ತಮಿಳುನಾಡು: ರಸ್ತೆ ಅಪಘಾತ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ಯೋಜನೆ ಆರಂಭ
ಚೆನ್ನೈ: ರಾಜ್ಯದಲ್ಲಿ ರಸ್ತೆ ಅಪಘಾತದ ಸಂತ್ರಸ್ತರ ಜೀವ ಉಳಿಸಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರ ಪ್ರಮುಖ ಉಪಕ್ರಮವೊಂದನ್ನು ಆರಂಭಿಸಿದರು. ‘ಇನ್ನುಯಿರ್ ಕಾಪ್ಪೊನ್’ ಹೆಸರಿನ ಈ ಯೋಜನೆಯಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಮೊದಲ 48 ಗಂಟೆಗಳ ಕಾಲ ಉಚಿತ ಚಿಕಿತ್ಸೆ ನೀಡಲಾಗುತ್ತದೆ.
‘ಗೋಲ್ಡನ್ ಹವರ್’ನಲ್ಲಿ ವೈದ್ಯಕೀಯ ಸೇವೆ ನೀಡಲು ಹಾಗೂ ಮಾನವನ ಅಮೂಲ್ಯವಾದ ಜೀವ ಉಳಿಸಲು ರಾಜ್ಯಾದ್ಯಂತ 409 ಖಾಸಗಿ ಆಸ್ಪತ್ರೆಗಳು ಹಾಗೂ 201 ಸರಕಾರಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 609 ಸರಕಾರಿ ಆಸ್ಪತ್ರೆಗಳನ್ನು ಜಾಲವನ್ನು ರೂಪಿಸಲಾಗಿದೆ. ಈ ಯೋಜನೆ ಸಂತ್ರಸ್ತರಿಗೆ 81 ಅಂಗೀಕೃತ ಜೀವ ರಕ್ಷಕ ಚಿಕಿತ್ಸೆಯನ್ನು ಗರಿಷ್ಠ 1 ಲಕ್ಷ ರೂಪಾಯಿ ವರೆಗೆ ನೀಡುತ್ತದೆ.
ಈ ಯೋಜನೆ ಮುಖ್ಯಮಂತ್ರಿ ಸಮಗ್ರ ಆರೋಗ್ಯ ವಿಮಾ ಯೋಜನೆ (ಸಿಎಂಸಿಎಚ್ಐಎಸ್)ಯ ಫಲಾನುಭವಿಗಳು ಹಾಗೂ ಸದಸ್ಯರಲ್ಲದವರನ್ನು ಒಳಗೊಂಡಿರುತ್ತದೆ. ತಮಿಳುನಾಡಿನಲ್ಲಿ ರಸ್ತೆ ಅಪಘಾತದ ಸಂತ್ರಸ್ತರು ಹಾಗೂ ಇಲ್ಲಿಗೆ ಭೇಟಿ ನೀಡುವ ಅಪಘಾತ ಸಂತ್ರಸ್ತರಿಗೆ ಮೊದಲ 48 ಗಂಟೆಗಳ ವರೆಗೆ ಉಚಿತ ವೈದ್ಯಕೀಯ ಸೇವೆಯನ್ನು ಈ ಯೋಜನೆ ನೀಡುತ್ತದೆ ಎಂದು ಸರಕಾರ ಹೇಳಿದೆ.
ಸಿಎಂಸಿಎಚ್ಐಸಿ ಫಲಾನುಭವಿಗಳಿಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲು ಅವಕಾಶ ನೀಡಲಾಗುತ್ತದೆ. ಈ ಯೋಜನೆ ಅಥವಾ ಇತರ ಯಾವುದೇ ವಿಮಾ ಯೋಜನೆಯಲ್ಲಿ ಒಳಪಡದವರಿಗೆ ಆರೋಗ್ಯ ಸ್ಥಿತಿ ಸುಧಾರಿಸಿದ ಬಳಿಕ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗುವುದು ಎಂದು ಅದು ಹೇಳಿದೆ.