ತುಮಕೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ, ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಮುರಳೀಧರ ಹಾಲಪ್ಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಎಸ್ಪಿ ರಾಹುಲ್‌ಕುಮಾರ್ ಶಹಪುರ್ ವಾಡ್ ಅವರನ್ನು ಶುಕ್ರವಾರ ಭೇಟಿ ಮಾಡಿ, ಅಭಿನಂದಿಸಿ ನಂತರ ಸಮಾಲೋಚನೆ ನಡೆಸಿದ ಅವರು, ಕೋವಿಡ್‌ನಿಂದ ಕೆಲಸ ಕಳೆದುಕೊಂಡು ಗ್ರಾಮಗಳಿಗೆ ತೆರಳಿದ ಕೆಲ ಯುವಕರು ದುಶ್ಚಟಗಳಿಗೆ ದಾಸರಾಗಿ, ಇಸ್ಪೀಟ್, ಮಟ್ಕಾ ದಂಧೆ, ಡ್ರಗ್ಸ್ ಸೇರಿದಂತೆ ಹಲವು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದರು.
ಪ್ರತಿ ತಾಲ್ಲೂಕಿನಲ್ಲಿ ತಿಂಗಳಿಗೊಮ್ಮೆ ಜನ ಸಂಪರ್ಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಜನರಿಗೆ ಆತ್ಮವಿಶ್ವಾಸ ನೀಡುವುದರ ಜೊತೆಗೆ ಅವರ ಸಮಸ್ಯೆಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು, ಕಲ್ಲು ಮತ್ತು ಮರಳು ಗಣಿಗಾರಿಕೆ ಹಾಗೂ ಇಸ್ಪೀಟ್ ಅಡ್ಡೆಗಳನ್ನು ಹತೋಟಿಗೆ ತರಬೇಕೆಂದು ಮನವಿ ಮಾಡಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ವಿರುದ್ದ ಕ್ರಮಕೈಗೊಳ್ಳಬೇಕಾಗಿದೆ.
ಶಾಲಾ-ಕಾಲೇಜುಗಳಲ್ಲಿ ಪೊಲೀಸ್ ಸಿಬ್ಬಂದಿಗಳೊAದಿಗೆ ಸಂವಾದ ಹಾಗೂ ನಾಗರೀಕರೊಂದಿಗೆ ಸಭೆಗಳನ್ನು ನಡೆಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು, ಇಡೀ ಜಿಲ್ಲೆಯಲ್ಲಿ ಹಳೆಯ ಮಾದರಿ ಪೊಲೀಸ್ ಸ್ಟೇಷನ್‌ಗಳಿದ್ದು, ಅವುಗಳನ್ನು ನವೀಕರಣಗೊಳಿಸಬೇಕು, ಪ್ರತಿ ೨೫ ಕಿಮೀಗೆ ಪೊಲೀಸ್ ಸ್ಟೇಷನ್ ಅಥವಾ ಉಪಪೊಲೀಸ್ ಸ್ಟೇಷನ್‌ಗಳನ್ನು ಮಾಡುವುದರಿಂದ ಅಕ್ರಮ ಚಟುವಟಿಗಳನ್ನು ಪತ್ತೆ ಮಾಡಲು ಸಹಕಾರಿಯಾಗಿರುತ್ತದೆ ಎಂದು ಮುರಳೀಧರ ಹಾಲಪ್ಪ ತಿಳಿಸಿದರು.
ಜಿಲ್ಲೆಯಲ್ಲಿ ಖಾಲಿಯಿರುವ ಪೊಲೀಸ್ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡುವುದರ ಜೊತೆಗೆ ಅವರ ಆರೋಗ್ಯ, ವಿದ್ಯಾಭ್ಯಾಸ, ವಾಹನ ಸೌಲಭ್ಯ, ವಸತಿ ಸೌಲಭ್ಯಗಳ ಬಗ್ಗೆ ಗಮನ ನೀಡಬೇಕು ಎಂದರು.
