ನೀಮ್ ಕರೋಲಿ ಬಾಬಾ

ನೀಮ್ ಕರೋಲಿ ಬಾಬಾ

ನೀಮ್ ಕರೋಲಿ ಬಾಬಾ ಕಳೆದ ಶತಮಾನ ಕಂಡ ಸಿದ್ಧಯೋಗಿಗಳಾಗಿ ಪ್ರಸಿದ್ಧಿರಾಗಿದ್ದಾರೆ. ಅಪಲ್ ತಂತ್ರಜ್ಞಾನದ ಪ್ರಸಿದ್ಧ ಸ್ಟೀವ್ ಜಾಬ್ಸ್ ಸಹಾ ಆಧ್ಯಾತ್ಮಿ ಆಗಬಯಸಿ ಇವರನ್ನು ಕಾಣಲಿಕ್ಕೆ ಭಾರತಕ್ಕೆ ಬಂದರೆಂದೂ, ಅವರು ಬರುವ ವೇಳೆಗೆ ನಿಮ್ ಕರೋಲಿ ಬಾಬಾ ನಿಧನರಾಗಿದ್ದರೆಂದೂ ಉಲ್ಲೇಖವಿದೆ. ಇಂದು ನೀಮ್ ಕರೋಲಿ ಬಾಬಾ ಅವರ ಸಂಸ್ಮರಣಾ ದಿನ.

 

ಹಿಮಾಲಯದ ತಪ್ಪಲಿನಲ್ಲಿ ಇರುವ ಉತ್ತರಾಖಂಡ ರಾಜ್ಯದ ನೈನಿತಾಲ್‍ನ ಖಾಂಡತಾಲ್ ಬಳಿ ಇರುವ ಆಂಜನೇಯನ ಅವತಾರ ರೂಪಿ ಎಂದೇ ಭಕ್ತರಲ್ಲಿ ಭಾವಹುಟ್ಟಿಸಿದವರು ನೀಮ್ ಕರೋಲಿ ಬಾಬಾ. ಇವರ ಬಳಿ ಸ್ವತಃ ಆಂಜನೇಯ ನೀಡಿರುವ ಪಾತ್ರೆಯೊಂದು ಇದೆ ಅಂತ ಅಂದಿನ ಭಕ್ತಾದಿಗಳು ಹೇಳುತ್ತಿದ್ದರಂತೆ.‍ ಸದಾ ಕಾಲ ಕಂಬಳಿಯನ್ನು ಹೊದ್ದಿರುತ್ತಿದ್ದ ಬಾಬಾ ಅವರ ದರ್ಶನ ಆಶೀರ್ವಾದ ಪಡೆಯಲು ಮಾಧ್ಯಮ ಪ್ರಚಾರ ಇಲ್ಲದಿದ್ದಂತಹ ಅಂದಿನ ದಿನಗಳಲ್ಲಿಯೂ ಭಾರತೀಯರು ಅಷ್ಟೆ ಅಲ್ಲದೇ ಅನೇಕ ವಿದೇಶೀ ಮಹನೀಯರು ಬರುತ್ತಿದ್ದರು.

 

ನೀಮ್ ಕರೋಲಿ ಬಾಬಾ ಅವರ ಮೂಲ ಹೆಸರು ಲಕ್ಷ್ಮಣದಾಸ್ ಶರ್ಮ. ಇವರು ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಅಕ್ಬರಪುರ್ ಎಂಬಲ್ಲಿ 1900ರಲ್ಲಿ ಜನಿಸಿದರು. ತಂದೆ ದುರ್ಗಾಪ್ರಸಾದ್ ಶರ್ಮ. ಕೇವಲ 11 ವರ್ಷ ವಯಸ್ಸಿನಲ್ಲಿ ಲಕ್ಷ್ಮಣದಾಸ್ ಶರ್ಮ ಅವರಿಗೆ ಮದುವೆ ಮಾಡಲಾಯ್ತು. ಆದರೆ ಮದುವೆ ಆದ ಕೆಲವೇ ದಿನಗಳಲ್ಲಿ ಬಾಬಾ ಮನೆ ಬಿಟ್ಟು ಹೋಗಿ ಸನ್ಯಾಸಿ ಆಗಿಬಿಟ್ಟರು. ಕೇವಲ 17ನೆಯ ವಯಸ್ಸಿನಲ್ಲಿ ಬಾಬಾರಿಗೆ ಬ್ರಹ್ಮಾಂಡದ ಇಡೀ ಜ್ಞಾನಾರ್ಜನೆ ಆಗಿಬಿಟ್ಟಿತ್ತಂತೆ. ಮನೆ ಬಿಟ್ಟು 10 ವರ್ಷಗಳ ನಂತರ ತಂದೆಯವರ ಪ್ರಾರ್ಥನೆಯ ಮೇರೆಗೆ ಮನೆಗೆ ವಾಪಸ್ಸಾಗಿ ವೈವಾಹಿಕ ಜೀವನ ನಡೆಸಿದರು. ಅವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು ಕೂಡ ಜನಿಸಿದರು.

