ಸರಕಾರವು ತಮ್ಮನ್ನು ರಕ್ಷಿಸುತ್ತದೆ ಎಂಬ ಸಣ್ಣ ಆಸೆಯ ಜೊತೆಗೆ ಭಯದಲ್ಲೇ ಬದುಕುತ್ತಿರುವ ತ್ರಿಪುರಾದ ಮುಸ್ಲಿಮರು

ಸರಕಾರವು ತಮ್ಮನ್ನು ರಕ್ಷಿಸುತ್ತದೆ ಎಂಬ ಸಣ್ಣ ಆಸೆಯ ಜೊತೆಗೆ ಭಯದಲ್ಲೇ ಬದುಕುತ್ತಿರುವ ತ್ರಿಪುರಾದ ಮುಸ್ಲಿಮರು

 

 

ಹೊಸದಿಲ್ಲಿ,ನ.2: ತ್ರಿಪುರಾದಲ್ಲಿ ಸರಣಿ ಮುಸ್ಲಿಂ ವಿರೋಧಿ ದಾಳಿಗಳು ಮತ್ತು ಹಿಂಸಾತ್ಮಕ ಘಟನೆಗಳ ಬಳಿಕ ರಾಜ್ಯದಲ್ಲಿಯ ಮುಸ್ಲಿಮರು, ವಿಶೇಷವಾಗಿ ಪೀಡಿತ ಪ್ರದೇಶಗಳಲ್ಲಿ ಅಥವಾ ಸಮೀಪ ವಾಸವಾಗಿರುವವರು ಭೀತಿಯಲ್ಲಿಯೇ ದಿನಗಳನ್ನು ದೂಡುತ್ತಿದ್ದಾರೆ.

ವರದಿಗಳಂತೆ ಅ.27ರ ವೇಳೆಗೆ ವಿಹಿಂಪ, ಹಿಂದು ಜಾಗರಣ ಮಂಚ್, ಬಜರಂಗ ದಳ ಮತ್ತು ಆರೆಸ್ಸೆಸ್ನಂತಹ ಬಲಪಂಥೀಯ ಗುಂಪುಗಳು ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ಹಿಂಸಾಚಾರವನ್ನು ವಿರೋಧಿಸಿ ರಾಜ್ಯದಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದ ಸಂದರ್ಭದಲ್ಲಿ ಕನಿಷ್ಠ 15 ಮಸೀದಿಗಳು ಮತ್ತು ಮುಸ್ಲಿಮರಿಗೆ ಡಝನ್ಗೂ ಅಧಿಕ ಮನೆಗಳು ಮತ್ತು ಅಂಗಡಿಗಳು ಹಾನಿಗೀಡಾಗಿದ್ದವು.

ರಾಜ್ಯದಲ್ಲಿಯ ಹಿಂಸಾಚಾರ ಒಟ್ಟು ಜನಸಂಖ್ಯೆಯ ಶೇ.8.6ರಷ್ಟಿರುವ ಮುಸ್ಲಿಮರಲ್ಲಿ ಭೀತಿಯನ್ನುಂಟು ಮಾಡಿದೆ. ಯಾವುದೇ ಕಾರಣವಿಲ್ಲದೆ ತಮ್ಮನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಹಿಂಸಾಚಾರ ಪೀಡಿತ ಪ್ರದೇಶಗಳ ಜನರು ಅಳಲು ತೋಡಿಕೊಂಡಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದಾಳಿಗಳು ತ್ರಿಪುರಾದಲ್ಲಿ ಹಿಂಸಾಚಾರ ಮತ್ತು ದಾಂಧಲೆಗಳಿಗೆ ನೆಪವಾಗಿ ಬಳಕೆಯಾಗಿದೆ. ಆದರೆ ನೆರೆಯ ದೇಶದಲ್ಲಿ ನಡೆದಿರುವ ಬೆಳವಣಿಗೆಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ ತ್ರಿಪುರಾದ ಅಲ್ಪಸಂಖ್ಯಾತ ಮುಸ್ಲಿಮರು.

