ಈ ಹುಡುಗಿ, ತನ್ನ ಏಳನೆ ವಯಸ್ಸಿನಿಂದಲೇ ಹಾಡುಗಳಿಂದ ಹಣ ಸಂಗ್ರಹಿಸಿ, 2200 ಕ್ಕೂ ಹೆಚ್ಚು ಬಡ ಮಕ್ಕಳಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾಳೆಂದರೆ ನಂಬುತ್ತೀರಾ?
ಆ ಜೀವಂತ ದಂತಕಥೆಯ ಹೆಸರು “ಫಲಕ ಮುಚ್ಚಲ್”. ಮದ್ಯಪ್ರದೇಶದ ಇಂಧೋರ್ ನಗರದಲ್ಲಿನ ಸಾಧಾರಣ ಕುಟುಂಬದ ರಾಜಕುಮಾರ್ ಮುಚ್ಚಲ್, ಅಮಿತಾ ಮುಚ್ಚಲ್ ದಂಪತಿಗಳಿಗೆ 1992 ರಲ್ಲಿ ಜನಿಸಿದವಳು. ಹುಟ್ಟುತ್ತಲೇ ಹಾಡು ಸಂಗೀತದ ವಿಪರೀತ ಆಸಕ್ತಿಯ ಹುಡುಗಿಯದು.
ಅಂತಹ ಕುಟುಂಬಕ್ಕೆ ಇನ್ನೊಬ್ಬರಿಗೆ ಸಹಾಯ ಮಾಡುವದರಿಂದ ಸಿಗುವ ಆತ್ಮ ತೃಪ್ತಿ ಮತ್ತು ಗೌರವ ಎಂತಹದೆಂದು ಅರಿವಿಗೆ ಬಂದದ್ದು 1999 ರ ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ. ವೀರ ಸ್ವರ್ಗ ಸೇರಿದ ಯೋಧರ ಕುಟುಂಬಕ್ಕೆ ದೇಶದ ಮೂಲೆ ಮೂಲೆಯಿಂದ ಆರ್ಥಿಕ ನೆರವು ಹರಿದು ಬರುವುದನ್ನು ಮಾದ್ಯಮಗಳಿಂದ ತಿಳಿಯುತ್ತಿದ್ದ ಆ ಕುಟುಂಬಕ್ಕೆ ತಮ್ಮ ಕೈಲಾದಷ್ಟು ನೆರವಾಗಬೇಕೆಂಬ ಆಸೆ ಬಂದದ್ದೆ ತಡ, ಫಲಕ್ ಬೀದಿ ಬದಿಗಳಲ್ಲಿ, ಅಂಗಡಿಗಳ ಮುಂದೆ ದೇಶ ಭಕ್ತಿಯ ಗೀತೆ ಹಾಡಿ ಕಾರ್ಗಿಲ್ ಸಂತ್ರಸ್ಥರ ನಿಧಿಗೆ ಹಣ ನೀಡಿ ಎಂದಳು. ಆ ಪೋರಿಯ ಮಾತು ಜನರ ಎದೆ ತಟ್ಟಿತು. ಹೀಗೆ ಒಂದು ವಾರ ಶಾಲೆ ಬಿಟ್ಟ ನಂತರ ಹಾಡಿ ಸಂಗ್ರಹಿಸಿದ ಒಟ್ಟು ಹಣ 25000 ರೂ. ಕಾರ್ಗಿಲ್ ಸಂತ್ರಸ್ಥರ ನಿಧಿಗೆ ತಲುಪಿತು.
ಮುಂದೆಯೂ ಭೂಕಂಪ, ಚಂಡಮಾರುತ ಬೀಸಿದ ಸಂದರ್ಭದಲ್ಲಿ ಹಾಡಿ ಹಣ ಸಂಗ್ರಹಿಸಿ ಸಂತ್ರಸ್ತರ ನಿಧಿಗೆ ಕಳುಹಿಸಿದ್ದಳು.
