ಮೈಸೂರು
ಸರ್ಕಾರಕ್ಕೆ ದುಡ್ಡು ಹೊಡೆಯುವುದು ಬಿಟ್ಟರೆ ಬೇರೆ ಕೆಲಸವೇ ಇಲ್ಲ ಎಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರಿನಲ್ಲಿಂದು ಕೊರೋನಾ ಹೆಚ್ಚುತ್ತಿರುವ ರಾಜ್ಯದ ಗಡಿ ಭಾಗಗಳಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಲು ಸರ್ಕಾರ ಶಿಸ್ತು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗುತ್ತಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಕೇರಳ, ಬೇರೆ ಯಾವುದೇ ಕಡೆಯಿಂದ ಬರುವವರ ಕುರಿತು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಕೊರೋನಾ ಎರಡನೇ ಅಲೆ ಶುರುವಾಗತ್ತೆ ಅಂತ ಗೊತ್ತಿದ್ದರೆ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು, ಸರ್ಕಾರಕ್ಕೆ ಯಾವುದರಲ್ಲೂ ಸಿರಿಯಸ್ ನೆಸ್ ಇಲ್ಲ, ದುಡ್ಡು ಹೊಡೆಯುವುದರಲ್ಲಿ ಮಾತ್ರ ಸಿರಿಯಸ್ ನೆಸ್ ಇದೆ. ದುಡ್ಡು ಹೊಡೆಯುವುದು ಬಿಟ್ಟರೆ ಬೇರೆ ಕೆಲಸವಿಲ್ಲ, ಅಭಿವೃದ್ಧಿ ಕೆಲಸವಂತೂ ಮಾಡಲ್ಲ. ಎಲ್ಲಿ ಖರ್ಚು ಬರತ್ತೆ ಅಲ್ಲಿ ದುಡ್ಡು ಹೊಡೆಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಮೈಸೂರು ಪಾಲಿಕೆ ಮೇಯರ್ ಚುನಾವಣಾ ಮೈತ್ರಿಗೆ ಹಸಿರು ನಿಶಾನೆ ತೋರಿದ ಅವರು ಒಗ್ಗಟ್ಟಾಗಿರಲು ಹೇಳಿದ್ದೇನೆ. ಯಾವುದೇ ತೀರ್ಮಾನ ಮಾಡಬೇಡಿ, ಚುನಾವಣೆನಲ್ಲಿ ನಾವು ಯಾರ ಮೇಲೂ ಮೈಮೇಲೆ ಬಿದ್ದು ಅಧಿಕಾರ ಮಾಡಲು ಹೋಗಬಾರದು. ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಒಂದು ಒಪ್ಪಂದ ಆಗಿತ್ತು. . ಹಿಂದೆ ಜೆಡಿಎಸ್ ನವರು ಮೇಯರ್ ಆಗಿದ್ದರು, ಈ ಬಾರಿ ಕಾಂಗ್ರೆಸ್ ಗೆ ಮೇಯರ್ ಗಿರಿ ಬರಬೇಕು, ಆತರ ಏನಾದರೂ ಇದ್ದರೆ ಮಾಡಿ ಎಂದಿದ್ದೇನೆ ಎಂದರು.
ಮೈತ್ರಿ ಮುಂದುವರಿಯುತ್ತಾ ಎಂಬ ಪ್ರಶ್ನೆಗೆ ಯಾವ ಮೈತ್ರಿರಿ ಎಂದು ಹಾಸ್ಯ ಚಟಾಕಿ ಹಾರಿಸಿದ ಅವರು ಮೇಯರ್ ಆಗಲೇಬೇಕಲ್ವಾ? ಒಪ್ಪಂದ ಹಿಂದೆ ಆಗಿತ್ತು. ಅವರಾಗೇ ಬಂದರೆ ಮೈತ್ರಿ ಮಾಡಿಕೊಳ್ಳಿ ಎಂದು ಸಲಹೆ ನಿಡಿರುವುದಾಗಿ ತಿಳಿಸಿದರು.