‘ನನಗೆ ಇಬ್ಬರು ಮಕ್ಕಳಿದ್ದಾರೆ. ನನ್ನ ಪತ್ನಿ ಹಾಗೂ ಇತರ ಎಲ್ಲ ಮಹಿಳೆಯರು ಮತ್ತು ಮಕ್ಕಳು ಮನೆಯೊಂದರಲ್ಲಿ ಆಶ್ರಯ ಪಡೆದಿದ್ದಾರೆ. ಇಂದು ಬೆಳಿಗ್ಗೆಯಿಂದ ಸುಮಾರು 100-110 ಜನರು ಕೈಲಾಶಹರ್ಗೆ ತೆರಳಿದ್ದಾರೆ. ನಾವು ಭಾರತೀಯರಾಗಿದ್ದೇವೆ ಮತ್ತು ಇಲ್ಲಿಯೇ ಜನಿಸಿದ್ದೇವೆ. ನಮ್ಮ ದೇಶದಲ್ಲಿ ನಡೆದಿರದ ಘಟನೆಗಳಿಗಾಗಿ ನಮ್ಮನ್ನು ನರಳುವಂತೆ ಏಕೆ ಮಾಡಲಾಗುತ್ತಿದೆ ’ಎಂದು ಸ್ಥಳೀಯ ನಿವಾಸಿ ಅಬ್ದುಲ್ ಪ್ರಶ್ನಿಸಿದರು.

ಮಸೀದಿಗಳಿಗೆ ಹಾನಿಯ ಬಳಿಕ ಪೀಡಿತ ಪ್ರದೇಶಗಳಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು. ಅಬ್ದುಲ್ ಬಾಸಿತ್ ಖಾನ್ ಉತ್ತರ ತ್ರಿಪುರಾ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿದ್ದು,ಜಿಲ್ಲೆಯ ಧರಮ್ನಗರ ಪಟ್ಟಣದಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದಾರೆ.

ಅ.21ರಂದು ಖಾನ್ ಕಾರ್ಯನಿಮಿತ್ತ ಅಗರ್ತಲಾಕ್ಕೆ ತೆರಳಿದ್ದರು. ಪತ್ನಿ ಮತ್ತು ಮಗ ಗುವಾಹಟಿಯಲ್ಲಿದ್ದರೆ ಅಳಿಯ ಮತ್ತು ಮಗಳು ದಿಲ್ಲಿಗೆ ತೆರಳಿದ್ದರು. ಹೀಗಾಗಿ ಮನೆಯಲ್ಲಿ ಯಾರೂ ಇದ್ದಿರಲಿಲ್ಲ. ಈ ಸಂದರ್ಭ ಧರಮ್ನಗರದಲ್ಲಿ ಪ್ರತಿಭಟನಾ ರ್ಯಾಲಿಯನ್ನು ನಡೆಸುತ್ತಿದ್ದ ವಿಹಿಂಪ ಕಾರ್ಯಕರ್ತರು ಅವರ ಮನೆಗೆ ನುಗ್ಗಿ ದಾಂಧಲೆ ನಡೆಸಿ ಸೊತ್ತುಗಳನ್ನು ಧ್ವಂಸಗೊಳಿಸಿದ್ದರು.

‘ನನ್ನ ಎಲ್ಲ ಪ್ರಕರಣ ಕಡತಗಳನ್ನು ಹರಿದು ಹಾಕಲಾಗಿತ್ತು,ಬೀದಿಯಲ್ಲಿ ಎಸೆಯಲಾಗಿತ್ತು. ಇದು ನನಗೆ ಅತ್ಯಂತ ನೋವನ್ನುಂಟು ಮಾಡಿದೆ. ನನಗೆ ಸುಮಾರು 10 ಲಕ್ಷ ರೂ.ಗಳ ನಷ್ಟವುಂಟಾಗಿದೆ. ಆದರೆ ಹಲವಾರು ಅಮೂಲ್ಯ ಪ್ರಮಾಣಪತ್ರಗಳು ಮತ್ತು ದಾಖಲೆಗಳನ್ನು ನಾನು ಕಳೆದುಕೊಂಡಿದ್ದು,ಇದನ್ನು ಹಣದ ಪರಿಹಾರದಿಂದಲೂ ತುಂಬಿಕೊಳ್ಳಲು ಸಾಧ್ಯವಿಲ್ಲ ’ ಎಂದು ಖಾನ್ ತಿಳಿಸಿದರು. ಖಾನ್ ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ,ಆದರೆ ಪೊಲೀಸರು ಈವರೆಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿವೆ,ಹೀಗಾಗಿ ಅವುಗಳನ್ನು ತಡೆಯಲು ಈ ಬಲಪಂಥೀಯ ಗುಂಪುಗಳು ಭೀತಿಯನ್ನು ಸೃಷ್ಟಿಸಲು ವಿವಿಧ ತಂತ್ರಗಳನ್ನು ಬಳಸುತ್ತಿವೆ ಎಂದು ತೃಣಮೂಲ ಕಾಂಗ್ರೆಸ್ ಜಿಲ್ಲಾ ಚಾಲನಾ ಸಮಿತಿಯ ಸದಸ್ಯರೂ ಆಗಿರುವ ಖಾನ್ ಹೇಳಿದರು.