ಒಮ್ಮೆ, ತಮ್ಮದೇ ಶಾಲೆಯಲ್ಲಿ ಓದುತ್ತಿದ್ದ ಲೋಕೇಶ್ ಎಂಬ ಹುಡುಗ ಹೃದಯ ತೊಂದರೆಯಿಂದ ಗಂಭೀರ ಸ್ಥಿತಿಯಲ್ಲಿದ್ದ. ಆತನ ತಂದೆ ಶೂ ಅಂಗಡಿಯ ಸಹಾಯಕ, ಕಡು ಬಡವ. ಶಾಲೆಯ ಪ್ರಿನ್ಸಿಪಾಲ್ ಫಲಕ್ ಮತ್ತು ಅವರ ತಂದೆ ತಾಯಿಗೆ ವಿಷಯ ತಿಳಿಸಿ, ‘ಒಂದು ಪ್ರೊಗ್ರಾಂ ಮಾಡಿ ಕೊಡಿ, ಬಂದ ಹಣದಿಂದ ಹುಡುಗನ ಚಿಕಿತ್ಸೆ ಮಾಡಿಸೋಣ’ ಎಂದ. ಅವರು ತಕ್ಷಣ ಒಪ್ಪಿಕೊಂಡರು.
ಮಗುವಿನ ಚಿಕಿತ್ಸೆಗೆ ಚಿಕ್ಕ ಹುಡುಗಿ ಹಾಡಲು ನಿಂತದ್ದು ಪತ್ರಿಕೆಗಳ ಮೂಲಕ ದೊಡ್ಡ ಸುದ್ಧಿಯಾಯ್ತು. ಜನ ತಂಡೋಪತಂಡವಾಗಿ ಬಂದರು. ಅದೊಂದೆ ಪ್ರೋಗ್ರಂನಿಂದ ಸಾಕಷ್ಟು ಹಣವೂ ಸಂಗ್ರಹವಾಯ್ತು. ಈ ಎಲ್ಲ ವಿವರವನ್ನು ಪತ್ರಿಕೆಗಳ ಮೂಲಕ ತಿಳಿದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಡಾ! ದೇವಿ ಶೆಟ್ಟಿ ಮತ್ತು ತಂಡ ಉಚಿತವಾಗಿ ಆ ಹುಡುಗನಿಗೆ ಚಿಕಿತ್ಸೆ ನೀಡಿದರು.
ಚಿಕಿತ್ಸೆಗಾಗಿ ಸಂಗ್ರಹಿಸಿದ ಹಣ ಕುಟುಂಬದ ಬಳಿ ಹಾಗೆಯೇ ಉಳಿಯಿತು.ಬೇರೆಯವರಾಗಿದ್ದರೆ ಸುಮ್ಮನೆ ಇದ್ದುಬಿಡುತ್ತಿದ್ದರೇನೋ? ಪ್ರಾಮಾಣಿಕತೆಯ ಪರೀಕ್ಷೆಯಾಗುವುದು ಆಗಲೇ. ಅವರು ಸಂಘಟಕರು ಮತ್ತು ಪ್ರಮುಖ ದಾನಿಗಳಿಗೆ ಆ ಹಣ ತಗೆದುಕೊಂಡು ಹೋಗಲು ತಿಳಿಸಿದರು. ಅದನ್ನು ತಿರಸ್ಕರಿಸಿದ ದಾನಿಗಳು “ಬೇರೆ ಬಡ ಮಕ್ಕಳ ಚಿಕಿತ್ಸೆಗೆ ಬಳಸಿ” ಎಂದು ಸೂಚಿಸಿದರು.
