ದಲಿತ ಮಹಿಳೆ ಸಿದ್ಧಪಡಿಸಿದ ಮಧ್ಯಾಹ್ನದೂಟಕ್ಕೆ ಮೇಲ್ವರ್ಗದ ವಿದ್ಯಾರ್ಥಿಗಳ ಬಹಿಷ್ಕಾರ !
ಡೆಹ್ರಾಡೂನ್: ದಲಿತ ಮಹಿಳೆ ಸಿದ್ಧಪಡಿಸಿದ ಬಿಸಿಯೂಟವನ್ನು ಹಿಂದೂ ಮೇಲ್ವರ್ಗದ ವಿದ್ಯಾರ್ಥಿಗಳು ಬಹಿಷ್ಕರಿಸಿದ ಘಟನೆ ಉತ್ತರಾಖಂಡದ ಚಂಪಾವತ್ ಜಿಲ್ಲೆಯಿಂದ ವರದಿಯಾಗಿದೆ.
ಇದು ರಾಜ್ಯದಲ್ಲಿ ವ್ಯಾಪಕವಾಗಿರುವ ಸಾಮಾಜಿಕ ತಾರತಮ್ಯ ಮತ್ತು ಜಾತಿ ಪೂರ್ವಾಗ್ರಹದ ಬಗ್ಗೆ ವಿವಾದ ಹುಟ್ಟುಹಾಕಿದೆ.
ಚಂಪಾವತ್ ಜಿಲ್ಲೆಯ ಸುಖೀಧಂಗ್ ಪ್ರದೇಶದ ಜೂಲ್ ಗ್ರಾಮದ ಸರ್ಕಾರಿ ಮಾಧ್ಯಮಿಕ ಶಾಲೆಯ ಭೋಜನ ಮಾತಾ ಹುದ್ದೆಗೆ ದಲಿತ ಮಹಿಳೆ ಸುನೀತಾ ದೇವಿಯವರನ್ನು ಇತ್ತೀಚೆಗೆ ನೇಮಕ ಮಾಡಲಾಗಿತ್ತು. ಆರರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಊಟ ಸಿದ್ಧಪಡಿಸುವ ಹೊಣೆಯನ್ನು ಇವರಿಗೆ ವಹಿಸಲಾಗಿತ್ತು.
“ಇವರು ಕರ್ತವ್ಯಕ್ಕೆ ಹಾಜರಾದ ದಿನ ಮೇಲ್ವರ್ಗದ ವಿದ್ಯಾರ್ಥಿಗಳು, ಇವರೇ ಸಿದ್ಧಪಡಿಸಿದ ಬಿಸಿಯೂಟ ಸವಿದಿದ್ದರು. ಆದರೆ ಮರುದಿನದಿಂದ ಊಟ ಬಹಿಷ್ಕರಿಸಿದರು” ಎಂದು ಸರ್ಕಾರಿ ಜಂಟರ್ ಕಾಲೇಜು ಪ್ರಾಂಶುಪಾಲ ಪ್ರೇಮ್‌ಸಿಂಗ್ ವಿವರಿಸಿದರು.
“ವಿದ್ಯಾರ್ಥಿಗಳು ಬಿಸಿಯೂಟ ಬಹಿಷ್ಕರಿಸಿದ್ದೇಕೆ ಎನ್ನುವುದು ನಮ್ಮ ಕಲ್ಪನೆಗೆ ನಿಲುಕದ್ದು. ಒಟ್ಟು 57 ವಿದ್ಯಾರ್ಥಿಗಳ ಪೈಕಿ ಪರಿಶಿಷ್ಟ ಜಾತಿಗೆ ಸೇರಿದ ಕೇವಲ 16 ವಿದ್ಯಾರ್ಥಿಗಳು ಮಾತ್ರ ಊಟ ಮಾಡುತ್ತಿದ್ದಾರೆ” ಎಂದು ವಿವರಿಸಿದರು.
ಶಾಲೆಯಲ್ಲಿ ಅಡುಗೆಯವರ ಎರಡು ಹುದ್ದೆಗಳಿದ್ದು, ಶಕುಂತಲಾ ದೇವಿ ಎಂಬ ಮಹಿಳೆ ನಿವೃತ್ತರಾದಾಗ ಸುನೀತಾ ದೇವಿಯವರನ್ನು ನೇಮಕ ಮಾಡಲಾಗಿತ್ತು. ಸರ್ಕಾರದ ನಿಯಮಾವಳಿ ಅನ್ವಯ ಅವರನ್ನು ನೇಮಕ ಮಾಡಲಾಗಿದೆ ಎಂದು ಸಿಂಗ್ ಸಮರ್ಥಿಸಿಕೊಂಡಿದ್ದಾರೆ.
“ಭೋಜನಮಾತಾ ಹುದ್ದೆಗೆ 11 ಅರ್ಜಿಗಳು ಬಂದಿದ್ದವು. ಪೋಷಕ ಶಿಕ್ಷಕ ಸಂಘದ ಮುಕ್ತ ಸಭೆಯಲ್ಲಿ ಮತ್ತು ಶಾಲಾ ನಿರ್ವಹಣಾ ಸಮಿತಿ ಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ” ಎಂದು ಹೇಳಿದ್ದಾರೆ.
ಶಾಲೆಯಲ್ಲಿ 230 ವಿದ್ಯಾರ್ಥಿಗಳಿದ್ದು, 6 ರಿಂದ 8ನೇ ತರಗತಿವರೆಗಿನ 66 ವಿದ್ಯಾರ್ಥಿಗಳ ಪೈಕಿ 40 ಮಂದಿ ಮೇಲ್ವರ್ಗದವರು. ಡಿಸೆಂಬರ್ 13ರಂದು ಸುನಿತಾ ದೇವಿ ಕರ್ತವ್ಯಕ್ಕೆ ಸೇರಿದ ಮರುದಿನದಿಂದ ಈ ವಿದ್ಯಾರ್ಥಿಗಳು ಬಿಸಿಯೂಟ ಬಹಿಷ್ಕರಿಸಿ, ಮನೆಯಿಂದ ಊಟ ತರುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
“ಎಲ್ಲ ಅರ್ಹತೆ ಇದ್ದ ಪುಷ್ಪಾ ಭಟ್ ಎಂಬ ಮಹಿಳೆಯನ್ನು ನಾವು ಆಯ್ಕೆ ಮಾಡಿದ್ದೆವು. ಅವರಿಗೆ ಅಗತ್ಯತೆಯೂ ಇತ್ತು. ಆದರೆ ಪ್ರಾಚಾರ್ಯರು ದಲಿತ ಮಹಿಳೆ ಸುನೀತಾ ದೇವಿಯನ್ನು ಈ ಹುದ್ದೆಗೆ ಆಯ್ಕೆ ಮಾಡಿದರು” ಎಂದು ಶಾಲಾ ಶಿಕ್ಷಕ ಪೋಷಕ ಸಂಘದ ಅಧ್ಯಕ್ಷ ನರೇಂದ್ರ ಜೋಶಿ ಆಪಾದಿಸಿದ್ದಾರೆ.
ಮೇಲ್ವರ್ಗದ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಇರುವ ಕಾರಾಣ ಮೇಲ್ವರ್ಗದ ಮಹಿಳೆಯನ್ನೇ ನೇಮಕ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.