ತ್ರಿಪುರಾದಲ್ಲಿ ಗಟ್ಟಿನೆಲೆಯನ್ನು ಹೊಂದಿರುವ ಸಿಪಿಎಮ್ನಂತಹ ಬಿಜೆಪಿಯೇತರ ಪಕ್ಷಗಳು ಸೇರಿದಂತೆ ಹೆಚ್ಚಿನ ರಾಜಕೀಯ ಪಕ್ಷಗಳು ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ನಿರ್ಲಿಪ್ತವಾಗಿವೆ. ಕಾಂಗ್ರೆಸ್ ಅಗರ್ತಲಾದಲ್ಲಿ ಧರಣಿ ಪ್ರದರ್ಶನ ನಡೆಸಿದ್ದರೆ ಸಿಪಿಎಂ ಟ್ವಿಟರ್ನಲ್ಲಿ ಸಂತ್ರಸ್ತರಿಗೆ ಬೆಂಬಲವನ್ನು ವ್ಯಕ್ತಪಡಿಸಿದೆ. ಸ್ಥಳಿಯ ಸಿಪಿಎಂ ಶಾಸಕ ಇಸ್ಲಾಮುದ್ದೀನ್ ಮತ್ತು ಮಾಜಿ ಸಿಪಿಎಂ ಸಂಸದ ಜಿತೇಂದ್ರ ಚೌಧರಿ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಈ ಹಿಂಸಾಚಾರಗಳನ್ನು ಖಂಡಿಸಿದ್ದಾರೆ. ಆದರೆ ಪ್ರತಿಪಕ್ಷಗಳು ತಳಮಟ್ಟದಲ್ಲಿ ಕಾಣಿಸಿಕೊಂಡು ಅಗತ್ಯ ಬೆಂಬಲವನ್ನು ಒದಗಿಸಿಲ್ಲ.

ತ್ರಿಪುರಾದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧ ಹಿಂಸಾಚಾರಗಳು ಆರಂಭಗೊಂಡ ಸುಮಾರು ಒಂದು ವಾರದ ಬಳಿಕ ಅ.22ರಂದು ಚುನಾವಣಾ ಆಯೋಗವು ನ.25ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವುದಾಗಿ ಘೋಷಿಸಿತ್ತು. ದ್ವೇಷಾಪರಾಧಗಳು ಚುನಾವಣೆಗಳ ಮೇಲೆ ಪರಿಣಾಮ ಬೀರುವಂತಿದೆ. ಪಕ್ಷಗಳಿಗೆ ಹಿಂದು ವೋಟ್ಬ್ಯಾಂಕ್ ಬಗ್ಗೆ ಚಿಂತೆಯಿದ್ದಂತೆ ಕಂಡುಬರುತ್ತಿದೆ ಮತ್ತು ಹಿಂಸಾಚಾರದ ಬಗ್ಗೆ ಮಾತನ್ನೂ ಆಡುತ್ತಿಲ್ಲ ಎಂದು ಉತ್ತರ ತ್ರಿಪುರಾದ ನಿವಾಸಿ ಹಾಗೂ ಸ್ಟುಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್(ಎಸ್ಐಒ)ನ ರಾಜ್ಯ ಕಾರ್ಯದರ್ಶಿ ಸುಲ್ತಾನ್ ಹುಸೇನ್ ಹೇಳಿದರು. ಸಂತ್ರಸ್ತರ ಪರವಾಗಿ ಧ್ವನಿಯೆತ್ತಲು ಎಸ್ಐಒ ಸುದ್ದಿಗೋಷ್ಠಿಯೊಂದನ್ನು ನಡೆಸಿದ್ದರೆ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳಿಗೆ ಅಹವಾಲು ಸಲ್ಲಿಸಿದೆ.

