ಚತ್ತೀಸ್ ಗಢದ ಕಂಕೇರ್ ನಲ್ಲಿ ಪೊಲೀಸ್ ಕ್ಯಾಂಪ್ ಸ್ಥಾಪನೆ ಪ್ರಸ್ತಾವ: ಬುಡಕಟ್ಟು ಜನರಿಂದ ಪ್ರತಿಭಟನೆ
ರಾಯಿಪುರ (ಚತ್ತೀಸ್‌ಗಢ), ರಾಜ್ಯದ ಕೋಟ್ರಿ ನದಿ ಸಮೀಪದ ಛೋಟೆಬೆಥಿಯಾ ಪ್ರದೇಶದಲ್ಲಿ ಪೊಲೀಸ್ ಕ್ಯಾಂಪ್ ಆರಂಭಿಸುವ ಪ್ರಸ್ತಾವವನ್ನು ಹಿಂಪಡೆಯುವಂತೆ ಆಗ್ರಹಿಸಿ ಚತ್ತೀಸ್‌ಗಢದ ಬಸ್ತಾರ್ ವಲಯದ ಕಂಕೇರ್ ಜೆಲ್ಲೆಯಲ್ಲಿ ಸಾವಿರಾರು ಬುಡಕಟ್ಟು ಜನರು ಬುಧವಾರ ಪ್ರತಿಭಟನೆ ಆರಂಭಿಸಿದ್ದಾರೆ. ‘‘ಗ್ರಾಮ ಸಭೆಯ ಸಮ್ಮತಿ ಕೂಡ ಪಡೆದುಕೊಳ್ಳದೆ ಭದ್ರತಾ ಕ್ಯಾಂಪ್ ಆರಂಭಿಸುವ ಸರಕಾರದ ಯೋಜನೆ ಹಿನ್ನೆಲೆಯಲ್ಲಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಇದು ಕಾನೂನಿಗೆ ವಿರುದ್ಧ. ಎರಡನೆಯದಾಗಿ ಈ ಪ್ರದೇಶದಲ್ಲಿ ಯಾವುದೇ ಅಂತಹ ಕ್ಯಾಂಪ್ ಅನ್ನು ನಾವು ಬಯಸುವುದಿಲ್ಲ’’ ಎಂದು ಸರ್ವ ಆದಿವಾಸಿ ಸಮಾಜದ ಛೋಟೆಬೆಥಿಯಾ ಬ್ಲಾಕ್‌ನ ಅಧ್ಯಕ್ಷ ಗಜ್ಜು ರಾಮ್ ಹೇಳಿದರು.
ಕೋಟ್ರಿ ನದಿ ದಂಡೆಯಲ್ಲಿರುವ ಬೆಥಿಯಾ ಗ್ರಾಮದ ಕಾಡಿನಲ್ಲಿ ಈ ಪ್ರತಿಭಟನೆ ನಡೆಯುತ್ತಿದೆ. ‘‘ಈ ಪ್ರದೇಶದಲ್ಲಿ ಯಾವುದೇ ಕ್ಯಾಂಪ್ ಅಥವಾ ಪ್ರವಾಸಿ ಕೇಂದ್ರಗಳನ್ನು ಆರಂಭಿಸಲು ನಾವು ಬಯಸುವುದಿಲ್ಲ. ಈ ಪ್ರಸ್ತಾವವನ್ನು ಹಿಂಪಡೆಯುವಂತೆ ಸರಕಾರದಲ್ಲಿ ನಾವು ಮನವಿ ಮಾಡುತ್ತೇವೆ. ಇಲ್ಲದೇ ಇದ್ದರೆ, ಬೇಡಿಕೆ ಈಡೇರುವ ವರೆಗೆ ಪ್ರತಿಭಟನೆ ಮುಂದುವರಿಯಲಿದೆ. ಇದುವರೆಗೆ ಪ್ರತಿಭಟನೆಯಲ್ಲಿ 500 ಗ್ರಾಮಸ್ತರು ಪಾಲ್ಗೊಂಡಿದ್ದಾರೆೆ’’ ಎಂದು ರಾಮ್ ಹೇಳಿದ್ದಾರೆ. ಆದರೆ, ಈ ಪ್ರದೇಶದಲ್ಲಿ ಭದ್ರತಾ ಕ್ಯಾಂಪ್ ಅನ್ನು ಆರಂಭಿಸುವ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಇಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.