ಟ್ವೀಟ್‌ಗೆ ಸ್ಪಂದಿಸುವ ಪ್ರಧಾನಿ, 40 ಪೆರ್ಸೆಂಟ್ ಬಗ್ಗೆ ಪತ್ರ ಬರೆದರೂ ಕ್ರಮ ಕೈಗೊಂಡಿಲ್ಲ: ಡಾ.ಜಿ ಪರಮೇಶ್ವರ್
ಉಡುಪಿ : ಯಾರೋ ಒಬ್ಬರು ಹಳ್ಳಿಯಿಂದ ಪತ್ರ ಬರೆದರೆ, ಟ್ವೀಟ್ ಮಾಡಿದರೆ ತಕ್ಷಣ ಸ್ಪಂದಿಸುವ ಪ್ರಧಾನ ಮಂತ್ರಿಗಳು, ರಾಜ್ಯದಲ್ಲಿ ನಡೆಯುತ್ತಿರುವ 40 ಪರ್ಸೆಂಟ್ ಕಮಿಷನ್ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿಗೆ ಪತ್ರ ಬರೆದು ಒಂದು ವರ್ಷಗಳಾದರೂ ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಪತ್ರ ಟ್ವೀಟ್‌ಗಳಿಗೆ ಸ್ಪಂದಿಸುವುದೇ ಕೇವಲ ರಾಜಕೀಯ ಕಾರಣಗಳಿಗೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ.
ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಕಾರಣರಾಗಿರುವ ಕೆ.ಎಸ್.ಈಶ್ವರಪ್ಪರನ್ನು ಭ್ರಷ್ಟಾಚಾರ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಶನಿವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಹೈಕೋರ್ಟಿನ ನ್ಯಾಯಮೂರ್ತಿಗಳ ಮೂಲಕ 40 ಪರ್ಸೆಂಟ್ ಕಮಿಷನ್ ಬಗ್ಗೆ ತನಿಖೆ ಆಗಬೇಕು. ಸಂತೋಷ್ ಪಾಟೀಲ್ ಕುಟುಂಬ ಬದುಕಲು ಸರಕಾರ ಪರಿಹಾರ ನೀಡಬೇಕು. ಈಶ್ವರಪ್ಪ ರಾಜೀನಾಮೆ ನೀಡಿರುವುದರ ಅರ್ಥ ತಾನು ಮಾಡಿರುವ ತಪ್ಪನ್ನು ಅವರು ಒಪ್ಪಿಕೊಂಡಿದ್ದಾರೆಂಬುದು ಅರ್ಥ. ಇಲ್ಲದಿದ್ದರೆ ಯಾಕೆ ಅವರು ರಾಜೀನಾಮೆ ನೀಡುತ್ತಿದ್ದರು ಎಂದು ಅವರು ಪ್ರಶ್ನಿಸಿದರು.
ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಕಾನೂನಿನ ಪ್ರಕರಣ ಎಫ್‌ಐಆರ್‌ನಲ್ಲಿ ದಾಖಲಾದ ಪ್ರಮುಖ ಆರೋಪಿಯನ್ನು ತಕ್ಷಣ ಬಂಧಿಸ ಬೇಕಾಗುತ್ತದೆ. ಇಲ್ಲದಿದ್ದರೆ ಆರೋಪಿ ಸಾಕ್ಷ್ಯವನ್ನು ನಾಶ ಮಾಡುತ್ತಾರೆ. ಆದುದ ರಿಂದ ಪೊಲೀಸರು ಕಾನೂನು ಪ್ರಕಾರ ಸಂತೋಷ್ ಪಾಟೀಲ್ ಪ್ರಕರಣದ ಪ್ರಮುಖ ಆರೋಪಿ ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಮುಖಂಡರಾದ ಮಿಥುನ್ ರೈ, ಕೃಪಾ ಆಳ್ವ, ರಮೇಶ್ ಕಾಂಚನ್, ಅಮೃತ್ ಶೆಣೈ, ಭುಜಂಗ ಶೆಟ್ಟಿ, ಶಶಿಧರ್ ಶೆಟ್ಟಿ ಎರ್ಮಾಳ್, ಎಂ.ಪಿ.ಮೊದಿನಬ್ಬ, ಗಣೇಶ್ ನೆರ್ಗಿ, ವರೋನಿಕಾ ಕರ್ನೆಲಿಯೋ, ವಿಘ್ನೇಶ್ ಕಿಣಿ ಮೊದಲಾದವರು ಉಪಸ್ಥಿತರಿದ್ದರು.
ನಗರದ ತ್ರಿವೇಣಿ ಸರ್ಕಲ್‌ನಿಂದ ಆರಂಭಗೊಂಡ ಪ್ರತಿಭಟನೆ ಮೆರವಣಿಗೆ, ಕೆ.ಎಂ.ಮಾರ್ಗ, ಹಳೆ ಡಯಾನ ಸರ್ಕಲ್, ಕೋರ್ಟ್ ರಸ್ತೆ, ಜೋಡುರಸ್ತೆ ಮಾರ್ಗವಾಗಿ ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಸಮಾಪ್ತಿಗೊಂಡಿತು.
“ಡೆತ್‌ನೋಟ್‌ನಲ್ಲಿ ನನ್ನ ಸಾವಿಗೆ ಈಶ್ವರಪ್ಪ ನೇರ ಕಾರಣ ಮತ್ತು ಅವರಿಗೆ ಶಿಕ್ಷೆ ಆಗಬೇಕು ಹಾಗೂ 40 ಪರ್ಸೆಂಟ್ ಭ್ರಷ್ಟಾಚಾರದ ಬಗ್ಗೆ ಸಂತೋಷ್ ಪಾಟೀಲ್ ಬರೆದಿಟ್ಟಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೆ. ಸಿದ್ದರಾಮಯ್ಯ ಸರಕಾರ ಇರುವಾಗ 10 ಪರ್ಸೆಂಟ್ ಸರಕಾರ ಎಂದು ಪ್ರಧಾನ ಮಂತ್ರಿ ಹೇಳಿಕೆ ನೀಡಿದ್ದರು. ಇಂದು ಬಿಜೆಪಿ ಸರಕಾರದಲ್ಲಿ 40 ಪರ್ಸೆಂಟ್ ಆಗಿದೆ. ಅವತ್ತಿನ ಹೇಳಿಕೆ ಇಂದು ಎಲ್ಲಿಗೆ ಹೋಗಿದೆ” ಎಂದು ರಾಜ್ಯ ಸರ್ಕಾರವನ್ನು ಪ್ರಶಿನಿಸಿದ್ದ್ದಾರೆ.