ಮೈಸೂರು
ನಾಡಿನ ಅಧಿದೇವತೆ ಚಾಮುಂಡೇಶ್ವರಿ ನೆಲೆ ನಿಂತಿರುವ ಮೈಸೂರಿನ ಚಾಮುಂಡಿ ಬೆಟ್ಟದ ಅಮ್ಮನವರ ಸನ್ನಿಧಿಯಲ್ಲಿ ಇಂದು ಸರಳ ಸಾಮೂಹಿಕ ವಿವಾಹಕ್ಕೆ ಚಾಲನೆ ನೀಡಲಾಯಿತು.
ಶಕ್ತಿದೇವತೆಯ ಸನ್ನಿಧಿಯಲ್ಲಿ ದಾಂಪತ್ಯ ಜೀವನಕ್ಕೆ 14 ಜೋಡಿ ಕಾಲಿರಿಸಿದೆ. ಧಾರ್ಮಿಕ ದತ್ತಿ ಇಲಾಖೆಯ ಸಪ್ತಪದಿ ಕಾರ್ಯಕ್ರಮದಡಿಯಲ್ಲಿ ಸಾಮೂಹಿಕ ವಿವಾಹ ನಡೆದಿದ್ದು, ವೇದ ಘೋಷ ಮಂತ್ರಗಳ ನಡುವೆ ನೂತನ ವಧುವರರಿಗೆ ಆಶೀರ್ವದಿಸಲಾಗಿದೆ. ಚಾಮುಂಡಿಬೆಟ್ಟದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆದಿದ್ದು, ಮೈಸೂರು ಜಿಲ್ಲೆಯ ವಿವಿಧ ಭಾಗಗಳಿಂದ ನವ ಜೋಡಿಗಳು ಆಗಮಿಸಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಜಿ. ಟಿ. ದೇವೇಗೌಡ ಚಾಲನೆ ನೀಡಿದರು. ನೂತನ ವಧುವರರಿಗೆ ಅಕ್ಷತೆ ಹಾಕಿ ಆಶೀರ್ವದಿಸಿದರು.
ಶಾಸಕ ಜಿ. ಟಿ. ದೇವೇಗೌಡ ಅವರ ಜೊತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳಾ ಶ್ಯಾಂ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.