“ಮಗುವಿಗೆ ಹೃದ್ರೋಗ ತೊಂದರೆಯಿರುವ ಬಡ ಕುಟುಂಬದ ಸದಸ್ಯರು ಸಂಪರ್ಕಿಸಿ” ಎಂದು ಜಾಹಿರಾತು ನೀಡಲಾಯಿತು. ಆದರೆ ಬಂದದ್ದು ಮಾತ್ರ ಹೃದ್ರೋಗ ತೊಂದರೆಯ ಎಂಟು ಮಕ್ಕಳ ಪಾಲಕರು. ಅವರ ಹತ್ತಿರ ಇದ್ದ ಹಣ ಒಂದು ಮಗುವಿನ ಚಿಕಿತ್ಸೆಗಾಗುವಷ್ಟು ಮಾತ್ರ. ಆ ಕುಟುಂಬ ಹಿಂಜರಿಯಲಿಲ್ಲ. ಇಂಧೋರಿನ ಪ್ರಮುಖ ಸಂಘ ಸಂಸ್ಥೆಗಳನ್ನು ಸಂಪರ್ಕಿಸಿ ‘ತಾನು ಸ್ಟೇಜ್ ಷೊ ಕೊಡುತ್ತೇನೆ, ಮಕ್ಕಳ ಚಿಕಿತ್ಸೆಗೆ ಹಣ ಕೂಡಿಸಿಕೊಟ್ಟರೆ ಸಾಕು, ತನಗೆ ಸಂಭಾವನೆ ಬೇಡ, ಒಂದು ಗೊಂಬೆ ಕೊಟ್ಟರೆ ಸಾಕು’ ಎಂಬ ಬೇಡಿಕೆ ಇಟ್ಟಳು. ಫಲಕ್ ಹಾಡುಗಾರಿಕೆ, ಅವರ ಉದ್ದೇಶ ಮತ್ತು ಪ್ರಾಮಾಣಿಕತೆ ಗೊತ್ತಿದ್ದ ಜನ ಆಕೆಯ ಕೈ ಬಿಡಲಿಲ್ಲ.
ಆ ನಂತರ ನಡೆದದ್ದೆಲ್ಲ ಇತಿಹಾಸ.
ಆಕೆಯ ಈ ಸತ್ಕಾರ್ಯ ಹೆಚ್ಚು ಹೆಚ್ಚು ಪ್ರಚಾರವಾದಂತೆಲ್ಲ ಹೊರ ರಾಜ್ಯಗಳಿಂದ ಹೃದಯ ತೊಂದರೆಯಿರುವ ಬಡ ಮಕ್ಕಳ ಪಾಲಕರು ಆಕೆಯ ಮನೆಗೆ ಬರತೊಡಗಿದರು. ಆಗ ಶುರುವಾಯ್ತು “ಫಲಕ್ ಹಾರ್ಟ್ ಫೌಂಡೇಶನ್”ನ ಹೃದಯದಿಂದ ಹೃದಯಕ್ಕೆ ಕಾರ್ಯಕ್ರಮ.
ದೇಶದ ಪ್ರಮುಖ ನಗರಗಳ ಸೇವಾ ಸಂಸ್ಥೆಗಳನ್ನು ಸಂಪರ್ಕಿಸಿ “10 ವರ್ಷದೊಳಗಿನ ಮಕ್ಕಳ ಹೃದಯ ಚಿಕಿತ್ಸೆಗೆ ಹಣ ಸಂಗ್ರಹಿಸುವದು ನನ್ನ ಗುರಿ, ಒಂದು ಕಾರ್ಯಕ್ರಮದಿಂದ ಒಂದು ಮಗುವಿನ ಚಿಕಿತ್ಸೆಗಾದರೂ ಅನಕೂಲವಾಗಬೇಕು. ನನಗೆ ಸಂಭಾವನೆ ಬೇಡ, ಒಂದು ಗೊಂಬೆ ಕೊಡಿ ಸಾಕು” ಎಂದು ವಿನಂತಿಸಿದಳು.
ದೇಶದ ಮೂಲೆ ಮೂಲೆಯಿಂದ ಬಡ ಮಕ್ಕಳ ಹೃದಯ ಚಿಕಿತ್ಸೆಗೆ ನೆರವು ಯಾಚಿಸಿ ಬೇಡಿಕೆ ಬಂದಂತೆ, ದೇಶದ ಪ್ರಮುಖ ನಗರಗಳಿಂದ ಹಾಡಲು ಆಹ್ವಾನ ಬರ ತೊಡಗಿದವು. ಹೋದ ಕಡೆ ಅಲ್ಲಿಯ ಭಾಷೆಯಲ್ಲಿಯೇ ಹಾಡಲು ಕನ್ನಡವೂ ಸೇರಿ 17 ಭಾಷೆ ಕಲಿತಿದ್ದಾಳೆ. ನಮ್ಮ ದೇಶವಲ್ಲದೇ ಲಂಡನ್ ದುಬೈ ಬ್ಯಾಂಕಾಕ್ ಬೆಲ್ಜಿಯಮ್ ಸೇರಿ ದಂತೆ ವಿದೇಶಗಳಲ್ಲೂ ಸ್ಟೇಜ್ ಷೊ ನೀಡಿದ್ದಾಳೆ. ಹಣವೂ ಸಾಕಷ್ಟು ಹರಿದು ಬಂದಿದೆ. ಚಿಕ್ಕ ಮಕ್ಕಳಿಗೆ ಮರು ಜನ್ಮ ನೀಡಿದೆ.
