ದೇಶದಲ್ಲಿ ಅವಕಾಶವಿರುವುದು ರಾಜ್ಯಾಂಗಕ್ಕೆ ಮಾತ್ರ, ಪಂಚಾoಗಕ್ಕಲ್ಲ
ತುಮಕೂರು:ದೇಶದಲ್ಲಿ ಪಂಚಾoಗ ಜಾರಿಯಾಗುತ್ತಿದೆಯೇ ಹೊರತು,ರಾಜ್ಯಾಂಗವಲ್ಲ.ಬುದ್ದ, ಅಂಬೇಡ್ಕರ್, ಬಸವಣ್ಣ ಹುಟ್ಟಿದ ನಾಡಿನಲ್ಲಿ ಪಂಚಾoಗ ನಡೆಯುವುದಿಲ್ಲ ಎಂಬುದನ್ನು ಈ ವೇದಿಕೆಯ ಮೂಲಕ ಸಾರಿ ಹೇಳಬೇಕಾಗಿದೆ ಎಂದು ಚಿಂತಕ ಹಾಗೂ ಉಪನ್ಯಾಸಕ ಡಾ.ವಡ್ಡಗೆರೆ ನಾಗರಾಜಯ್ಯ ತಿಳಿಸಿದ್ದಾರೆ.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆದ ಜಿಲ್ಲಾ ಮಾದಿಗರ ಸ್ವಾಭಿಮಾನಿ ಸಮಾವೇಶ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ, ಗ್ರಾಮ ಪಂಚಾಯತಿ ಸದಸ್ಯರಿಗೆ ಅಭಿನಂದನಾ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶೇ೪ ರಷ್ಟಿರುವ ಜನ ಶೇ೧೦ರಷ್ಟು ಮೀಸಲಾತಿಯನ್ನು ಯಾವುದೇ ಹೋರಾಟವಿಲ್ಲದೆ ಪಡೆದು ಅನುಭವಿಸುತ್ತಿದ್ದಾರೆ.ಆದರೆ ಶೇ ೬೦ ರಷ್ಟಿರುವ ದಲಿತರಿಗೆ ಶೇ ೧೫ ರಷ್ಟು ಮೀಸಲಾತಿ ಪಡೆದು,ಅವಕಾಶಗಳಿಂದ ವಂಚಿತರಾಗುತ್ತಿದ್ದೇವೆ.ಇದರ ಬಗ್ಗೆ ಯುವ ಜನರಲ್ಲಿ ಜಾಗೃತಿ ಮೂಡಿದಾಗ ಮಾತ್ರ ಇದು ನಿಜವಾಗಿಯೂ ಸ್ವಾಭಿಮಾನಿ ಸಮಾವೇಶವಾಗಲಿದೆ ಎಂದರು.
ಕಶಪ ಮಾತಂಗ ಮುನಿಯ ದಾರಿಯಲ್ಲಿ ಬುದ್ಧ,ಬಸವ,ಅಂಬೇಡ್ಕರ್ ಅವರಂತೆ ಮಾದಿಗ ಸಮುದಾಯ ನಡೆದಾಗ ಮಾತ್ರ ರಾಜಕೀಯ ಅಧಿಕಾರ ಪಡೆಯಲು ಸಾಧ್ಯ, ಅಂಬೇಡ್ಕರ್ ಅವರ ಆಶಯವು ಸಹ ಬುದ್ಧನ ಹಾದಿಯಲ್ಲಿ ದೇಶದ ರಾಜಕಾರಣ ನಡೆಯಬೇಕು ಎಂಬುದಾಗಿತ್ತು.ರಾಜಕೀಯ ಅಧಿಕಾರ ಪಡೆದು,ಬ್ರಾಹ್ಮಣ್ಯವನ್ನು ಅಪ್ಪಿಕೊಳ್ಳುವ, ಅವರಿಗೆ ಗುಲಾಮರಾಗಿ ಬದುಕುವ ಮುನಿಗಳಾಗಲಿ, ರಾಜಕಾರಣಿಗಳಾಗಲಿ ನಮಗೆ ಅಗತ್ಯವಿಲ್ಲ.