ಕೊರಟಗೆರೆ: ತಾಲ್ಲುಕಿನ ಜಂಪೇನಹಳ್ಳಿ ಗ್ರಾಮದ ಮಗುವಿನ ಅಂತ್ಯ ಸಂಸ್ಕಾರದ ಘಟನೆ ರಾಜ್ಯದಲ್ಲಿ ಎಲ್ಲಿಯೂ ನಡೆಯಬಾರದು. ಅಂತಹ ಘಟನೆ ನಡೆದರೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಆಯೋಗದ ಸದಸ್ಯ ಹಾಗೂ ಕಾರ್ಯದರ್ಶಿಗಳಾದ ವೆಂಕಟೇಶ ದೊಡ್ಡೇರಿ ತಿಳಿಸಿದರು.
ಅವರು ತಾಲ್ಲುಕಿನ ಜಂಪೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿ, ಸಂತ್ರಸ್ತ ಕುಟುಂಬಸ್ಥೆ ನೇತ್ರಾವತಿ ರವರ ಗುಡಿಸಲಿಗೆ ಭೇಟಿ ನೀಡಿ ಸ್ಥಳದಲ್ಲೇ ಘಟನೆಯ ಸಂಪೂರ್ಣ ವರದಿ ಪಡೆದು ಪತ್ರಕರ್ತರನ್ನುದ್ದೇಶಿಸಿ ಮಾತನಾಡಿ ಮಾರ್ಚ್ ೨೧ ರಂದು ಜಂಪೇನಹಳ್ಳಿಯ ಶಾಹಿ ಗಾರ್ಮೇಂಟ್ಸ್‌ನ ಸಕ್ಯೂರಿಟಿ ಗಾರ್ಡ್ ನಿಂದ ನಡೆದಂತಹ ಈ ಕೃತ್ಯ ನಾಗರಿಕ ಸಮಾಜ ಒಪ್ಪುವಂತದಲ್ಲ, ಪ್ರಜಾ ಪ್ರಭುತ್ವದಲ್ಲಿ ಇದು ಅತ್ಯಂತ ತಲೆ ತಗ್ಗಿಸುವಂತಹ ಘಟನೆಯಾಗಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗಗಳಿಗೆ ಅನ್ಯಾಯ, ಅವರ ಹಕ್ಕುಗಳಿಗೆ ಚ್ಯುತಿ ಬಂದಂತ ಸಂದರ್ಭದಲ್ಲಿ ನ್ಯಾಯ ಒದಗಿಸಲು, ಸರ್ಕಾರಕ್ಕೆ ವರದಿ ನೀಡಲು ಸಂವಿದಾನತ್ಮಕವಾಗಿ ೨೦೦೨ರಲ್ಲಿ ಈ ಆಯೋಗವು ರಚನೆಯಾಗಿದೆ. ಎತ್ತಿನಹೊಳೆ ಯೋಜನೆಯ ಕಾಮಗಾರಿಯಲ್ಲಿ ಕಲ್ಲು ಸ್ಪೋಟದಿಂದ ಜಂಪೇನಹಳ್ಳಿಯ ನೇತ್ರಾವತಿ ಮತ್ತು ರಂಗನಾಥ್ ದಂಪತಿಗಳ ಮೂರು ತಿಂಗಳ ಹೆಣ್ಣು ಮಗು ಸ್ಪೋಟಕ ಶಬ್ದದಿಂದ ಸಾವಿಗೀಡಾಗಿದೆ ಎಂದು ಹೇಳಲಾಗಿದ್ದು ಆ ಮಗುವನ್ನು ಶವಸಂಸ್ಕಾರ ನಡೆಸುವಾಗ ಗುಂಡಿಯಿಂದ ಹೊರತೆಗೆದು ಬೇರೆಡೆಗೆ ಕಳುಹಿಸಿದ ಸುದ್ದಿ ಪತ್ರಿಕೆಗಳಿಂದ ತಿಳಿದು ಆಕುಟುಂಬಕ್ಕೆ ಆಯೋಗ ಇರುವುದಾಗಿ ಈ ಸ್ಥಳಕ್ಕೆ ಆಗಮಿಸಿದ್ದು, ಘಟನೆ ನಡೆದ ಜಾಗಗಳನ್ನು ಪರಿಶೀಲಿಸಿದ್ದು ತಪಿತಸ್ತರ ಮೇಲೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಈ ಘಟನೆಯಿಂದ ನೊಂದಿರುವ ಕುಟುಂಬಕ್ಕೆ ಎತ್ತಿನಹೊಳೆ ಯೋಜನೆಯಡಿಯಲ್ಲಿ ಒಂದು ಲಕ್ಷ ಮತ್ತು ಇಲಾಖೆ, ಸಾರ್ವಜನಿಕರಿಂದ ೧೦ ಸಾವಿರ, ತಲಾ ಐವತ್ತು ಕೆ.ಜಿ ಅಕ್ಕಿ, ರಾಗಿ, ಗೋದಿಯನ್ನು ನೀಡಲಾಗಿದೆ. ಹಾಗೂ ಅವರು ಮನೆ ಕಟ್ಟಿಕೊಳ್ಳಲು ಅಂಬೇಡ್ಕರ್ ವಸತಿ ನಿಗಮದಿಂದ ಹಕ್ಕುಪತ್ರವನ್ನು ಸಹ ನೀಡಲಾಗಿದೆ. ಈ ಗ್ರಾಮಕ್ಕೆ ಸ್ಮಶಾನಕ್ಕಾಗಿ ಸರ್ವೇ ನಂ ೭ ರಲ್ಲಿ ಸ್ಮಶಾನಕ್ಕಾಗಿ ಹಾಗೂ ಘಟನೆ ನಡೆದ ಜಾಗವನ್ನು ಪರಿಶೀಲಿಸಿ ಅಲ್ಲಿನ ಜನರಿಗೆ ಸ್ಮಶಾನದ ಜಾಗವನ್ನಾಗಿ ಮಾಡಲು ಸ.ನಂ ೫೨/೧ರ ಮಾಲೀಕರ ಜೊತೆ ಮಾತನಾಡಿ ನದಿ ಪಾತ್ರದ ಜಾಗವನ್ನು ನೀಡಿಸಲು ಕ್ರಮ ಕೈಗೊಳ್ಳಲಾಗುವುದು.