7 ನೇ ವಯಸ್ಸಿನಿಂದ ಹಾಡಲು ಪ್ರಾರಂಭಿಸಿದ ಫಲಕ್ ಇಲ್ಲಿಯವರೆಗೂ ಮುಂದುವರಿಸಿದ್ದಾಳೆ. ಹಿಂದಿನ ವರ್ಷದ ಸೆಪ್ಟೆಂಬರ್ ವೇಳೆಗೆ 2200 ಮಕ್ಕಳ ಹೃದಯದ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾಳೆ. ಈಗ ಆಕೆಯ ತಮ್ಮನೂ ಷೊನಲ್ಲಿ ಮಿಮಿಕ್ರಿ ಮಾಡುತ್ತ ಭಾಗಿಯಾಗಿದ್ದಾನೆ. ಆಸ್ಪತ್ರೆಗಳು ಆಕೆಯ ರೋಗಿಗಳಿಗೆ ರಿಯಾಯತಿ ನೀಡುತ್ತಿವೆ. ಅಬ್ದುಲ್ ಕಲಾಂ, ಅಮಿತಾಭ್, ಶೇಖರ್ ಕಪೂರ್, ಸಲ್ಮಾನ್ ಬೆನ್ನು ತಟ್ಟಿದ್ದಾರೆ. ಆಕೆಯ ಸಾಧನೆಗೆ ಗಿನ್ನೆಸ್ ದಾಖಲೆ ಹೆಗಲೇರಿದೆ. ಲಿಮ್ಕಾ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದ್ಧಾಳೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪಡೆದಿದ್ದಾಳೆ. ಸರಿಗಮಪ ದಲ್ಲಿ ಭಾಗವಹಿಸಲು ಹೋದರೆ ನೀನು ಸ್ಪರ್ಧಿಯಾಗಿ ಬರಬಾರದು ಅತಿಥಿಯಾಗಿ ಬರಬೇಕು ಎಂದು ಸಂಘಟಕರು ವೇದಿಕೆಗೆ ಕರೆದು ಗೌರವಿಸಿದ್ದಾರೆ. ಹಲವಾರು ನಿರ್ಮಾಪಕರು ತಮ್ಮ ಚಿತ್ರಗಳಿಗೆ ಹಾಡಿಸಿದ್ದಾರೆ.
ಸುಮಾರು 21 ವರ್ಷಗಳಲ್ಲಿ ಸಾಧಿಸಿದ ಆಕೆಯ ಈ ಸಾಧನೆಯ ಕಥೆ, ಜನ ಸಾಮಾನ್ಯರೂ ಮನಸ್ಸು ಮಾಡಿದರೆ ಹೇಗೆ ಜನೋಪಕಾರಿಯಾಗಿ ಬದುಕ ಬಹುದು ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ.
ಈಗ ಫಲಕ್ ಮನೆಯ ಶೋಕೇಸಿನಲ್ಲಿ 2200 ಕ್ಕೂ ಅಧಿಕ ಚೆಂದನೆಯ ಗೊಂಬೆಗಳು 2200 ಬಡ ಕುಟುಂಬಗಳ ಪಾಲಕರ ನೆಮ್ಮದಿಯ ನಗುವಿನ ಸಾಕ್ಷಿಯಾಗಿ ಕುಳಿತಿವೆ. ಆಕೆಯ ಸಾಧನೆಯ ಕಥೆ ಹೇಳುತ್ತವೆ. ❤️
–ಅಮರೇಶ ದೇಸಾಯಿ.