ಕಾಂಗ್ರೆಸಿಗೆ ಸೋಲಿನ ಭೀತಿ ಶುರುವಾಗಿ ನನ್ನ ಮೇಲೆ ಅಪಪ್ರಚಾರ : ಎಮ್ ಆರ್ ಮಂಜುನಾಥ್
ಹನೂರು :-ಚುನಾವಣೆಯಲ್ಲಿ ನನಗೆ ಸಿಗುತ್ತಿರುವ ಅಪಾರ ಬೆಂಬಲದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದವರಿಗೆ ಸೋಲುವ ಭೀತಿ ಶುರುವಾಗಿರುವುದರಿಂದ ಕ್ಷೇತ್ರದ ಶಾಸಕರು ಹಾಗೂ ಅವರ ಬೆಂಬಲಿಗರು ತನ್ನ ಮೇಲೆ ಇಲ್ಲಸಲ್ಲದ ಅಪಪ್ರಚಾರ ಮಾಡುವ ಮೂಲಕ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಹನೂರು ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ.ಆರ್.ಮಂಜುನಾಥ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.ಹನೂರು ವಿಧಾನ ಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕರು ಮೂರು ಬಾರಿ ಆಯ್ಕೆಯಾಗಿದ್ದರು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದಿರುವುದು
ಕನಿಷ್ಠ ಮೂಲಭೂತ ಸೌಕರ್ಯಗಳನ್ನು ನೀಡಲು ಶ್ರಮಿಸದಿರುವ ಹಿನ್ನೆಲೆಯಲ್ಲಿ ಈ ಬಾರಿ ಅವರಿಗೆ ತಕ್ಕ ಪಾಠ ಕಲಿಸುವ ಸಲುವಾಗಿ ಹಾಗೂ ತಾಲ್ಲೂಕಿನ ಸಮಗ್ರ ಅಭಿವೃದ್ಧಿಯಾಗಬೇಕೆಂಬ ಉದ್ದೇಶದಿಂದ ನನಗೆ ಕ್ಷೇತ್ರಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ,ಬಿಜೆಪಿ ಪಕ್ಷಗಳ ಕಾರ್ಯಕರ್ತರು, ಮುಖಂಡರುಗಳು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸುವುದು ಖಚಿತವಾಗಿದೆ.
ಹಾಲಿ ಶಾಸಕರಿಗೆ ಸೋಲುವ ಭೀತಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಅನ್ಯ ಮಾರ್ಗವಿಲ್ಲದೆ ಹಿಂದೆ ನಾನು ಬಿಜೆಪಿ ಪಕ್ಷದಲ್ಲಿದ್ದ ಸಂದರ್ಭದಲ್ಲಿ ಕ್ಷೇತ್ರ ವ್ಯಾಪ್ತಿಯ ಬಡವರಿಗೆ ಗಡಿಯಾರ ವಿತರಣೆ ಮಾಡಿದ್ದು ಹಾಗೂ ಬೆಂಗಳೂರಿನಲ್ಲಿ ನಾನು ವಾಸವಿರುವ ಗರುಡಾಚಾರ್ ಪಾಳ್ಯದ ದೇವಸ್ಥಾನವೊಂದರ ಜೀರ್ಣೋದ್ಧಾರಕ್ಕೆ ಆಗಮಿಸಿದ್ದ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ತೆಗೆಸಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ.ತಮ್ಮ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಮೂಲಕ ಮತ ಕೇಳಬೇಕಿದ್ದ ಶಾಸಕರು ಹಾಗೂ ಅವರ ಬೆಂಬಲಿಗರು
