ಜೆಡಿಎಸ್ ಶಾಸಕ ಸ್ಥಾನದ ಆಕ್ಷಾಂಕ್ಷಿಗಳಿಗೆ : ಠಕ್ಕರ್ ನೀಡಿದ ಗೋವಿಂದರಾಜು
ತುಮಕೂರು : ಮುಂಬರಲಿರುವ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ನಗರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯ ಗೆಲುವು ನಿಶ್ಚಿತ ಇದಕ್ಕೆ ತುಮಕೂರು ನಗದ ವಿಧಾನಸಭಾ ಕ್ಷೇತ್ರದ ಮತದಾರರ ಆಶಿರ್ವಾದ ಪಡೆಯಲು ಜೂನ್ ೧ನೇ ತಾರೀಖಿನಿಂದ ನಾನು ಮತ ಜೋಳಿಗೆ ಹಿಡಿದು ಮತ ಬಿಕ್ಷೆ ಬೇಡಲು ಆರಂಭಿಸುತ್ತೇನೆ ಎಂದು ಜೆಡಿಎಸ್ ಮುಖಂಡ ಶಾಸಕ ಸ್ಥಾನದ ಆಕಾಂಕ್ಷಿ ಎನ್. ಗೋವಿಂದರಾಜುರವರು ತಿಳಿಸಿದರು.
ತುಮಕೂರು ನಗರದಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಯನ್ನು ಜಯಗಳಿಸುವ ಜವಾಬ್ದಾರಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಮೇಲಿದೆ ಎಂದರು. ಅಲ್ಲದೇ ತುಮಕೂರು ನಗರದಲ್ಲಿ ಇತ್ತೀಚೆಗೆ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂದರ್ಭದಲ್ಲಿ ನಾನು ಹೇಳಿದ ಹಾಗೆ ತುಮಕೂರು ನಗರದ ವಿಧಾನಸಭಾ ಕ್ಷೇತ್ರದಿಂದ ಯಾರಾದರೂ ಅಭ್ಯರ್ಥಿಗಳು ಸ್ಪರ್ಧಿಸುವುದಿದ್ದರೆ ನೇರವಾಗಿ ತುಮಕೂರು ನಗರದ ಪಕ್ಷದ ಕಾರ್ಯಕರ್ತರ ಅಭಿಪ್ರಾಯಗಳನ್ನು ಪಡೆದು, ಚರ್ಚಿಸಿ, ತೀರ್ಮಾನ ಕೈಗೊಳ್ಳುವ ಕೆಲಸವಾಗಬೇಕಾಗಿದೆ ಎಂದರು.
ತುಮಕೂರು ನಗರದಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವ ಆಕಾಂಕ್ಷಿಗಳು ಯಾರೇ ಆಗಲಿ ಅದರಲ್ಲಿ ನರಸೇಗೌಡರು, ಬೆಳ್ಳಿಲೋಕೇಶ್, ಟಿ.ಆರ್.ನಾಗರಾಜು, ನರಸಿಂಹರಾಜು (ಗ್ರೇಡ್-೨ ತಹಶೀಲ್ದಾರ್) ಇವರುಗಳು ಯಾರೇ ಆಗಿರಬಹುದು ನೀವುಗಳು ನೇರವಾಗಿ ನನಗೆ ತಿಳಿಸಿ ತಮ್ಮ ಬೆಂಬಲಕ್ಕೆ ನಾನು ಸದಾ ಸಿದ್ಧನಾಗಿ ಕೆಲಸ ಮಾಡುತ್ತೇನೆಂದು ಹೇಳಿದರು. ಮುಖ್ಯವಾಗಿ ತುಮಕೂರು ನಗರದಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಯನ್ನು ಜಯಗಳಿಸುವ ಗುರಿ ನಮ್ಮ ಕರ್ತವ್ಯವಾಗಿದೆ ಎಂದರು.
ತುಮಕೂರು ನಗರದಲ್ಲಿ ಜನತಾ ಜಲಧಾರೆ ಕಾರ್ಯಕ್ರಮದ ಸಂದರ್ಭದಲ್ಲೂ ನಾನು ಕ್ಷೇತ್ರದ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ತಮಗೆಲ್ಲರಿಗೂ ತಿಳಿಸಿದ್ದೇನೆ. ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಲು ಯಾರೂ ಸಹ ಮುಂದಾಗಲಿಲ್ಲ. ಆದರಂತೆ ನಾನು ಜೂನ್ ೧ ನೇ ತಾರೀಖಿನಿಂದ ನಮ್ಮ ಕ್ಷೇತ್ರದ ಮತದಾರ ದೇವರುಗಳ ಮನೆಬಾಗಿಲಿಗೆ ಜೋಳಿಗೆ ಹಿಡಿದು ಮತ ಬಿಕ್ಷೆ ಬೇಡಲು ಆರಂಭಿಸುತ್ತೇನೆ, ನಂತರದ ದಿನಗಳಲ್ಲಿ ಯಾರಾದರೂ ಅಭ್ಯರ್ಥಿಗಳು ನಾನು ಆಕಾಂಕ್ಷಿ ಎಂದು ಹೇಳಿದ ಸಂದರ್ಭದಲ್ಲಿ ನಮ್ಮ ನಮ್ಮಲ್ಲಿ ಭಿನ್ನಾಭಿಪ್ರಾಯಗಳು ಮೂಡಬಾರದೆಂಬ ಭಾವನೆಯಿಂದ ಈ ರೀತಿಯಾಗಿ ಹೇಳುತ್ತಿದ್ದೇನೆ ಯಾರೂ ಅನ್ಯತಾ ಭಾವಿಸಬಾರದು ಎಂದರು.