ಈಗಿರುವ ಅಂಕಿ ಅಂಶಗಳ ಪ್ರಕಾರ ತಾಲ್ಲೂಕಿನಲ್ಲಿ ೨೫೨ ಹಳ್ಳಿಗಳ ಪೈಕಿ ಸುಮಾರು ೪೨ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಸ್ಮಶಾನ ಮಂಜೂರಾಗಬೇಕಿದೆ. ಸಮಾಜ ಕಲ್ಯಾಣ ಇಲಾಖೆಯು ಈ ಎಲ್ಲಾ ಸ್ಮಶಾನಗಳಿಗೆ ನೀರು, ತಂತಿಬೇಲಿ, ವಿದ್ಯುತ್‌ಚಕ್ತಿಯನ್ನು ಒದಗಿಸಲು ಸೂಚಿಸಿರುವುದಾಗಿ ತಿಳಿಸಿದರು. ಒಟ್ಟಾರೆ ಈ ಘಟನೆ ಇನ್ನು ಮುಂದೆ ನಡೆದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಕ್ಷೇತ್ರದ ಶಾಸಕ ಡಾ.ಜಿ ಪರಮೇಶ್ವರ ರವರು ಪತ್ರಿಕೆಯೊಂದಿಗೆ ಮಾತನಾಡಿ ಪ್ರಸ್ತುತ ಕೇರಳ ಚುನಾವಣಾ ಉತ್ಸುವಾರಿಯಲ್ಲಿದ್ದು ಘಟನೆಯ ವಿಷಯ ತಿಳಿದ ತಕ್ಷಣ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳಿಗೆ ಸೂಕ್ತ ಕ್ರಮಕೈಗೊಳ್ಳಲು ತಿಳಿಸಿದ್ದೇನೆ. ಕೇರಳದಿಂದ ಬಂದ ತಕ್ಷಣ ಕುಟುಂಬದವರನ್ನು ಬೇಟಿ ಮಾಡಿ ಘಟನೆ ನಡೆದ ಸ್ಥಳವನ್ನು ಪರಿಶೀಲಿಸಲಾಗುವುದು. ಈ ಘಟನೆಯು ಒಂದು ಅವಮಾನೀಯ ಸಂಗತಿಯಾಗಿದ್ದು ತಪಿತಸ್ಥರಿಗೆ ಶಿಕ್ಷೆಗೆ ಹಾಗೂ ನೊಂದ ಕುಟುಂಬದ ನ್ಯಾಯ ಒದಗಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು. ಮಾಜಿ ಶಾಸಕ ಪಿ.ಆರ್ ಸುಧಾಕರ್‌ಲಾಲ್ ನೊಂದ ಕುಟುಂಬದವರಿಗೆ ನ್ಯಾಯ ಒದಗಿಸುವಂತೆ ಆಯೋಗದ ಸದಸ್ಯರಿಗೆ ಮನವಿ ನೀಡಿದರು.
ಈ ಸಂಧರ್ಭದಲ್ಲಿ ಜಿ.ಪಂ ಸದಸ್ಯ ವೈ ಹೆಚ್ ಹುಚ್ಚಯ್ಯ , ತಾ.ಪಂ ಅಧ್ಯಕ್ಷ ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ತುಮಕೂರು ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಉದ್ದೇಶ್ ಟಿ.ಜೆ, ಉಪವಿಭಾಗಾಧಿಕಾರಿ ಸೋಮಪ್ಪ ಕಡಗೋಳ , ಜಿಲ್ಲಾ ಸಮಾಜಕಲ್ಯಾಣ ಇಲಾಖೆ ಜಂಟಿ ನಿದೇರ್ಶಕರು ಪ್ರೇಮಾ, ತಹಶೀಲ್ದಾರ್ ಗೋವಿಂದರಾಜು, ಇ.ಒ ಶಿವಪ್ರಕಾಶ್, ಪರಿಶಿಷ್ಟ ಜಾತಿ ಮತ್ತು ಪಂಗಡದ ಮುಖಂಡರುಗಳಾದ ಜೆಟ್ಟಿ ಅಗ್ರಹಾರ ನಾಗರಾಜು, ವೆಂಕಟೇಶ್, ದೊಡ್ಡಯ್ಯ, ಸುರೇಶ್, ಕೆ.ಆರ್ ಒಬಳರಾಜು, ಕೆವಿ ಮಂಜುನಾಥ್, ಇತರರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಚಿತ್ರ: ತಾಲ್ಲುಕಿನ ಜಂಪೇನಹಳ್ಳಿ ಗ್ರಾಮದ ಮಗುವಿನ ಸಾವು ಮತ್ತು ಶವಸಂಸ್ಕಾರದಲ್ಲಿ ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ಪರಿಹಾರ ನೀಡುತ್ತಿರುವ ಅ.ಜಾತಿ ಮತ್ತು ಅ.ಬುಡಕಟ್ಟು ಆಯೋಗದ ರಾಜ್ಯ ಸದಸ್ಯ ಕಾರ್ಯದರ್ಶಿ ವೆಂಕಟೇಶ್ ದೊಡ್ಡೇರಿ ನೀಡುತ್ತಿರುವುದು.