 

ಸನ್ಯಾಸಿಯ ಹಾಗೆ ಅಲೆಮಾರಿ ಜೀವನ ನಡೆಸುತ್ತ ಬಾಬಾ ಎಂದು ಜನ ಗುರುತಿಸಿದ್ದ ಲಕ್ಷ್ಮಣದಾಸ್ ಒಮ್ಮೆ ಅಕಸ್ಮಾತ್ತಾಗಿ ಟಿಕೆಟ್ ಪಡೆಯದೆ ರೈಲೊಂದನ್ನು ಏರಿಯೇ ಬಿಟ್ಟರು. ಮಧ್ಯದಲ್ಲಿ ಟಿಟಿ ಬಂದಾಗ ಟಿಕೆಟ್ ಇಲ್ಲದೆ ಇರುವುದು ಗೊತ್ತಾಗಿ ರೈಲನ್ನು ಅಲ್ಲಿಯೆ ನಿಲ್ಲಿಸಿ ಬಾಬಾರನ್ನು ಹೊರದಬ್ಬಿದನು. ಆದರೆ ಏನೇ ಮಾಡಿದರೂ ಮುಂದೆ ಸಾಗದೆ ರೈಲು ಅಲ್ಲಿಯೇ ನಿಂತುಬಿಟ್ಟಿತು. ಕೆಲ ಸಮಯದ ನಂತರ ರೈಲಿನಲ್ಲಿದ್ದ ಕೆಲವರ ಅಭಿಪ್ರಾಯದಂತೆ ಬಾಬಾರನ್ನು ಮತ್ತೆ ರೈಲಿನೊಳಗೆ ಬರಲು ಪ್ರಾರ್ಥಿಸಲಾಯಿತು. ರೈಲ್ವೇ ಅಧಿಕಾರಿಗಳೂ ಬಂದು ಬೇಡಿದರು. ಪುನಃ ರೈಲು ಹತ್ತಲು ಬಾಬಾ ಎರಡು ಷರತ್ತು ವಿಧಿಸಿದರು. ಮುಂದೆ ಈ ಸ್ಥಳದಲ್ಲಿ ಸಹಾ ರೈಲು ನಿಲ್ದಾಣ ಸ್ಥಾಪಿಸಬೇಕು ಮತ್ತು ಸಾಧುಗಳನ್ನು ಗೌರವದಿಂದ ಕಾಣಬೇಕು ಎಂಬುದೇ ಆ ಷರತ್ತುಗಳು. ಅಲ್ಲಿ ರೈಲು ನಿಲ್ದಾಣ ಬೇಕು ಎಂಬುದಕ್ಕೆ ಕಾರಣ ಆ ಊರಿನ ಸುತ್ತಮುತ್ತಲಿನ ಜನ ರೈಲಿನಲ್ಲಿ ಪಯಣಿಸಲು ಹಲವು ಮೈಲುಗಳವರೆಗೆ ನಡೆದು ಬರಬೇಕಿತ್ತು. ಅದಕ್ಕೆ ಸಮ್ಮತಿಸಲಾಗಿ ಬಾಬಾ, “ಈ ಗಾಡಿಗೆ ಚಲಿಸು ಎಂದು ಹೇಳಲು ನಾನ್ಯಾವನು?!” ಎಂದು ನಸುನಗುತ್ತಾ ರೈಲುಗಾಡಿ ಏರಿದರಂತೆ. ತಕ್ಷಣ ಗಾಡಿ ಚಲಿಸಲು ಸನ್ನದ್ಧವಾಯಿತು. ಆದರೆ ರೈಲು ಚಲಿಸುವ ಮೊದಲು ರೈಲು ಚಾಲನಾ ಸಿಬ್ಬಂಧಿ ಓಡಿ ಬಂದು ಬಾಬಾ ಅವರನ್ನು ಆಶೀರ್ವದಿಸಲು ಬೇಡಿದರು. ಅಂದಿನಿಂದ ಇವರ ಪ್ರಸಿದ್ಧಿ ಹಲವೆಡೆ ಹರಡಿತು. ಅವರ ಷರತ್ತಿನಂತೆ ನೀಬ್ ಕರೋರಿ ಹಳ್ಳಿಯಲ್ಲಿ ಒಂದು ರೈಲು ನಿಲ್ದಾಣ ಮೂಡಿತು. ಹಾಗಾಗಿ ಬಾಬಾರಿಗೆ ಆ ಹೆಸರೇ ಬಂತು. ಕ್ರಮೇಣವಾಗಿ ಉಚ್ಛಾರಣಾ ದೋಷದಿಂದ ಅವರು ನೀಮ್ ಕರೋಲಿ ಬಾಬಾ ಎಂದು ಪ್ರಸಿದ್ಧರಾದರು.