ಈ ರೀತಿಯಾಗಿ ನನ್ನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುವ ಮೂಲಕ ಹತಾಶರಾಗಿ ಮತ ಕೇಳಲೆತ್ನಿಸುತ್ತಿರುವುದು ಹಾಗೂ ಮತದಾರರನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸಿರುವುದು ನಾಚಿಕೆಗೇಡಿನ ಸಂಗತಿ.ಹಿಂದೆ ನಾನು ಬಿಜೆಪಿ ಪಕ್ಷದಲ್ಲಿ ಇದ್ದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿದ್ದೇನೆ
ಅದರ ಭಾಗವಾಗಿ ಬಡವರಿಗೆ ಬಿಜೆಪಿ ಪಕ್ಷದ ಚಿಹ್ನೆ ಇರುವ ಗಡಿಯಾರವನ್ನು ನೀಡಲಾಗಿದೆ ಹಾಗೂ ನನ್ನ ಮನೆ ಇರುವ ಗರುಡಾಚಾರ್ ಪಾಳ್ಯದ ದೇವಸ್ಥಾನವೊಂದರ ಜೀರ್ಣೋದ್ದಾರ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸಿದ್ದರು ಆ ವೇಳೆ ಅವರ ಜೊತೆ ಫೋಟೋ ತೆಗೆಸಿದ್ದೇನೆ ಅದನ್ನೆ
ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟು ಜೆಡಿಎಸ್ ಅಭ್ಯರ್ಥಿ ಆರ್.ಎಸ್.ಎಸ್ ನೊಂದಿಗೆ ಸಂಪರ್ಕದಲ್ಲಿದ್ದಾರೆಂದು ಅಪಪ್ರಚಾರ ಮಾಡುತ್ತಿರುವುದು ಅವರಿಗೆ ಸೋಲಿನ ಹತಾಶೆ ಎಷ್ಟಿದೆ ಎಂಬುದನ್ನು ಬಿಂಬಿಸುತ್ತಿದೆ.ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಸೈದ್ಧಾಂತಿಕವಾಗಿ ಪ್ರಬಲ ವಿರೋಧಿಗಳಾಗಿದ್ದರೂ ಅಧಿಕಾರದ ಆಸೆಗೋಸ್ಕರ
ಹನೂರು ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ಇದೇ ಶಾಸಕರು ನಾನು ಆ ರೀತಿಯ ಕೀಳು ಮಟ್ಟದ ರಾಜಕೀಯ ಮಾಡುವುದಿಲ್ಲ ಹಾಗೂ ಕೊಳ್ಳೇಗಾಲದಲ್ಲಿರುವ ತಮ್ಮ ನಿವಾಸದಲ್ಲಿ ಬಹಿರಂಗವಾಗಿ ಒಂದು ಲಕ್ಷ ರುಪಾಯಿಗಳ ಲಂಚ ತೆಗೆದು ಕೊಂಡಿರುವುದನ್ನು ರಾಜ್ಯ ಹಾಗೂ ಕ್ಷೆತ್ರದ ಜನತೆ ಮಾದ್ಯಮದಲ್ಲಿ ಪ್ರಸಾರವಾಗಿದ್ದನ್ನು ನೋಡಿದ್ದರೆ ಜನ ತಿರಸ್ಕಾರ ಮಾಡೋ ಸಮಯ ಬಂದಿದೆ
ಇದನ್ನು ಶಾಸಕರು ಹಾಗೂ ಅವರ ಹಿಂಬಾಲಕರು ಅರ್ಥ ಮಾಡಿಕೊಂಡು ನನ್ನ ಮೇಲೆ ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಬೇಕು.ಕ್ಷೇತ್ರದ ಮತದಾರರು ಪ್ರಜ್ಞಾವಂತರಾಗಿದ್ದು ಇಂತಹ ಅಪಪ್ರಚಾರಗಳಿಗೆ ಕಿವಿಗೊಡದೆ ಚುನಾವಣೆಯಲ್ಲಿ ನನಗೆ ಮತ ಹಾಕುವ ಮೂಲಕ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆಂದು ಹೇಳಿಕೆ ನೀಡಿರುತ್ತಾರೆ.
ವರದಿ :- ನಾಗೇಂದ್ರ ಪ್ರಸಾದ್