ಪ್ರದೇಶದ ನಿವಾಸಿಗಳು ಹಿಂಸಾಚಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮನೆಗಳಲ್ಲಿ ಶಾಂತಿಯಿಂದ ಇರಲು ಅವರಿಗೆ ಸಾಧ್ಯವಾಗುತ್ತಿಲ್ಲ. ಮನೆಯಲ್ಲಿ ರೇಷನ್ ಮುಗಿದಿದ್ದರೂ ಭೀತಿಯಿಂದಾಗಿ ಅದನ್ನು ಖರೀದಿಸಲು ಅವರು ಹೊರಗೂ ಹೋಗುತ್ತಿಲ್ಲ. ಕೆಲಸಕ್ಕೂ ಹೋಗಲೂ ಅವರು ಹೆದರಿಕೊಂಡಿದ್ದಾರೆ. ಹೆಚ್ಚಿನವರು ಮಾನಸಿಕ ಶಾಂತಿಯನ್ನು ಕಳೆದುಕೊಂಡಿದ್ದಾರೆ. ದಂಗೆಕೋರರು ಯಾವುದೇ ಸಮಯದಲ್ಲಿ ದಾಳಿಗಳನ್ನು ನಡೆಸಬಹುದು ಎಂಬ ಭೀತಿಯಿಂದ ರಾತ್ರಿ ನಿದ್ರೆಯನ್ನು ಮಾಡಲೂ ಅವರಿಗೆ ಸಾಧ್ಯವಾಗುತ್ತಿಲ್ಲ.

ಮುಸ್ಲಿಂ ವಿರೋಧಿ ಹಿಂಸಾಚಾರದ ಘಟನೆಗಳನ್ನು ನಿಭಾಯಿಸಿದ ರೀತಿಗಾಗಿ ರಾಜ್ಯದ ಬಿಜೆಪಿ ನೇತೃತ್ವದ ಸರಕಾರವು ವ್ಯಾಪಕ ಟೀಕೆಗಳಿಗೆ ಗುರಿಯಾಗಿದೆ. ‘ಈ ಪಕ್ಷವು ನಮ್ಮನ್ನು ದ್ವೇಷಿಸುತ್ತದೆ,ಅದು ತ್ರಿಪುರಾದ ಮುಸ್ಲಿಮರನ್ನು ಬದುಕಿರಲು ಬಿಡುವುದಿಲ್ಲ. ಅವರು ನಮ್ಮೆಲ್ಲರನ್ನು ಮುಗಿಸಲು ಮತ್ತು ಇಡೀ ಪ್ರದೇಶವನ್ನು ಹಿಂದುಗಳ ಆವಾಸವನ್ನಾಗಿಸಲು ಬಯಸಿದ್ದಾರೆ ’ ಎಂದು ಹಿಂಸಾಚಾರ ಪೀಡಿತ ಉನಕೋಟಿ ಜಿಲ್ಲೆಯ ಪಾಲ್ಬಝಾರ್ ನಿವಾಸಿ ಅಕ್ಬರ್ ಅಲಿ ಹೇಳಿದರು.

ಇತ್ತೀಚಿನ ಬೆಳವಣಿಗೆಗಳು ಮತ್ತು ಸಂತ್ರಸ್ತರ ಪರವಾಗಿ ಮಾತನಾಡುವ ಬದಲು ವೌನವಾಗಿರುವ ಸರಕಾರದ ನಿರ್ಧಾರದ ಬಳಿಕ ಜನರು ತಮ್ಮ ಸರಕಾರದಲ್ಲಿ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಆದರೂ ಸರಕಾರವು ತಮ್ಮನ್ನು ರಕ್ಷಿಸಬಹುದು ಎಂಬ ಅಲ್ಪ ಆಸೆಯೊಂದಿಗೆ ದಿನಗಳನ್ನು ದೂಡುತ್ತಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ ಮತ್ತು ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದವನ್ನು ಕದಡುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತ್ರಿಪುರಾ ಪೊಲೀಸರು ಟ್ವೀಟಿಸಿದ್ದರಾದರೂ,ಈವರೆಗೆ ಪೀಡಿತ ಜಿಲ್ಲೆಗಳಲ್ಲಿ ಒಬ್ಬನೇ ಒಬ್ಬ ದುಷ್ಕರ್ಮಿಯನ್ನು ಗುರುತಿಸಿಯೂ ಇಲ್ಲ,ಬಂಧಿಸಿಯೂ ಇಲ್ಲ.

Leave a Reply

Your email address will not be published. Required fields are marked *