 

ನೀಮ್ ಕರೋಲಿ ಬಾಬಾ ಅವರನ್ನು ಚಮತ್ಕಾರಿ ಬಾಬಾ, ತಲಯ್ಯಾ ಬಾಬಾ, ಹಂಡಿವಾಲಾ ಬಾಬಾ, ಲಕ್ಷ್ಮಣ ದಾಸ್ ಹೀಗೆ ಹಲವು ಊರುಗಳ ಜನ ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಇವರ ವ್ಯಕ್ತಿತ್ವದ ಪ್ರಭಾವ ಎಷ್ಟಿತ್ತೆಂದರೆ ಅನೇಕ ವಿದೇಶಿ ಭಕ್ತರು ಇವರ ಆಧ್ಯಾತ್ಮಿಕತೆಯಿಂದ ಪ್ರಭಾವ ಹೊಂದಿ ಹಿಂದುಗಳಾಗಿ ಪರಿವರ್ತಿತರಾಗಿದ್ದರು. ಆ ಸಾಲಿನಲ್ಲಿ ಇಬ್ಬರು ಪ್ರಸಿದ್ಧ ವ್ಯಕ್ತಿಗಳೆಂದರೆ ರಾಮ್ ದಾಸ್ (ಡಾ. ರಿಚರ್ಡ್ ಅಲ್ಪರ್ಟ್) ಹಾಗೂ ಭಗವಾನ್ ದಾಸ್ (ಮೈಕೆಲ್ ರಿಗ್ಸ್). ಇವರು ನೀಮ್ ಕರೋಲಿ ಬಾಬಾ ಅವರ ಅನುಯಾಯಿಗಳಾಗಿದ್ದರು ಹಾಗೂ ಹಿಂದು ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯಿಂದ ಸಾಕಷ್ಟು ಪ್ರಭಾವಿತರಾದವರು. ಸಂಗೀತಗಾರರಾದ ಕೃಷ್ಣದಾಸ್ ಮತ್ತು ಜೈ ಉತ್ತಲ್ ಅವರು ಸಹಾ ಇವರ ಪ್ರಮುಖ ಅನುಯಾಯಿಗಳಾಗಿ ಹೆಸರಾಗಿದ್ದಾರೆ. ವಿಶ್ವಪ್ರಖ್ಯಾತ ನಟಿ ಜೂಲಿಯಾ ರಾಬರ್ಟ್ಸ್ ನೀಮ್ ಕರೋಲಿ ಬಾಬಾ ಅವರ ಬೋಧನೆಗಳ ಪ್ರಭಾವದಿಂದ ಕಳೆದ ದಶಕದಲ್ಲಿ ಹಿಂದೂ ಧರ್ಮದವರಾಗಿ ಬದುಕು ನಡೆಸುತ್ತಿದ್ದಾರಂತೆ.

 

1962ರ ದಶಕದಲ್ಲಿ ಬಾಬಾ ಅವರು ಕೈಂಚಿ ಹಳ್ಳಿಯಲ್ಲಿ ದೇವಸ್ಥಾನದ ರೀತಿಯಲ್ಲಿ ಮಠ ಒಂದನ್ನು ನಿರ್ಮಿಸಿದರು. ಮುಂದೆ ಅವರ ಹೆಸರಿನಲ್ಲಿ ನೂರಾರು ದೇಗುಲಗಳು ತಲೆ ಎತ್ತಿದವು. ಇಂದಿಗೂ ನೀಮ್ ಕರೋಲಿ ಬಾಬಾಗೆ ಜಗತಿನಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಅವರಿಗೆ ಮುಡಿಪಾದ ಕೆಲವು ಸ್ಥಳಗಳನ್ನು ಉತ್ತರ ಭಾರತದ ಹಲವೆಡೆ ಕಾಣಬಹುದು. ಅದರಲ್ಲೂ ವಿಶೇಷವಾಗಿ ಕೈಂಚಿಧಾಮವು ಸಾಕಷ್ಟು ಮಹತ್ವ ಪಡೆದ ಕ್ಷೇತ್ರವಾಗಿದ್ದು ಉತ್ತರಾಖಂಡದ ನೈನಿತಾಲ್ ನಿಂದ ಕೇವಲ 17 ಕಿ.ಮೀ ದೂರದಲ್ಲಿ ಅಲ್ಮೋರಾ ಮಾರ್ಗದಲ್ಲಿದೆ. ಇಲ್ಲಿ ಆಂಜನೇಯನ ದೇವಾಲಯವನ್ನು ಪ್ರಮುಖವಾಗಿ ಕಾಣಬಹುದು.