ಬುದ್ದ,ಬವಣ್ಣ, ಅಂಬೇಡ್ಕರ್ ಅವರಂತೆ ತನ್ನನ್ನು ತಾನು ಆತ್ಮವಿಮರ್ಶೆ ಮಾಡಿಕೊಂಡು,ತಾನು ಹುಟ್ಟಿ, ಬೆಳೆದ ಪರಿಸರದ ಬಗ್ಗೆ ಕೀಳಿರಿಮೆಯಿಲ್ಲದೆ,ಅದನ್ನೇ ಒಪ್ಪಿಕೊಂಡು, ಅಪ್ಪಿಕೊಂಡು, ಸಮುದಾಯದ ಜೊತೆ ಬೇರೆತು ಕೆಲಸ ಮಾಡುವ ಧರ್ಮಗುರುಗಳು, ರಾಜಕಾರಣಿಗಳ ಅಗತ್ಯವಿದೆ ಎಂದು ಡಾ.ವಡ್ಡಗೆರೆ ನಾಗರಾಜಯ್ಯ ನುಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಪರ ಕಾರ್ಯದರ್ಶಿ ಅನಿಲ್ ಕುಮಾರ್.ಬಿ.ಎಚ್ ಮಾತನಾಡಿ, ಮಾದಿಗ ಸಮುದಾಯದೊಳಗಿನ ಒಡಕನ್ನು ಸರಿಪಡಿಸಿಕೊಂಡು ರಾಜ್ಯಕ್ಕೆ ತುಮಕೂರು ಜಿಲ್ಲೆ ಮಾದರಿಯಾಗಿದೆ.ಇಂದು ಸಮುದಾಯಕ್ಕೆ ಗುರು ಇದ್ದಾರೆ,ಗುರಿಯೂ ಇದೆ.ಅದನ್ನು ಕಾರ್ಯಗತಗೊಳಿಸಲು ಸಮುದಾಯದ ಎಲ್ಲರು ಸಹಕಾರ ನೀಡಬೇಕು.ಜಿಲ್ಲೆಯಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಮಾದಿಗ ಸಮುದಾಯವಿದ್ದರೂ,ಅದನ್ನು ಶಕ್ತಿಯುತವಾಗಿ ಕಟ್ಟಲು ಯಾರು ಪ್ರಯತ್ನ ಮಾಡಿಲ್ಲ, ಎಪ್ಪತ್ತೈದು ವರ್ಷಗಳಲ್ಲಿ ಸರಕಾರ ನೀಡಿರುವ ಸೌಲಭ್ಯಗಳನ್ನು ಸಮುದಾಯ ಪಡೆದುಕೊಂಡಿಲ್ಲ.ಇoದಿನ ಸ್ಪರ್ಧಾತ್ಮಕ ಸಮಯದಲ್ಲಿ ಮಾದಿಗ ಸಮುದಾಯ ಒಗ್ಗಟ್ಟಿನ ಹೋರಾಟ ಮಾಡಬೇಕಿರುವುದು ಅವಶ್ಯಕ ಎಂದರು.
ಶೋಷಿತ ಸಮುದಾಯಗಳು ಅಭಿವೃದ್ಧಿ ಶೋಷಿತರಿಂದ ಮಾತ್ರ ಸಾಧ್ಯ.ಬೇರೆ ಸಮುದಾಯಗಳು ಅಭಿವೃದ್ಧಿ ಮಾಡುತ್ತವೆ ಎನ್ನುವ ಭ್ರಮೆಯಿಂದ ಹೊರಬಂದು,ಒಗ್ಗಟ್ಟಾಗಿ ಹೋರಾಟ ಮಾಡಿದಾಗ ಮಾತ್ರ ಸಾಧ್ಯ ಎನ್ನುವುದನ್ನು ಸಮುದಾಯ ಅರಿತುಕೊಳ್ಳಬೇಕು, ಸಮುದಾಯದ ಅಭಿವೃದ್ಧಿ ಸಂಘಟಿತ ಪ್ರಯತ್ನ ಮಾಡಬೇಕಿದೆ ಎಂದು ಅನಿಲ್ ಕುಮಾರ್ ಸಲಹೆ ನೀಡಿದರು.