ಬಜೆಟ್ ನಿರೀಕ್ಷೆಯ ಕುರಿತು ಪ್ರತಿಕ್ರಿಯಿಸಿ ರಾಜ್ಯಪಾಲರ ಭಾಷಣದಲ್ಲಿ ನಿರೀಕ್ಷೆ ಇಲ್ಲ, ಬಜೆಟ್ ಬಗ್ಗೆಯೂ ಯಾವುದೇ ನಿರೀಕ್ಷೆಯೂ ಇಲ್ಲ. ಇರೋ ಕಾರ್ಯಕ್ರಮಗಳನ್ನು ಹೊಂದಿಸೋಕೆ ಸರ್ಕಾರದಲ್ಲಿ ದುಡ್ಡಿಲ್ಲ, ಅಕ್ಕಿನೇ ಕಡಿಮೆ ಮಾಡಬೇಕು ಅಂತಿದ್ದಾರೆ. ಇನ್ನೇನು ಬಜೆಟ್ ನಿಂದ ನಿರೀಕ್ಷೆ ಇರತ್ತೆ ಎಂದರು
ಉಮೇಶ್ ಕತ್ತಿ ಹೇಳಿಕೆ ನೀಡಿದ್ದರು. ಮೋಟಾರ್ ಬೈಕ್, ಟಿವಿ, ಪ್ರಿಡ್ಜ್ ಇರೋರಿಗೆ ಅಕ್ಕಿ ಕೊಡಲ್ಲ ಅಂತ, ಅದಕ್ಕೆ ಪ್ರಬಲವಾಗಿ ಪ್ರತಿಕ್ರಿಯೆ ಬಂತು ಅದಕ್ಕೆ ಈಗ ಉಲ್ಟಾ ಆಗಿದ್ದಾರೆ. ಅವರ ತಲೆನಲ್ಲಿ ಏನಿದೆ ಅನ್ನೋದು ಗೊತ್ತಾಗುತ್ತಿದೆ ಎಂದು ಕಿಡಿಕಾರಿದರು.
ಪೆಟ್ರೋಲ್ ಡೀಸೆಲ್ ಬೆಲೆ ಗ್ಯಾಸ್ ಬೆಲೆ ಏರುತ್ತಿದೆ ಅದಕ್ಕಾಗಿಯೇ ಅಗತ್ಯ ವಸ್ತುಗಳ ಬೆಲೆ ಏರುತ್ತದೆ. ಅವು ಒಂದಕ್ಕೊಂದು ಸಂಬಂಧ. ಟ್ರಾನ್ಸಪೋರ್ಟ್ ಮಾಡಬೇಕೋ ಬೇಡವೋ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.
ಬಜೆಟ್ ಮಂಡಿಸಿದರೆ ಎಲ್ಲದಕ್ಕೂ ಉತ್ತರವಾಗಲಿದೆ ಎಂದಿರುವ ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ನಾನು ಸದನದಲ್ಲಿ ಹೇಳಿದ್ದಕ್ಕೇ ಉತ್ತರ ಕೊಟ್ಟಿಲ್ಲ ಅವರು. ರಾಜ್ಯಪಾಲರ ಭಾಷಣದ ಮೇಲೆ ಮೂರು ಗಂಟೆ ಪ್ರಶ್ನೆ ಮಾಡಿದ್ದೆ , ಏನೋ ಬರೆದುಕೊಂಡು ಬಂದರು ಅದನ್ನೇ ಓದಿ ಹೋಗಿದ್ದಾರೆ, ಅವರಿಂದ ಬಜೆಟ್ ನಿರೀಕ್ಷೆ ಏನಿರತ್ತೆ ಎಂದು ಟೀಕಿಸಿದರು.
