಟು ಮತದಾರರು : 1,98,717

ಪುರುಷರು : 99,876

ಮಹಿಳೆಯರು : 98,838

 

2018 ರ ವಿಧಾನಸಭೆ ವುನಾವಣೆ ಫಲಿತಾಂಶ

ಡಾ.ಎಚ್.ಡಿ.ರಂಗನಾಥ್ (ಕಾಂಗ್ರೆಸ್) – 58,697

ಡಿ.ಕೃಷ್ಣ ಕುಮಾರ್ ( ಬಿಜೆಪಿ) – 53,097

ಡಿ.ನಾಗರಾಜಯ್ಯ (ದಳ) – 44,476

 

ಮತಗಳು ಪಡೆದ ಶೇಕಡಾವಾರು ಮತ ಪ್ರಮಾಣ

ಕಾಂಗ್ರೆಸ್ – 36.25

ಬಿಜೆಪಿ – 32.79

ಜೆಡಿಎಸ್ – 27.47

 

 

ಹೋಬಳಿಗಳು

ಕಸಬಾ

ಕೊತ್ತಗೆರೆ

ಹುಲಿಯೂರುದುರ್ಗ

ಹುತ್ರಿದುರ್ಗ

ಯಡಿಯೂರು ಅಮೃತೂರು

 

 

ಜಾತಿವಾರು ಲೆಕ್ಕಾಚಾರ (ಅಂದಾಜು)

ಒಕ್ಕಲಿಗರು : 82000

ಪರಿಶಿಷ್ಟ ಜಾತಿ : 27240

ಮುಸ್ಲಿಮರು‌: 19000

ಕುರುಬರು: 10000

ಪರಿಶಿಷ್ಟ ಪಂಗಡ : 4335

ಇತರೆ : 50,694

 

ತಾಲೂಕು ಪಂಚಾಯ್ತಿ ಕ್ಷೇತ್ರಗಳು ಒಟ್ಟು : 20

ಗ್ರಾಪಂ ಗಳು ಒಟ್ಟು : 36

ಕುಣಿಗಲ್ ಪುರಸಭೆ ಒಟ್ಟು : 23 ಸದಸ್ಯರು

ಕಾಂಗ್ರೆಸ್ : 16

ಬಿಜೆಪಿ : 5

ಜೆಡಿಎಸ್ : 2

Leave a Reply

Your email address will not be published. Required fields are marked *

You cannot copy content of this page

error: Content is protected !!