ಮಹಿಳೆಯಾಗಿ ಅಂತಹ ಹೇಳಿಕೆ ತಪ್ಪು:ಸ್ಮೃತಿ ಇರಾನಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ
ಲಕ್ನೊ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬಿಜೆಪಿ ನಾಯಕಿ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿದ್ದು, ಅವರು ಸ್ವತಃ ಮಹಿಳೆಯಾಗಿ ಇಂತಹ ಹೇಳಿಕೆಗಳನ್ನು ನೀಡಬಾರದಿತ್ತು ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ 2022 ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅನ್ನು ಸಜ್ಜುಗೊಳಿಸುತ್ತಿರುವ ರಾಹುಲ್ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ‘ಲಡ್ಕಿ ಹೂ, ಲಡ್ ಸಕ್ತಿ ಹೂ’ (ನಾನು ಹುಡುಗಿ, ಹೋರಾಟ ಮಾಡಬಲ್ಲೆ) ಘೋಷಣೆಗೆ ಪ್ರತಿಕ್ರಿಯೆಯಾಗಿ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿಯವರ ವಿರುದ್ಧ ಹೇಳಿಕೆ ನೀಡಿದ್ದರು.
‘ಘರ್ ಪರ್ ಲಡ್ಕಾ ಹೈ, ಪರ್ ಲಡ್ ನಹೀಂ ಸಕ್ತಾ’ (ಮನೆಯಲ್ಲಿ ಹುಡುಗನಿದ್ದಾನೆ. ಆದರೆ ಅವನಿಗೆ ಹೋರಾಡಲು ಆಗುವುದಿಲ್ಲ) ಎಂದು ರಾಹುಲ್ ಗಾಂಧಿ ಕುರಿತು ಸ್ಮೃತಿ ಇರಾನಿ ನೀಡಿರುವ ಹೇಳಿಕೆ ತಪ್ಪಾಗಿದೆ. ಮಹಿಳೆಯಾಗಿರುವ ಕಾರಣ ಇಂತಹ ಹೇಳಿಕೆ ಸರಿಯಲ್ಲ. ಬದಲಾಗಿ ಮಹಿಳೆಯರನ್ನು ಪ್ರೋತ್ಸಾಹಿಸಬೇಕು. ಅವರು ತಮಗಾಗಿ ಹೋರಾಡಬೇಕು ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಮಹಿಳೆಯರು ರಾಜಕೀಯದಲ್ಲಿ ಪಾಲ್ಗೊಳ್ಳಬೇಕು, ತಮ್ಮ ಶಕ್ತಿಯನ್ನು ಗುರುತಿಸಬೇಕು ಹಾಗೂ ಸಮಾಜದಲ್ಲಿನ ದೌರ್ಜನ್ಯಗಳ ವಿರುದ್ಧ ನಿಲ್ಲಬೇಕು ಎಂದು ಅವರು ಒತ್ತಾಯಿಸಿದರು.