ಅತಿಥಿ ಉಪನ್ಯಾಸಕರಿಗೆ ರಜೆ ಸೌಲಭ್ಯ: ಸ್ಪಷ್ಟ ನಿರ್ದೇಶನಕ್ಕೆ ಆಗ್ರಹ.
ತುಮಕೂರು- ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು ಅತಿಥಿ ಉಪನ್ಯಾಸಕರುಗಳಿಗೆ ರಜೆ ಸೌಲಭ್ಯ ನೀಡದೆ ಆರೋಗ್ಯ ಸರಿ ಇಲ್ಲದಿದ್ದರೂ ಬಂದು ಕಾರ್ಯನಿರ್ವಹಿಸುವಂತೆ ಸೂಚಿಸುತ್ತಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರಿಗೆ ಇರುವ ಸೌಲಭ್ಯಗಳ ಕುರಿತು ಒಂದು ಸ್ಪಷ್ಟ ನಿರ್ದೇಶನವನ್ನು ಕಾಲೇಜುಗಳ ಪ್ರಾಂಶುಪಾಲರಿಗೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟದ ಸಂಚಾಲಕ ಲೋಕೇಶ್ ಪಿ.ಸಿ. ಆಗ್ರಹಿಸಿದ್ದಾರೆ.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸರ್ಕಾರ ವಾರಕ್ಕೆ 15 ಗಂಟೆಗಳಂತೆ ಆದೇಶಿಸಿದೆ. ಆದರೆ ಕಾಲೇಜುಗಳಲ್ಲಿ ಪ್ರಾಂಶುಪಾಲರು ಹೇಳುವ ಇನ್ನಿತರೆ ಶೈಕ್ಷಣಿಕ ಕೆಲಸಗಳನ್ನು ಹೆಚ್ಚುವರಿಯಾಗಿ ನಿರ್ವಹಿಸಲು ಸೂಚಿಸಿದೆ. ಅದನ್ನೇ ಆಧಾರವಾಗಿಟ್ಟುಕೊಂಡು ರಾಜ್ಯದ ಬಹುತೇಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ಬೆಳಿಗ್ಗೆ 9 ಗಂಟೆಗೆ ಬಂದು ಸಂಜೆ 4 ಗಂಟೆವರೆಗೂ ಕಡ್ಡಾಯವಾಗಿ ಇರಬೇಕೆಂದು ಪ್ರಾಂಶುಪಾಲರುಗಳು ಆದೇಶಿಸಿದ್ದಾರೆ.
ಹಾಗಾದರೆ ಸರ್ಕಾರ ಅತಿಥಿ ಉಪನ್ಯಾಸಕರನ್ನು ಪೂರ್ಣಕಾಲಿಕ ಉಪನ್ಯಾಸಕರಾಗಿ ಯಾವ ರೀತಿಯಲ್ಲಿ ಕಡಿಮೆ ಎಂದು ಪರಿಗಣಿಸಿ 26000, 28000, 30000 ಹಾಗೂ 32000 ವೇತನವನ್ನು ನಿಗದಿಪಡಿಸಿದೆ. ಏಕೆಂದರೆ ಪೂರ್ಣಕಾಲಿಕ ಉಪನ್ಯಾಸಕರು ಕಾಲೇಜಿನಲ್ಲಿ 42 ಗಂಟೆಗಳು ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಯುಜಿಸಿ ನಿಯಮದಂತೆ ಲಕ್ಷಗಟ್ಟಲೆ ವೇತನ ನೀಡುವುದರ ಜತೆಗೆ ಸಾಂದರ್ಭಿಕ ರಜೆ, ವಿಶೇಷ ಸಾಂದರ್ಭಿಕ ರಜೆ ಮತ್ತಿತರೆ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ ಅವರಂತೆ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಈ ಸೌಲಭ್ಯಗಳು ಇಲ್ಲದ ಕಾರಣ ವೈಯುಕ್ತಿಕ ಆರೋಗ್ಯ ಸಮಸ್ಯೆಯಾದರೂ ಕೂಡ ಅವರು ಕಾಲೇಜಿಗೆ ಬಂದು ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅವರು ಹೇಳಿದ್ದಾರೆ.
ಶೈಕ್ಷಣಿಕ ಕಾರ್ಯಗಳಲ್ಲಿ ಒಂದಾದ ಪರೀಕ್ಷೆಗೆ ಸಂಬಂಧಿಸಿದ ಇತರ ಚಟುವಟಿಕೆಗಳಿಗೆ ಭಾಗಿಯಾದ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ವೇತನವನ್ನು ಕಡಿತಗೊಳಿಸಲು ಅನೇಕ ಕಾಲೇಜುಗಳಲ್ಲಿ ಮುಂದಾಗಿದ್ದು ಕಂಡು ಬಂದಿದೆ. ಹಾಗಾದರೆ ಉಪನ್ಯಾಸಕರ ನಿಜವಾದ ಕಾರ್ಯವಾದರೂ ಏನು ಎಂಬುದು ಅರ್ಥವಾಗದ ವಿಭಿನ್ನ ಸಮಸ್ಯೆಯಾಗಿದೆ. ಇನ್ನಿತರ ಸಮಸ್ಯೆಗಳನ್ನು ಅತಿಥಿ ಉಪನ್ಯಾಸಕರು ಎದುರಿಸುತ್ತಿದ್ದು, ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡಿರುವುದು ಶೈಕ್ಷಣಿಕ ಕಾರ್ಯಭಾರದ ಹಂಚಿಕೆಗಾಗಿ ವಿನಃ ಅವರನ್ನು ಜೀತದಾಳುಗಳಂತೆ ದುಡಿಸಿಕೊಳ್ಳಲು ಅಲ್ಲ ಎಂಬುದನ್ನು ಇಲಾಖೆ ಕಡ್ಡಾಯವಾಗಿ ಪ್ರತಿ ಕಾಲೇಜಿನ ಪ್ರಾಂಶುಪಾಲರಿಗೆ ಸ್ಪಷ್ಟಪಡಿಸುವಂತೆ ಅವರು ಒತ್ತಾಯಿಸಿದ್ದಾರೆ.
ಪ್ರಸ್ತುತ ಜಾರಿಗೆ ತಂದಿರುವ ನಿಯಮಗಳನ್ನು ಸರಿಪಡಿಸಿ ಕಾಲೇಜು ಶಿಕ್ಷಣ ಇಲಾಖೆ ಹೊಸ ನಿಯಮಾವಳಿಗಳ ಸುತ್ತೋಲೆಯನ್ನು ಈ ಕೂಡಲೇ ಜಾರಿಗೆ ತರಬೇಕು ಎಂದು ಮನವಿ ಮಾಡಿರುವ ಅವರು, ಕಾಲೇಜಿನಲ್ಲಿ ಒಂಬತ್ತರಿಂದ ನಾಲ್ಕು ಗಂಟೆವರೆಗೂ ಇರುವ ಕುರಿತು ಹಾಗೂ ಅತಿಥಿ ಉಪನ್ಯಾಸಕರ ರಜೆ ಅವಧಿ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಬಿಡುಗಡೆಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.