 

ತಮ್ಮ ಕೊನೆಯ ಸಮಯದಲ್ಲಿ ಸಾಕಷ್ಟು ಭಕ್ತ ಜನರನ್ನು ಗಳಿಸಿದ್ದ ನೀಮ್ ಕರೋಲಿ ಬಾಬಾ ಅದೇ ಹಳ್ಳಿಗೆ ಬಂದು ನೆಲೆಸಿದರು. ಕೈಂಚಿ ಎಂಬಲ್ಲಿ ಈ ಆಶ್ರಮವಿದ್ದು ಇಂದಿಗೂ ಜೂನ್ ಸಂದರ್ಭದಲ್ಲಿ ಇಲ್ಲಿ ನಡೆಯುವ ಉತ್ಸವದಲ್ಲಿ ಪ್ರಪಂಚಾದ್ಯಂತ ಭಕ್ತರು ಭೇಟಿ ನೀಡುತ್ತಾರೆ.

 

ನಾನು “ಯಾರೂ ಅಲ್ಲ (nobody)” ಎನ್ನುತ್ತಿದ್ದ ನೀಮ್ ಕರೋಲಿ ಬಾಬಾ ದೊಡ್ಡ ಪ್ರವಚನಗಳನ್ನು ನೀಡಿದವರಲ್ಲ. ಅತಿ ಸಣ್ಣ ಸರಳ ಕಥೆಗಳು ಅವರ ಉಪದೇಶಗಳಂತೆ ಇರುತ್ತಿದ್ದವು. ಸಾಮಾನ್ಯವಾಗಿ ಕಂಬಳಿ ಹೊದಿಸಿದ ಮರದ ಬೆಂಚಿನ ಮೇಲೆ ಅವರು ಕೂರುತ್ತಿದ್ದರು. ಅವರ ಸುತ್ತ ಒಂದಷ್ಟು ಜನ. ಇದು ಅವರ ಕುರಿತು ಕಾಣುವ ಚಿತ್ರಣ. ಬರುವವರಿಗೆ ಆಹಾರ, ಕೆಲವೊಂದು ಹಾಸ್ಯಭರಿತ ಮಾತು, ಸಮ್ಮತಿ, ತಲೆಯ ಮೇಲೆ ಅಥವಾ ಬೆನ್ನಿನ ಮೇಲೆ ಆಪ್ತತೆಯಿಂದ ಕೈಯಿಟ್ಟು ಹೋಗಿಬನ್ನಿ ಎಂದು ಕಳಿಸುವುದು ಅವರ ರೀತಿನೀತಿ. ಕೆಲವೊಮ್ಮೆ ತಮ್ಮ ಸುತ್ತಲಿನ ಪರಿವೆ ಇಲ್ಲದೆ ತಮ್ಮದೇ ಅದ, ಯಾವುದೂ ಅಲ್ಲದ, ಎಲ್ಲ ಎಲ್ಲೆಗಳನ್ನು ಮೀರಿದ ಲೋಕದಲ್ಲಿ ಪೂರ್ಣ ಶಾಂತಿಯಲ್ಲಿ ಅವರು ಸಂಸ್ಥಾಪಿತರಾಗಿರುತ್ತಿದ್ದರು.

 

ನೀಮ್ ಕರೋಲಿ ಬಾಬಾ 1973ರ ಸೆಪ್ಟೆಂಬರ್ 10 ರಂದು ಈ ಲೋಕವನ್ನಗಲಿದರು. ಇವರ ಪ್ರತಿಮೆಯನ್ನು ಕೈಂಚಿ ಆಶ್ರಮದಲ್ಲಿ ಸ್ಥಾಪನೆ ಮಾಡಲಾಗಿದೆ.

 

ಕೈಂಚಿ, ನೀಮ್ ಕರೋಲಿ ಅಲ್ಲದೆ ವೃಂದಾವನ, ರಿಷಿಕೇಶ, ಸಿಮ್ಲಾ, ಭೂಮಿಯಾಧರ್, ಹನುಮಾನ್‍ಗರ್ಹಿ, ಲಕ್ನೋ, ದೆಹಲಿ, ತಾವೋಸ್, ನ್ಯೂ ಮೆಕ್ಸಿಕೊ, ಅಮೆರಿಕಗಳಲ್ಲಿ ಅವರ ಹೆಸರಿನ ಆಶ್ರಮಗಳಿವೆ.

Leave a Reply

Your email address will not be published. Required fields are marked *

You cannot copy content of this page

error: Content is protected !!