ಲೇಖಕರಾದ ಪ್ರೊ.ಅರವಿಂದ ಮಾಲಗತ್ತಿ ಮಾತನಾಡಿ,ಸಮುದಾಯ ಯಾವ ಕಡೆ ಇದೆ ಎನ್ನುವ ಪ್ರಶ್ನೆಯೇ ದಾರಿದೀಪವಾಗಿ, ಗುರುಗಳ ಮಾರ್ಗದರ್ಶನದಲ್ಲಿ ಸಮುದಾಯದ ಅಭಿವೃದ್ಧಿಯಾಗಲಿದೆ ಎಂದ ಅವರು,ವೇದ,ಸ್ಮೃತಿ, ಬ್ರಾಹ್ಮಣ್ಯದಲ್ಲಿ ನಿರ್ದಿಷ್ಟವಾಗಿ ಸಮುದಾಯವನ್ನು ಗುರುತಿಸಿಲ್ಲ,ಮೇಲ್ವರ್ಗದವರು ಬರೆಯುವಾಗ ತಳ ಸಮುದಾಯಗಳ ಒಳ ಪಂಗಡಗಳ ಬಗ್ಗೆ ಉಲ್ಲೇಖಿಸದೇ ಕಡೆಗಣಿಸಲಾಗಿದೆ.ಯಜ್ಞದಲ್ಲಿ ಬಲಿ ನೀಡುತ್ತಿದ್ದ ಪ್ರಾಣಿಯ ಅಂಗಾoಗವನ್ನು ೩೬ ಭಾಗ ಮಾಡಿ,ಎಲ್ಲ ಜಾತಿಗಳಿಗೆ ನೀಡಲಾಗುತ್ತಿತ್ತು, ಮುಂದೆ ಅದೇ ಗೋವಿನಲ್ಲಿ ೩೬ ಸಾವಿರ ಕೋಟಿ ದೇವರು ನೆಲೆಗೊಳ್ಳಲು ಕಾರಣವಾಯಿತು,ಬ್ರಾಹ್ಮಣರು ಹೇಳುವ ಬ್ರಹ್ಮ ಜಾಂಭವ ಮುನಿಯ ಪಡಿಯಚ್ಚು ಎಂದು ಅಭಿಪ್ರಾಯಪಟ್ಟ ಅವರು,ಮತಂಗ ಪರಂಪರೆಯಲ್ಲಿಯೂ ಜಾಂಭವoತನೇ ಸೃಷ್ಟಿಯ ಮೂಲ ಕರ್ತ ಎಂದರು.
ಮತoಗ ಮುನಿಗಳು ರಾಜರಾಗಿ ಆಳಿದವರು.ಆದರೆ ಇಂದು ಮಾತಂಗ ಸಮುದಾಯ ಜೀತದವರಾಗಿದ್ದಾರೆ, ಎಡ-ಬಲದ ವರ್ಗೀಕರಣ ಸಾಂಪ್ರದಾಯಿಕವಾಗಿ ನೋಡಿದ್ದರಿಂದ ತಪ್ಪಾಗಿ ವ್ಯಾಖ್ಯಾನಿಸಲಾಗಿದೆ.ಎಡ-ಬಲ ಮಾತಂಗರ ಆಡಳಿತದ ಪ್ರತಿಬಿಂಬ, ಎಡ-ಬಲ ಸಮುದಾಯದೊಂದಿಗೆ ಆಡಳಿತ ನಡೆಸಿದ ರೀತಿ ಇದು ಎಂದು ಅರವಿಂದ ಮಾಲಗತ್ತಿ ವ್ಯಾಖ್ಯಾನಿಸಿದರು.
ಕಾರ್ಯಕ್ರಮದಲ್ಲಿ ಮಾರ್ಕಂಡೇಯ ಮುನಿಸ್ವಾಮೀಜಿ, ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ, ಷಡಕ್ಷರಿ ಮುನಿ ಸ್ವಾಮೀಜಿ, ಮಾಜಿ ಶಾಸಕರಾದ ಗಂಗಹನುಮಯ್ಯ, ತಿಮ್ಮರಾಯಪ್ಪ, ಜಿ.ಪಂ.ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಸದಸ್ಯರಾದ ಕೆಂಚಮಾರಯ್ಯ,ಡಾ.ವೈ.ಕೆ.ಬಾಲಕೃಷ್ಣಪ್ಪ, ಡಾ.ಮುರುಳೀಧರ,ಪಾವಗಡ ಶ್ರೀರಾಮ್,ಡಾ.ಓ.ನಾಗರಾಜಯ್ಯ, ನರಸಿಂಹಮೂರ್ತಿ, ಶಿವನಂಜಪ್ಪ, ಮಾರುತಿ ಗಂಗಹನುಮಯ್ಯ, ವಾಲೆಚಂದ್ರಯ್ಯ, ನರಸೀಯಪ್ಪ, ಎಂ.ಸಿ.ನರಸಿ0ಹಮೂರ್ತಿ, ಎಂಜನಿಯರ್ ಚಿಕ್ಕಣ್ಣ,ತೋಟಗಾರಿಕೆ ಇಲಾಖೆಯ ಚಿಕ್ಕಣ್ಣ, ರಂಗಶಾಮಯ್ಯ,ಯೋಗೀಶ್ ಸೋರೆಕುಂಟೆ,ಜಟ್ಟಿ ಅಗ್ರಹಾರ ನಾಗರಾಜು, ರಂಜನ್,ಗಣೇಶ್,ಗುರುಪ್ರಸಾದ್ ಕಂಟಲಗೆರೆ, ಲಕ್ಷ್ಮೀರಂಗಯ್ಯ, ಮುಕುಂದ್,ರoಗಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.