ಇಂಗ್ಲಿಷ್ ಭಾಷೆಗೆ ಹೆದರಿ ವಿಷ ಕುಡಿದ ಬಾಲಕ ಆಸ್ಪತ್ರೆಗೆ ದಾಖಲು
ತುಮಕೂರು; ಇಂಗ್ಲಿಷ್ ಭಾಷೆ ಓದಲು ಕಷ್ಟವಾಗುತ್ತದೆ ಎಂದು ಬಾಲಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರು ತಾಲೂಕಿನ ಉರ್ಡಿಗೆರೆಯಲ್ಲಿ ನಡೆದಿದೆ. 7ನೇ ತರಗತಿ ವಿದ್ಯಾರ್ಥಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಅಘಾತಕಾರಿ ಘಟನೆ ನಡೆದಿದೆ.
ಊರ್ಡಿಗೆರೆ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಬಾಲಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ
ಇಂಗ್ಲಿಷ್ ಓದಲು ಕಷ್ಟವಾಗುತ್ತದೆ ಎಂದು ಹೆದರಿ ಶಾಲೆಗೆ ಹೋಗುವುದಿಲ್ಲ ಎಂದು ಬಾಲಕ ಮನೆಯಲ್ಲಿ ಹಠ ಮಾಡಿದ್ದನು. ಬಾಲಕನ ಮನವೊಲಿಸಿದ್ದ ಪೋಷಕರು ಶಾಲೆಗೆ ಕಳುಹಿಸಿದ್ದರು. ಆದರೆ ಧೃತಿಗೆಟ್ಟ ಬಾಲಕ ಬುಧವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಶಾಲೆಗೆ ಹೋಗುವುದಿಲ್ಲ ಎಂದು ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿದ ಬಾಲಕ ಅಸ್ವಸ್ಥನಾಗಿ ಮನೆಯಲ್ಲಿ ಕುಸಿದು ಬಿದ್ದಿದ್ದನು. ಕೂಡಲೇ ಪೋಷಕರು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಜಿಲ್ಲಾಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಬಾಲಕ ಪ್ರಾಣಾಪಾಯದಿಂದ ಪಾರಾಗಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ
ತುಮಕೂರು ನಗರದ ಕೋತಿ ತೋಪು ಮೂಲದ ಸೋಮಶೇಖರ್, ಜಯಮ್ಮ ದಂಪತಿಯ ಮಗ ಇವನಾಗಿದ್ದು, ಕೂಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿರುವ ಸೋಮಶೇಖರ್ ದಂಪತಿಗಳು ಮಗನ ಕೃತ್ಯದಿಂದ ಕಂಗಲಾಗಿದ್ದಾರೆ.
ಕೂಲಿ ಕೆಲಸ ನಿಮಿತ್ತ ಊರ್ಡಿಗೆರೆ ಗ್ರಾಮಕ್ಕೆ ದಂಪತಿ ವಲಸೆ ಬಂದಿದ್ದಾರೆ. ತುಮಕೂರಿನ ಕೋತಿತೋಪು ಸರ್ಕಾರಿ ಶಾಲೆಯಲ್ಲಿ 6ನೇ ತರಗತಿವರೆಗೂ ಬಾಲಕ ವಿದ್ಯಾಭ್ಯಾಸ ಮಾಡಿದ್ದು, 7ನೇ ತರಗತಿಗೆ ಊರ್ಡಿಗೆರೆಯಲ್ಲಿ ಶಾಲೆಗೆ ಸೇರಿಸಲಾಗಿತ್ತು. ಮೇ 16ನೇ ತಾರೀಕಿನಿಂದ ಶಾಲೆ ಶುರುವಾಗಿದ್ದು, ಬಾಲಕ ಒಂದೆರಡು ದಿನ ಶಾಲೆಗೆ ಸರಿಯಾಗಿಯೇ ಹೋಗಿದ್ದನು.
ಬಳಿಕ ಶಾಲೆಗೆ ಹೋಗುವುದಿಲ್ಲ ಎಂದು ಹಠ ಮಾಡಿದ್ದಾನೆ.
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಕ ನನಗೆ ಇಂಗ್ಲಿಷ್ ಭಾಷೆ ಕಷ್ಟವಾಗಿದ್ದು ಓದಲು ಹಾಗೂ ಬರೆಯಲು ಬರುತ್ತಿಲ್ಲ ಹಾಗಾಗಿ ಇಂಗ್ಲಿಷ್ ಭಾಷೆ ಕಲಿಯಲು ಕಷ್ಟ ವಾಗುತ್ತಿರುವ ಕಾರಣ ಹೆದರಿ ವಿಷ ಕುಡಿದಿರುವ ದಾಗಿ ತಿಳಿಸಿದ್ದಾನೆ.
ಅದೇನೇ ಇರಲಿ ಸರ್ಕಾರ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡುತ್ತಾ ಶಿಕ್ಷಕರಿಗೆ ಲಕ್ಷ ಲಕ್ಷಗಟ್ಟಲೆ ಸಂಬಳಗಳನ್ನು ನೀಡುತ್ತಾ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಣ ಕ್ರಾಂತಿ ಮಾಡಬೇಕು ಎಂದು ಸಾಕಷ್ಟು ಯೋಜನೆಗಳನ್ನು ತರುತ್ತಿದ್ದರು ಸಹ ವಿದ್ಯಾರ್ಥಿಯು ಆತ್ಮಹತ್ಯೆಗೆ ಯತ್ನಿಸಿ ರುವುದು ನಿಜಕ್ಕೂ ಆಘಾತ ತಂದಿದ್ದು. ಇಂತಹ ಘಟನೆಗಳಿಗೆ ಶಿಕ್ಷಕರ ವೈಫಲ್ಯವೋ ವಿದ್ಯಾರ್ಥಿಯ ಮನಸ್ಥಿತಿಯ ಸಮಸ್ಯೆಯೋ ಗೊತ್ತಿಲ್ಲ ಇನ್ನಾದರೂ ವಿದ್ಯಾರ್ಥಿಗಳಿಗೆ ಸರ್ಕಾರ ಕೌನ್ಸಲಿಂಗ್ ಮಾಡುವ ಅವಶ್ಯಕತೆ ಇದ್ದು ವಿದ್ಯಾರ್ಥಿಗಳ ಮನಸ್ಸಿನ ಸ್ಥಿತಿಗಳನ್ನು ಅರ್ಥಮಾಡಿಕೊಂಡು ಹೆಜ್ಜೆ ಇಡುವ ಪರಿಸ್ಥಿತಿಗೆ ಬರುತ್ತಿದ್ದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವೆ ಉತ್ತಮ ಸಂಪರ್ಕ ಬೆಳೆದಾಗ ಮಾತ್ರ ಇಂತಹ ಘಟನೆಗಳಿಗೆ ಕಡಿವಾಣ ಹಾಕಬಹುದು ಎಂದು ಹೇಳಬಹುದು.
ಬಿಇಒ ಭೇಟಿ; ಬಾಲಕನ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಬಿಇಒ ಹನುಮನಾಯಕ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಬಾಲಕನ ಆರೋಗ್ಯ ವಿಚಾರಿಸಿದ್ದಾರೆ. ಇನ್ನೂ ವಿದ್ಯಾರ್ಥಿ ಆರೋಗ್ಯವಾಗಿದ್ದು ಸದ್ಯ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ವರದಿ _ಮಾರುತಿ ಪ್ರಸಾದ್ ತುಮಕೂರು