ರಾಮಮಂದಿರ ನಿರ್ಮಾಣ ದೇಣಿಗೆ ಹಣದ ಲೆಕ್ಕ ಕೇಳಲು ಇವರ್ಯಾರು ಎಂದಿದ್ದ ಬಿಜೆಪಿ ನಾಯಕರ ಪ್ರಶ್ನೆಗೆ ಪ್ರತಿಕ್ರಿಯಿಸಿ ನಾನು ಈ ದೇಶದ ಪ್ರಜೆ. ದುಡ್ಡುಕೊಟ್ಟವರು ಮಾತ್ರ ಕೇಳಬೇಕು ಅಂತೇನು ಇಲ್ಲ, ಹಿಂದೆ ಇಟ್ಟಿಗೆ, ದುಡ್ಡು ತಗೊಂಡು ಹೋದರೋ ಇಲ್ಲವೊ ನೀವೂ ಕೇಳಬಹುದು ಎಂದು ಮಾಧ್ಯಮದವರಿಗೂ ಸಲಹೆ ನೀಡಿದರು.
ನೀನು ದುಡ್ಡು ಕೊಟ್ಟಿದ್ದೀಯಾ ಎಂದು ಪತ್ರಕರ್ತರನ್ನೇ ಪ್ರಶ್ನಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಆಗ ತಗೊಂಡು ಹೋಗಿದ್ರಲ್ಲಪ್ಪ, ಅದರ ಲೆಕ್ಕ ಕೊಟ್ಟಿದ್ದಾರಾ? ಒಂದೂವರೆಸಾವಿರ ಕೋಟಿ ಕಲೆಕ್ಷನ್ ಆಗಿದೆ ಅಂತ ಹೇಳಿದ್ದಾರೆ, ಅದರ ಲೆಕ್ಕಕೊಡಬೇಕಲ್ಲ, ಅದು ಸಾರ್ವಜನಿಕರ ಹಣ, ನಾನು ಭ್ರಷ್ಟಾಚಾರ ಅಂತ ಹೇಳಕೋಗಲ್ಲ, ಅದರ ಲೆಕ್ಕ ಕೊಡಬೇಕು ಅವರು. ಯಾರು ಕೊಡ್ತಾರೆ ಅವರ ಮನೆ ಚೀಟಿ ಅಂಟಿಸಿ ಬರುತ್ತಾರೆ ಅನ್ನಲಾಗುತ್ತಿದೆ. ಅದು ಲೆಕ್ಕ ಅಲ್ಲ, ಅದು ಪಕ್ಷದ ಪ್ರಚಾರಕ್ಕೆ , ಜನರು ಶ್ರೀರಾಮನ ದೇವಸ್ಥಾನಕ್ಕೆ ಅಂತ ಕೊಡ್ತಾರೆಯೇ ಹೊರತು ಬಿಜೆಪಿ ಪಕ್ಷಕ್ಕಲ್ಲ ಎಂದರು.
ನಾನು ನಮ್ಮ ಊರಿನಲ್ಲಿ ಶ್ರೀರಾಮನ ದೇವಸ್ಥಾನ ಕಟ್ಟಿಸುತ್ತಿದ್ದೇನೆ ಎಂದ ಸಿದ್ದರಾಮಯ್ಯನವರ ಬಳಿ ಮಾಧ್ಯಮದವರು ಅದರ ಬಜೆಟ್ ಎಷ್ಟಿರಬಹುದು ಎಂದು ಪ್ರಶ್ನಿಸಿದಾಗ ಅದರ ಲೆಕ್ಕ ನಿಂಗ್ಯಾಕೆ ಎಂದು ಪತ್ರಕರ್ತರೋರ್ವರನ್ನು ಪ್ರಶ್ನಿಸಿದರು.
ದೇವರು ಅಂದರೆ ಜನರಿಗೆ ಭಯಭಕ್ತಿ ಇದ್ದೇ ಇರತ್ತೆ. ಅದಕ್ಕೋಸ್ಕರ ಕೊಡುತ್ತಿದ್ದಾರೆ. ಇದು ಎಮೋಶನಲ್ ಇಶ್ಯೂ ಅಲ್ಲ, ಯಾರೇ ಹಣ ಸಂಗ್ರಹಿಸಿದರೂ ಲೆಕ್ಕ ಕೊಡಬೇಕು ಎಂದು ತಿರುಗೇಟು ನೀಡಿದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯನವರ ಜೊತೆಗಿದ್ದರು.