ಹೈದರಾಬಾದ್‍ಗೆ ಬಂದು ಕಾರ್ಯಕ್ರಮ ನೀಡಿ: ಮುನವ್ವರ್ ಫಾರೂಖಿ, ಕುನಾಲ್ ಕಾಮ್ರಾಗೆ ತೆಲಂಗಾಣ ಸಚಿವರ ಆಹ್ವಾನ

ಹೈದರಾಬಾದ್‍ಗೆ ಬಂದು ಕಾರ್ಯಕ್ರಮ ನೀಡಿ: ಮುನವ್ವರ್ ಫಾರೂಖಿ, ಕುನಾಲ್ ಕಾಮ್ರಾಗೆ ತೆಲಂಗಾಣ ಸಚಿವರ ಆಹ್ವಾನ

ಹೈದರಾಬಾದ್: ಹೈದರಾಬಾದ್‍ನಲ್ಲಿ ಕಾರ್ಯಕ್ರಮ ನೀಡಿ ಎಂದು ಹೇಳಿ ತೆಲಂಗಾಣ ಸಚಿವ ಕೆ.ಟಿ ರಾಮ ರಾವ್ ಅವರು ಕಾಮಿಡಿಯನ್‍ಗಳಾದ ಮುನವ್ವರ್ ಫಾರೂಖಿ ಮತ್ತು ಕುನಾಲ್ ಕಾಮ್ರಾ ಅವರಿಗೆ ಆಹ್ವಾನ ನೀಡಿದ್ದಾರೆ.

 

ಹೈದರಾಬಾದ್ ನಿಜವಾಗಿಯೂ ಒಂದು ಕಾಸ್ಮೊಪಾಲಿಟನ್ ನಗರ ಹಾಗೂ ಸ್ಟ್ಯಾಂಡ್-ಅಪ್ ಕಾಮಿಡಿಯನ್‍ಗಳಿಗೆ ಬಹಿರಂಗವಾಗಿ ಆಹ್ವಾನ ನೀಡುತ್ತದೆ ಎಂದು ಸಚಿವರು ಹೇಳಿದ್ದಾರೆ.

 

ಸಂಘಟನೆಗಳ ವಿರೋಧದಿಂದಾಗಿ ಫಾರೂಖಿ ಅವರ ಬೆಂಗಳೂರು ಕಾರ್ಯಕ್ರಮಕ್ಕೆ ಕಳೆದ ತಿಂಗಳು ಪೊಲೀಸರು ಅನುಮತಿ ನಿರಾಕರಿಸಿದ್ದರು. ಕಾಮ್ರಾ ಅವರ ಬೆಂಗಳೂರು ಶೋ ಕೂಡ ಇದೇ ಕಾರಣಕ್ಕೆ ರದ್ದುಗೊಂಡಿತ್ತು.

 

ಶುಕ್ರವಾರ ಮಾಸ್ ಮ್ಯೂಚುವಲ್ ವಿಮೆ ಮತ್ತು ಹಣಕಾಸು ಕಂಪೆನಿಯ ಹೈದರಾಬಾದ್ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಸಚಿವರು ಇಬ್ಬರು ಕಾಮಿಡಿಯನ್‍ಗಳಿಗೂ ಆಹ್ವಾನ ನೀಡಿದ್ದಾರೆ.

 

ತೆಲಂಗಾಣದಲ್ಲಿ ಕೆಟಿಆರ್ ಎಂದೇ ಚಿರಪರಿಚಿತರಾಗಿರುವ ರಾವ್, ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ಮುನವ್ವರ್ ಫಾರೂಖಿ ಮತ್ತು ಕುನಾಲ್ ಕಾಮ್ರಾ ಅವರ ಅಭಿಪ್ರಾಯಗಳಂತೆಯೇ ನಮ್ಮ ಅಭಿಪ್ರಾಯವಿಲ್ಲ ಎಂಬ ಕಾರಣಕ್ಕೆ ಅವರ ಶೋಗಳನ್ನು ನಾವು ರದ್ದುಪಡಿಸುವುದಿಲ್ಲ” ಎಂದು ಹೇಳಿದರು.

 

ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರ ಪುತ್ರರಾಗಿರುವ ಕೆ.ಟಿ ರಾವ್ ಮುಂದುವರಿದು ಮಾತನಾಡುತ್ತಾ “ಬೆಂಗಳೂರಿನಿಂದ ಕೇಳುತ್ತಿರುವ ಅಥವಾ ಬೆಂಗಳೂರಿನ ಜನರಿಗೆ ನಾನು ಇದನ್ನು ಹೇಳುತ್ತಿದ್ದೇನೆ. ನೀವು ಕಾಸ್ಮೊಪಾಲಿಟನ್ ನಗರ ಎಂದು ಹೇಳುತ್ತೀರಿ ಹಾಗೂ ಹಾಸ್ಯವನ್ನು ಗಂಭೀರವಾಗಿ ಪರಿಗಣಿಸುತ್ತೀರಿ. ಅದು ನನಗೆ ಅರ್ಥವಾಗುತ್ತಿಲ್ಲ, ಹೈದರಾಬಾದ್ ಎಲ್ಲಾ ಸಂಸ್ಕೃತಿಗಳನ್ನು ಸ್ವಾಗತಿಸುತ್ತದೆ” ಎಂದಿದ್ದಾರೆ.

 

“ನೀವು ಇಲ್ಲಿ ಬಂದು ಸರಕಾರವನ್ನು ಟೀಕಿಸಬಹುದು. ನಿಜ ಹೇಳಬೇಕೆಂದರೆ ನಾವು ವಿಪಕ್ಷಗಳಿಂದ ಪ್ರತಿ ದಿನ ಟೀಕೆಗಳನ್ನು ಎದುರಿಸುತ್ತೇವೆ ಆದರೂ ತಾಳ್ಮೆಯಿಂದಿದ್ದೇವೆ, ನನ್ನನ್ನು ನಂಬಿ”‌ ಎಂದರು.

Leave a Reply

Your email address will not be published. Required fields are marked *

You cannot copy content of this page

error: Content is protected !!