ತುಮಕೂರು:ಕೊಳಗೇರಿ ಅಭಿವೃದ್ದಿ ಮಂಡಳಿಯಿoದ ದಿಬ್ಬೂರಿನಲ್ಲಿ ನಿರ್ಮಿಸಿರುವ ದೇವರಾಜ ಅರಸು ಬಡಾವಣೆಯಲ್ಲಿ ವಾಸ ಮಾಡುತ್ತಿರುವ ೧೨೦೦ ಕುಟುಂಬಗಳಿಗೂ ಹಕ್ಕು ಪತ್ರ ನೀಡಬೇಕು, ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಹಾಗೂ ಸಾಲವಸೂಲಾತಿಯನ್ನು ಕೈಬಿಡಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಬಾಬಾ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ದಿಬ್ಬೂರಿನ ದೇವರಾಜ ಅರಸು ಬಡಾವಣೆಯ ನಾಗರಿಕರೊಂದಿಗೆ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದ ನಂತರ ಮಾತನಾಡಿದ ಅವರು, ನಗರದಲ್ಲಿರುವ ಅಶಕ್ತರು, ಬಡವರು, ವಸತಿ ರಹಿತರನ್ನು ಗುರುತಿಸಿ , ದಿಬ್ಬೂರಿನ ದೇವರಾಜ ಅರಸು ಬಡಾವಣೆಯಲ್ಲಿ ಮನೆ ಹಂಚಿಕೆ ಮಾಡಲಾಗಿದೆ. ಹಂಚಿಕೆ ಮಾಡುವ ಸಂದರ್ಭದಲ್ಲಿಯೇ ಸಾಮಾನ್ಯ ವರ್ಗದಿಂದ ೧,೧೨,೫೦೦ ರೂ,ಪರಿಶಿಷ್ಟ ಜಾತಿ ಮತ್ತು ಪಂಗಡದವರಿAದ ೪೫ ಸಾವಿರ ರೂ ಮತ್ತು ಅಲ್ಪಸಂಖ್ಯಾತರಿAದ ೩೭,೮೦೦ ಹೀಗೆ ಮುಂಗಡ ಪಡೆದು ಮನೆ ನೀಡಿರುತ್ತಾರೆ.ಮನೆ ಹಂಚಿಕೆ ಮಾಡಿ ಮೂರು ವರ್ಷ ಕಳೆದರೂ ಇದುವರೆಗೂ ಹಕ್ಕು ಪತ್ರ ನೀಡಿಲ್ಲ.ಅಲ್ಲದೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು,ಒಳಚರಂಡಿ,ರಸ್ತೆಗಳು,ವಿದ್ಯುತ್ ಸಂಪರ್ಕ ಸಮರ್ಪಕವಾಗಿಲ್ಲ.ಅಸ್ಪತ್ರೆ, ಸಾರಿಗೆ ಸಂಪರ್ಕ ಕಲ್ಪಿಸಿಲ್ಲ.ಈ ಎಲ್ಲಾ ಕೊರತೆಗಳ ನಡುವೆಯೂ ಜನರು ಇಲ್ಲಿ ಜೀವನ ಮಾಡಿ ಕೊಂಡು ಬರುತ್ತಿದ್ದಾರೆ.ಈಗ ಏಕಾಎಕಿ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ೭೫ ಸಾವಿರ ರೂ ಬಾಕಿ ಮತ್ತು ಅದರ ಮೇಲಿನ ಬಡ್ಡಿ ಪಾವತಿಸುವಂತೆ ನೋಟಿಸ್ ನೀಡಿದ್ದಾರೆ. ಹೀಗಾದರೆ ನಾವು ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.
ದಿಬ್ಬೂರಿನ ದೇವರಾಜ ಅರಸು ಬಡಾವಣೆಯಲ್ಲಿ ಮನೆ ಪಡೆದು ವಾಸ ಮಾಡುತ್ತಿರುವ ಬಹುತೇಕ ಕುಟುಂಬಗಳು ಕೂಲಿ ನಾಲಿ ಮಾಡಿ ಬದುಕುತ್ತಿದ್ದಾರೆ.ಕೋರೋನದಿಂದ ಬದುಕು ನಡೆಸುವುದೇ ದುಸ್ತರವಾಗಿರುವಾಗ ಇಷ್ಟೊಂದು ದೊಡ್ಡ ಮೊತ್ತದ ಹಣ ಪಾವತಿಸಲು ಸಾಧ್ಯವಿಲ್ಲ.ಹಾಗಾಗಿ ನಮ್ಮಿಂದ ಬಾಕಿ ವಸೂಲಿ ಕೈಬಿಟ್ಟು, ಬಡವಾವಣೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಹಕ್ಕು ಪತ್ರ ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ.ಒಂದು ವೇಳೆ ಜಿಲ್ಲಾಡಳಿತ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಬಡಾವಣೆಯಲ್ಲಿರುವ ಎಲ್ಲರೂ ಕುಟುಂಬ ಸಮೇತ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಬಾಬಾ ತಿಳಿಸಿದರು.
ಈ ವೇಳೆ ಬಡಾವಣೆಯ ನಾಗರಿಕರಾದ ಆದೀಲ್, ನಸ್ರೀನಾ, ಮುನಾವರ್ ಪಾಷ, ಸೆಮಿವುಲ್ಲಾ, ಸಾಧಿಕ್‌ವುಲ್ಲಾ ಷರೀಫ್, ಫರ್ಜಾನಾ, ಬೀಬಿಜಾನ್, ಉಸ್ಮಾನಾಖಾನಂ, ಮೆಹರುನ್ನಿಸಾ ಸೇರಿದಂತೆ ಹಲವಾರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.