ಪೆಗಾಸಸ್ ತನಿಖಾ ಸಮಿತಿ: ಕೇಂದ್ರ, ಪಶ್ಚಿಮ ಬಂಗಾಳ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಹೊಸದಿಲ್ಲಿ: ಪೆಗಾಸಸ್ ಬೇಹುಗಾರಿಕಾ ಆರೋಪಗಳ ಕುರಿತು ತನಿಖೆ ನಡೆಸಲು ಪಶ್ಚಿಮ ಬಂಗಾಳ ಸರಕಾರ ಸಮಿತಿಯೊಂದನ್ನು ರಚಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಇಂದು ಕೇಂದ್ರ ಸರಕಾರ ಮತ್ತು ಪಶ್ಚಿಮ ಬಂಗಾಳ ಸರಕಾರಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮದನ್ ಲೋಕೂರ್ ಹಾಗೂ ಕೊಲ್ಕತ್ತಾ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಜ್ಯೋತಿರ್ಮಯ್ ಭಟ್ಟಾಚಾರ್ಯ ಅವರನ್ನೊಳಗೊಂಡ ಸಮಿತಿಯನ್ನು ಪಶ್ಚಿಮ ಬಂಗಾಳ ಸರಕಾರ ಜುಲೈ 26ರಂದು ಪೆಗಾಸಸ್ ಕುರಿತು ತನಿಖೆಗೆ ರಚಿಸಿತ್ತು. ಆಗಸ್ಟ್ 5ರಂದು ಈ ಸಮಿತಿ ಪತ್ರಿಕೆಗಳಲ್ಲಿ ನೋಟಿಸ್ ಪ್ರಕಟಿಸಿ ಪೆಗಾಸಸ್ ಆರೋಪಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಕೋರಿತ್ತು.
ಇಂತಹ ಒಂದು ಸಮಿತಿಯನ್ನು ರಚಿಸಲು ರಾಜ್ಯ ಸರಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಅರ್ಜಿದಾರ ಸಂಸ್ಥೆ ಗ್ಲೋಬಲ್ ವಿಲೇಜ್ ಫೌಂಡೇಶನ್ ಪಬ್ಲಿಕ್ ಟ್ರಸ್ಟ್ ವಾದಿಸಿದೆ.
ಆದರೆ ಸಮಿತಿ ರಚಿಸಿ ಹೊರಡಿಸಲಾದ ಅಧಿಸೂಚನೆಗೆ ತಡೆ ಹೇರಲು ಸಿಜೆಐ ಎನ್ ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ನಿರಾಕರಿಸಿದೆ. ಅದೇ ಸಮಯ ನ್ಯಾಯಾಲಯವು, ಕೇಂದ್ರ ಸರಕಾರ, ಮಾಹಿತಿ ಮತ್ತು ಪ್ರಸಾರ, ಐಟಿ ಸಚಿವಾಲಯ ಹಾಗೂ ಪಶ್ಚಿಮ ಬಂಗಾಳ ಸರಕಾರಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಇಂತಹ ಸಮಿತಿ ರಚನೆ ಅಸಂವಿಧಾನಿಕ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ವಿಚಾರಣೆ ವೇಳೆ ಹೇಳಿದ್ದಾರೆ.
ಪೆಗಾಸಸ್‍ಗೆ ಸಂಬಂಧಿಸಿದ ಇತರ ಅರ್ಜಿಗಳೊಂದಿಗೆ ಈ ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.