ಈಗಲೂ ಕಾಲ ಮಿಂಚಿಲ್ಲ, ಮೇ ತಿಂಗಳ ೩೦ನೇ ತಾರೀಖಿನೊಳಗೆ ಯಾರಾದರೂ ಆಕಾಂಕ್ಷಿಗಳಾಗಲು ಇಚ್ಚಿಸಿದಲ್ಲಿ ನೇರವಾಗಿ ನನ್ನನ್ನು ಮೊದಲಗೊಂಡು ಎಲ್ಲರೂ ಹೊಂದಾಣಿಕೆಯಿಂದ ಮಾನ್ಯ ಕುಮಾರಣ್ಣ ಮತ್ತು ದೇವೇಗೌಡರ ಬಳಿ ಹೋಗಿ ಒಟ್ಟಿಗೆ ಕುಳಿತು ಚರ್ಚಿಸಿ ತೀರ್ಮಾನ ತೆಗೆದುಕೊಂಡ ನಂತರ ಚುನಾವಣೆಗೆ ಸ್ಪರ್ಧಿಸೋಣವೆಂದರು.
ಜೆಡಿಎಸ್ ಪಕ್ಷ ನಮ್ಮೆಲ್ಲರಿಗೂ ತಾಯಿ ಇದ್ದಂತೆ ಆ ತಾಯಿಗೆ ದ್ರೋಹ ಮಾಡಿದರೆ, ಹೆತ್ತ ತಾಯಿಗೆ ದ್ರೋಹ ಬಗೆದಂತಾಗುತ್ತದೆಂದು ತಿಳಿಸಿದರು. ಇತ್ತೀಚೆಗೆ ಮಾಧ್ಯಮದಲ್ಲಿ ಕೇಳಿಬರುತ್ತಿರುವ ಮಾಹಿತಿ ಆಧಾರದಲ್ಲಿ ನರಸಿಂಹರಾಜು (ಗ್ರೇಡ್-೨ ತಹಶೀಲ್ದಾರ್) ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂದು ಬಿಂಬಿಸಿಕೊಂಡು ಅವರು ಮತ್ತು ಅವರ ಬಳಗದವರು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ತಿಳಿಸಿದರು. ಅವರೇ ಏನಾದರೂ ಆಕ್ಷಾಂಕ್ಷಿಯಾಗಿದ್ದಲ್ಲಿ ಮೊದಲು ತಮ್ಮ ಸರ್ಕಾರಿ ಹುದ್ದೆಗೆ ಸ್ವಯಂ ನಿವೃತ್ತಿ ಘೋಷಣೆ ಮಾಡಿ ಚುನಾವಣಾ ಅಖಾಢಕ್ಕೆ ಇಳಿಯಬೇಕು ಎಂದು ತಿಳಿಸಿದರು.
ಒಟ್ಟಾರೆಯಾಗಿ ಈ ಭಾರಿಯ ಜೆಡಿಎಸ್ ಪಕ್ಷದಿಂದ ನಗರ ಶಾಸಕ ಸ್ಥಾನದ ಟಿಕೆಟ್ ಪಡೆಯಲು ಪ್ರಥಮ ದರ್ಜೆ ಗುತ್ತಿಗೆದಾರರು, ಸ್ವಯಂ ಸಮಾಜ ಸೇವಕರು ಬಿ.ನರಸೇಗೌಡರವರು, ಸಮಾಜ ಸೇವೆ ಮತ್ತು ವಾಣಿಜ್ಯೋದ್ಯಮಿಗಳಾಗಿ ಬಿಂಬಿಸಿಕೊಂಡಿರುವ ಬೆಳ್ಳಿಲೋಕೇಶ್‌ರವರು, ಜೆಡಿಎಸ್ ಕಾರ್ಯಾಧ್ಯಕ್ಷರಾಗಿರುವ ಟಿ.ಆರ್.ನಾಗರಾಜ್‌ರವರುಗಳ ಹೆಸರುಗಳು ಕೇಳಿಬರುತ್ತಿದ್ದ ಸಮಯದಲ್ಲೇ ಹೊಸದಾಗಿ ಪ್ರತಿಬಿಂಬಿತ ಅಭ್ಯರ್ಥಿಯಾದ ಗೋವಿಂದರಾಜುರವರ ಈ ನುಡಿಗಳನ್ನು ಕೇಳಿ ಜೆಡಿಎಸ್ ಪಾಳಯದಲ್ಲಿ ಕೊಂಚ ತಳಮಳ ಉಂಟಾಗಿದೆ ಎಂದರೆ ತಪ್ಪಾಗಲಾರದು, ಯಾವುದಕ್ಕೂ ಅಖಾಢ ಸಿದ್ಧವಾದಾಗಲೇ ಎಲ್ಲವೂ ಅರಿಯುವುದು.
ದೊಡ್ಡ ಗೌಡರ ಕೃಪಾಶೀರ್ವಾದಕ್ಕಾಗಿ ಹಪಹಪಿಸುತ್ತಿರುವ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಿಗೆ ಗೋವಿಂದರಾಜುರವರ ಠಕ್ಕರ್ ಏನು ಮಾಡುತ್ತದೋ ಕಾದು ನೋಡಬೇಕು.