2 ವಾರದಿಂದ ನಾಪತ್ತೆಯಾಗಿದ್ದ ಫ್ರಾನ್ಸ್ ನ ಪರ್ವತಾರೋಹಿಗಳ ಮೃತದೇಹ ಪತ್ತೆ.
ಕಠ್ಮಂಡು: ಹಿಮಾಲಯದ ದುರ್ಗಮ ಪ್ರದೇಶದಿಂದ ಅಕ್ಟೋಬರ್ 26ರಿಂದ ನಾಪತ್ತೆಯಾಗಿದ್ದ ಫ್ರಾನ್ಸ್‌ನ 3 ಪರ್ವತಾರೋಹಿಗಳ ಮೃತದೇಹ ಅವರು ನಾಪತ್ತೆಯಾಗಿದ್ದ ಪ್ರದೇಶದ ಬಳಿ ಸೋಮವಾರ ಪತ್ತೆಯಾಗಿದೆ ಎಂದು ನೇಪಾಳದ ಪೊಲೀಸರು ಹೇಳಿದ್ದಾರೆ.
ಮೌಂಟ್ ಎವರೆಸ್ಟ್ ನ ಸಮೀಪದ ಸುಮಾರು 19,700 ಅಡಿ ಎತ್ತರದ ಮಿಂಗೊ ಈಗರ್ ಎಂಬ ಪರ್ವತವನ್ನು ಏರಲು 8 ಸದಸ್ಯರ ಪರ್ವತಾರೋಹಿಗಳ ತಂಡ ಚಾರಣ ಆರಂಭಿಸಿತ್ತು. ಎರಡು ತಂಡಗಳಾಗಿ ಪ್ರತ್ಯೇಕಗೊಂಡು ಪರ್ವತವನ್ನು 2 ಕಡೆಯಿಂದ ಏರಲು ಈ ತಂಡ ನಿರ್ಧರಿಸಿತ್ತು. ಇದರಲ್ಲಿ ಥಾಮಸ್ ಆರ್ಫಿ, ಲೂಯಿಸ್ ಪಚೌಡ್ ಮತ್ತು ಗ್ಯಾಬ್ರಿಯೆಲ್ ಮಿಲೋಚೆ ಎಂಬವರಿದ್ದ ತಂಡ ತಮ್ಮ ಪ್ರಯತ್ನವನ್ನು ಕೈಬಿಟ್ಟು ಮೂಲಶಿಬಿರದತ್ತ ಮರಳುತ್ತಿದ್ದಾಗ ಹಿಮಪಾತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು. ಇವರ ಪತ್ತೆಗಾಗಿ ಒಂದು ವಾರ ಕಾರ್ಯಾಚರಣೆ ನಡೆಸಲಾಗಿತ್ತು. ನಾಪತ್ತೆಯಾದವರನ್ನು ಪತ್ತೆಹಚ್ಚುವ ಸಾಧ್ಯತೆ ಶೂನ್ಯ ಎಂದು ಫ್ರಾನ್ಸ್ ನ ಪರ್ವತಾರೋಹಿಗಳ ಒಕ್ಕೂಟ ಹೇಳಿಕೆ ನೀಡಿದ ಬಳಿಕ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಿತ್ತು.
ಈ ಮಧ್ಯೆ, ಪರ್ವತಾರೋಹಿಗಳು ನಾಪತ್ತೆಯಾದ ಪರ್ವತದ ಉತ್ತರದ ಬದಿಯಲ್ಲಿ ಹಿಮದಡಿ ಸಿಲುಕಿದ್ದ 3 ಮೃತದೇಹಗಳನ್ನು ಸೋಮವಾರ ಪತ್ತೆಹಚ್ಚಲಾಗಿದ್ದು ಮೃತದೇಹಗಳನ್ನು ಲುಕ್ಲಾ ನಗರಕ್ಕೆ ತರಲಾಗಿದೆ. ಇಲ್ಲಿಂದ ಕಠ್ಮಂಡುಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ನೇಪಾಳದ ಸೊಲುಖುಂಬು ಜಿಲ್ಲಾ ಪೊಲೀಸ್ ಅಧಿಕಾರಿ ರಿಶಿರಾಜ್ ಧಕಲ್ ಹೇಳಿದ್ದಾರೆ.