ಪಶ್ಚಿಮ ಬಂಗಾಳ ಚುನಾವಣೋತ್ತರ ಹಿಂಸಾಚಾರ: ಇಬ್ಬರನ್ನು ಬಂಧಿಸಿದ ಸಿಬಿಐ
ನವದೆಹಲಿ: ಪಶ್ಚಿಮ ಬಂಗಾಳದ ಚುನಾವಣೋತ್ತರ ಹಿಂಸಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಶನಿವಾರ ಇಬ್ಬರನ್ನು ಬಂಧಿಸಿದೆ.
ಕೊಲೆ ಯತ್ನ ಆರೋಪದಲ್ಲಿ ನಾದಿಯಾ ಜಿಲ್ಲೆಯಿಂದ ಬಿಜಯ್ ಘೋಷ್ ಮತ್ತು ಅಸೀಮಾ ಘೋಷ್ ಎಂಬವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾದಿಯಾ ಜಿಲ್ಲೆಯ ಛಪ್ರಾದಲ್ಲಿ ಮೇ 14ರ ರಾತ್ರಿ ಧರ್ಮಾ ಮಂಡಲ್ ಎಂಬವರ ಮೇಲೆ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಲಾಗಿತ್ತು. ಮಂಡಲ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಅಧಿಕಾರಿಗಳು 15 ಕಡೆ ಶೋಧ ನಡೆಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ 8 ಮಂದಿ ವಿರುದ್ಧ ಪ್ರಕರಣ ದಾಖಲಿಸಿದೆ. ಅಲ್ಲದೆ, ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿ ಇನ್ನೂ 10 ಎಫ್‌ಐಆರ್ ದಾಖಲಿಸಲಾಗಿದೆ. ಈವರೆಗೆ ಒಟ್ಟು 21 ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