ಕೊರೋನಾ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯ ಕರ್ತವ್ಯ ಹಾಗೂ ಸೇವೆಯು ಶ್ಲಾಘನೀಯ. ತುಮಕೂರು ಜಿಲ್ಲೆಯ ನಾಗರೀಕರು ಪೊಲೀಸ್ ಸಿಬ್ಬಂದಿಯವರ ಜವಾಬ್ದಾರಿ ಕರ್ತವ್ಯಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ದಿಬ್ಬೂರಿನಲ್ಲಿ ೧೨೦೦ ಮನೆಗಳಿದ್ದು, ಅಲ್ಲಿ ಪೊಲೀಸ್ ಹೊರಠಾಣೆ ನಿರ್ಮಿಸುವಂತೆ ಸಲಹೆ ನೀಡಿದರು.
ಟಿ.ಎಸ್. ನಿರಂಜನ್ ಮಾತನಾಡಿ, ಸ್ಮಾರ್ಟ್ಸಿಟಿ ಕಾಮಗಾರಿಗಳಿಂದ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಸ್ಮಾರ್ಟ್ಸಿಟಿ ಕಾಮಗಾರಿ ನಿರ್ವಹಿಸುತ್ತಿರುವವರಿಗೆ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು.
ಸಮಸ್ಯೆಗಳನ್ನು ಆಲಿಸಿದ ಎಸ್ಪಿ ರಾಹುಲ್ ಕುಮಾರ್ ಶಹಪೂರ್ ವಾಡ್ ಅವರು, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗುಬ್ಬಿಯಲ್ಲಿ ಇಸ್ಪೀಟ್ ಜೂಜಾಟ ಹೆಚ್ಚಾಗಿ ನಡೆಯುತ್ತಿದ್ದು, ಈ ಬಗ್ಗೆ ಅಲ್ಲಿನ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಇಸ್ಪೀಟ್ ಜೂಜಾಟಕ್ಕೆ ಕಡಿವಾಣ ಹಾಕಲು ತಿಳಿಸಿದ್ದೇನೆ. ಜಿಲ್ಲೆಯಲ್ಲಿ ಗಾಂಜಾ, ಅಫೀಮು ಸೇರಿದಂತೆ ಯಾವುದೇ ಅಕ್ರಮ ಚಟುವಟಿಕೆಗಳು ಕಂಡು ಬಂದರೆ ಮುಲಾಜಿಲ್ಲದೇ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಸಾರ್ವಜನಿಕರ ಸಹಕಾರದೊಂದಿಗೆ ಜನಸಂಪರ್ಕ ಸಭೆಯನ್ನು ನಡೆಸಲಾಗುವುದು, ದಿಬ್ಬೂರಿನಲ್ಲಿ ಹೊರ ಪೊಲೀಸ್ ಠಾಣೆ ಸ್ಥಾಪನೆಗೆ ಮೇಲಧಿಕಾರಿಗಳ ಅನುಮತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ರುದ್ರೇಶ್, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅನಿಲ್‌ಕುಮಾರ್, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ರೇವಣ ಸಿದ್ಧಪ್ಪ, ಚೌದ್ರಿ ರಂಗಪ್ಪ, ಸಿದ್ಧಲಿಂಗೇಗೌಡ, ಮರಿಚನ್ನಮ್ಮ, ಸಂಜೀವ್‌ಕುಮಾರ್, ಟಿ.ಎಸ್. ನಿರಂಜನ್, ವೈ.ಎನ್.ನಾಗರಾಜ್, ಎನ್.ಮಂಜುನಾಥ್, ಪ್ರಕಾಶ್, ಎಸ್.ವಿ.ಗೀತ ರೂಪತಾರ, ಮಂಜುಳಾ ಆರಾಧ್ಯ, ಗೀತಮ್ಮ, ಗುರುಪ್ರಸಾದ್, ಶಿವಪ್ರಸಾದ್, ಶಿವರಾಜ್, ನರಸಿಂಹಮೂರ್ತಿ, ಸೈಯದ್ ಬುರಾನ್, ಇಲಾಹಿ, ಎಮ್ಮೆದೊಡ್ಡಿ ಜಯಣ್ಣ ಆಶಿಷ್ ಸೇರಿದಂತೆ ಹಲವರು ಭಾಗವಹಿಸಿದ್ದರು.