ವಿದ್ಯುತ್ ಉತ್ಪಾದನೆಗೆ ಬೇಕಾಗುವಷ್ಟು ಕಲ್ಲಿದ್ದಲು ಪೂರೈಕೆ: ಕೇಂದ್ರ ಭರವಸೆ
ಹೊಸದಿಲ್ಲಿ: ದೇಶಕ್ಕೆ ಅಗತ್ಯವಿರುವ ವಿದ್ಯುತ್ ಉತ್ಪಾದನೆಗೆ ಬೇಕಾಗುವಷ್ಟು ಕಲ್ಲಿದ್ದಲು ಪೂರೈಕೆ ಮಾಡಲಾಗುವುದು ಎಂದು ಕೇಂದ್ರ ಸರಕಾರ ಮಂಗಳವಾರ ಭರವಸೆ ನೀಡಿದೆ. ಇದರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಚೇರಿ ಕೂಡ ಪರಿಸ್ಥಿತಿ ಪರಿಶೀಲಿಸುತ್ತಿದೆ ಹಾಗೂ ಸಮಸ್ಯೆ ಪರಿಹಾರಕ್ಕೆ ಚರ್ಚೆ ನಡೆಸುತ್ತಿದೆ.
ಕಲ್ಲಿದ್ದಲು ಕೊರತೆಯಿಂದ ಹಲವು ಉಷ್ಣ ವಿದ್ಯುತ್ ಸ್ಥಾವರಗಳು ಕಾರ್ಯ ಸ್ಥಗಿತಗೊಳಿಸಿರುವುದರಿಂದ ದೇಶ ವ್ಯಾಪಕ ವಿದ್ಯುತ್ ನಿಲುಗಡೆ ಎದುರಿಸುತ್ತಿರುವಂತೆ ಕೇಂದ್ರ ಸರಕಾರ ಈ ಭರವಸೆ ನೀಡಿದೆ. ಕೋಲ್ ಇಂಡಿಯಾದಲ್ಲಿ ಪ್ರಸ್ತುತ 22 ದಿನಗಳಿಗೆ ಬೇಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇದೆ. ಪೂರೈಕೆ ಏರಿಕೆಯಾಗುತ್ತಿದೆ. ಅಗತ್ಯಕ್ಕೆ ಅನುಗುಣವಾಗಿ ಕಲ್ಲಿದ್ದಲು ಪೂರೈಸಲಾಗುವುದು ಎಂದು ಇಡೀ ದೇಶಕ್ಕೆ ಭರವಸೆ ನೀಡಲು ನಾವು ಬಯಸುತ್ತೇವೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿಯ ವೈಯುಕ್ತಿಕ ನಿಗಾ ವಹಿಸುವ ನಿರೀಕ್ಷೆ ಇದೆ. ಅಲ್ಲದೆ, ಇಂಧನ ಕ್ಷೇತ್ರದಲ್ಲಿ ಸರಕಾರಿ-ಖಾಸಗಿ ಸಹಭಾಗಿತ್ವದ ಹೂಡಿಕೆ ಉತ್ತೇಜಿಸುವುದು ಸೇರಿದಂತೆ ದೀರ್ಘಾವಧಿ ಪರಿಹಾರದ ಕುರಿತು ನಿರ್ದಿಷ್ಟ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸರಕಾರದ ದತ್ತಾಂಶದ ಪ್ರಕಾರ ಕೇಂದ್ರ ಸರಕಾರದ ನಿಗಾದಲ್ಲಿರುವ ದೇಶದ 135 ಉಷ್ಣ ವಿದ್ಯುತ್ ಸ್ಥಾವರಗಳ ಪೈಕಿ 115 ಉಷ್ಣ ವಿದ್ಯುತ್ ಸ್ಥಾವರಗಳು ಪ್ರಸ್ತುತ ತೀವ್ರ ಕಲ್ಲಿದ್ದಲು ಕೊರತೆ ಎದುರಿಸುತ್ತಿವೆ. 70 ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ನಾಲ್ಕಕ್ಕಿಂತಲೂ ಕಡಿಮೆ ದಿನಗಳಿಗೆ ಸಾಕಾಗುವಷ್ಟು ಕಲ್ಲಿದ್ದಲು ಇದೆ.
ಕೆಲವು ರಾಜ್ಯಗಳು ವಿದ್ಯುತ್ ಅನ್ನು ತಮ್ಮ ಗ್ರಾಹಕರಿಗೆ ಪೂರೈಕೆ ಮಾಡುವ ಬದಲು ಲೋಡ್ ಶೆಡ್ಡಿಂಗ್ ಮಾಡುತ್ತವೆ ಹಾಗೂ ಆ ವಿದ್ಯುತ್ ಅನ್ನು ಹೆಚ್ಚಿನ ಬೆಲೆಗೆ ವಿದ್ಯುತ್ ವಿನಿಮಯ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿವೆ ಎಂದು ಇಂಧನ ಸಚಿವಾಲಯ ಹೇಳಿದೆ. ಒಂದು ವೇಳೆ ರಾಜ್ಯಗಳು ತಮ್ಮ ಗ್ರಾಹಕರಿಗೆ ವಿದ್ಯುತ್ ಪೂರೈಕೆ ಮಾಡದೇ, ವಿದ್ಯುತ್ ವಿನಿಮಯ ಸಂಸ್ಥೆಗಳಿಗೆ ಹೆಚ್ಚಿನ ಬೆಲೆಗೆ ವಿದ್ಯುತ್ ಮಾರಾಟ ಮಾಡಿದರೆ, ಅಂತಹ ರಾಜ್ಯಗಳಿಗೆ ಹಂಚಿಕೆ ಮಾಡಲಾದ ವಿದ್ಯುತ್ ಅನ್ನು ಹಿಂಪಡೆಯಲಾಗುವುದು ಹಾಗೂ ಅಗತ್ಯ ಇರುವ ಇತರ ರಾಜ್ಯಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಕೇಂದ್ರ ಕಲ್ಲಿದ್ದಲು ಹಾಗೂ ಇಂಧನ ಖಾತೆಯ ಸಚಿವರಾದ ಪ್ರಹ್ಲಾದ್ ಜೋಷಿ ಹಾಗೂ ಆರ್.ಕೆ. ಸಿಂಗ್ ಅವರನ್ನು ಸೋಮವಾರ ಭೇಟಿಯಾಗಿ ಮಾತುಕತೆ ನಡೆಸಿದ್ದರು.