ಹಕ್ಕುಪತ್ರಗಳ ನೊಂದಣಿ, ಪ್ರಧಾನಮಂತ್ರಿ ಆವಾಸ್ ಯೋಜನೆ ಸಬ್ಸಿಡಿ ವೆಚ್ಚ 4.25 ಲಕ್ಷಕ್ಕೆ ಏರಿಕೆ : ಸ್ಲಂ ಬೋರ್ಡ್ ಆಯುಕ್ತ.

ಹಕ್ಕುಪತ್ರಗಳ ನೊಂದಣಿ, ಪ್ರಧಾನಮಂತ್ರಿ ಆವಾಸ್ ಯೋಜನೆ ಸಬ್ಸಿಡಿ ವೆಚ್ಚ 4.25 ಲಕ್ಷಕ್ಕೆ ಏರಿಕೆ : ಸ್ಲಂ ಬೋರ್ಡ್ ಆಯುಕ್ತ.

 

ಡಿಸೆಂಬರ್ 22 ರಂದು ಸ್ಲಂ‌ಜನಾಂದೋಲನ‌ ಕರ್ನಾಟಕದಿಂದ ಬೆಳಗಾವಿ ಚಲೋ ಹಮ್ಮಿಕೊಂಡು, ಸ್ಲಂ ನಿವಾಸಿಗಳ ಸಂವಿಧಾನಬದ್ಧ ಹಕ್ಕುಗಳ ಖಾತ್ರಿಗೆ ಒತ್ತಾಯಿಸಿ ಸುವರ್ಣಸೌಧ ಗಾರ್ಡನ್‌ನಲ್ಲಿ ಇಂದು ಬೃಹತ್ ಮಟ್ಟದಲ್ಲಿ ಪ್ರತಿಭಟನೆಯನ್ನು ಮಾಡಲಾಯಿತು.

 

ಪ್ರತಿಭಟನಾ ಧರಣಿಯನ್ನು ಉದ್ಧೇಶಿಸಿ‌ ಮಾತನಾಡಿದ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ, 2014 ರಲ್ಲಿ ನಡೆದ ಬೆಳಗಾವಿ ಚಲೋಯಿಂದ 94cc ಜಾರಿಗೆ ಬಂದು 1.60 ಲಕ್ಷ ಜನರಿಗೆ ಹಕ್ಕುಪತ್ರ ದೊರೆಯುವಂತಾಯಿತು. ಮತ್ತು ಮನೆಗಳ ಸಾಲಮನ್ನಾ, 2016ರಲ್ಲಿ ಸ್ಲಂ‌ ನೀತಿ ಜಾರಿಯಾಗಲು‌ ಪರಿಣಾಮ ಬೀರಿದೆ. 2017ರಲ್ಲಿ ಫ್ರೀಡಂ ಪಾರ್ಕಿನಲ್ಲಿ‌ ನಡೆದ‌ ನಿರಂತರ ಧರಣಿಯ ಭಾಗವಾಗಿ ಲ್ಯಾಂಡ್ ಬ್ಯಾಂಕ್ ಯೋಜನೆ ಘೋಷಣೆಯಾಯಿತೇ ಹೊರತು ಜಾರಿಗೆ ಬರಲಿಲ್ಲ. ಕೋವಿಡ್ ನಿಂದಾಗಿ ಎರಡು ವರ್ಷಗಳಿಂದ ಹೋರಾಟದ ವೇಗ ಕಡಿಮೆಯಾಗಿತ್ತು. ಆದರೂ 2020ರಲ್ಲಿ ರಾಜ್ಯದ 3.12 ಲಕ್ಷ ಸ್ಲಂ‌ ಕುಟುಂಬಗಳಿಗೆ ಹಕ್ಕುಪತ್ರ ಕೊಡುವ ತೀರ್ಮಾನವಾದರೂ ಒಂದು ವರ್ಷಗಳಿಂದ ಯಾವುದೇ ಸ್ಲಂ‌ನಿವಾಸಿಗೆ ಹಕ್ಕುಪತ್ರ ನೀಡಿಲ್ಲ ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಮನೆ ನಿರ್ಮಿಸಲು ಶ್ರೀಮಂತರಿಗೂ 1.5ಲಕ್ಷ ಸಬ್ಸಿಡಿ, ಸ್ಲಂ‌ನಿವಾಸಿಗಳಿಗೂ 1.5ಲಕ್ಷ ಸಬ್ಸಿಡಿ ನೀಡುತ್ತಿರುವುದು ಸಂವಿಧಾನದ ಸಾಮಾಜಿಕ ನ್ಯಾಯದ ವಿರೋಧಿಯಾಗಿದೆ. ಹಾಗಾಗಿ ವಸತಿ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿರುವುದರಿಂದ ಸಿಂಗಲ್ ವಿಂಡೋ ಮಾದರಿಯಲ್ಲಿ 6 ಲಕ್ಷ ಸಬ್ಸಿಡಿಯನ್ನು ಎಲ್ಲಾ ವರ್ಗದ ಸ್ಲಂ ನಿವಾಸಿಗಳಿಗೂ ನೀಡಬೇಕು. ಹಾಗೂ 2016ರ ಸ್ಲಂ ನೀತಿಯನ್ವಯ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸುವಂತೆ ಒತ್ತಾಯಿಸಿದರು.

 

 

 

ವಸತಿ ಸಚಿವರ ಪರವಾಗಿ ಪ್ರತಿಭಟನಾ ಸ್ಥಳಕ್ಕೆ ಬಂದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತರಾದ ಬಿ.ವೆಂಕಟೇಶ್ ಮನವಿ ಸ್ವೀಕರಿಸಿ‌ ಮಾತನಾಡಿದ ಅವರು, ಪ್ರದಾನಮಂತ್ರಿ ಆವಾಸ್ ಯೋಜನೆಯಲ್ಲಿ ಎಸ್ಸಿ/ಎಸ್ಟಿಗಳಿಗೆ ಈಗೀರುವ 3.5 ಲಕ್ಷ ಸಬ್ಸಿಡಿ ‌ಬದಲಾಗಿ 4.25 ಲಕ್ಷಕ್ಕೆ ಹೆಚ್ವಳ ಮಾಡಲಾಗಿದೆ. ಮುಂದಿನ‌ದಿನಗಳಲ್ಲಿ ಸರ್ಕಾರ ಸ್ಲಂ‌ ನಿವಾಸಿಗಳಿಗೆ ನಿರ್ಮಿಸುವ ವಸತಿ ಯೋಜನೆಯ ಸಬ್ಸಿಡಿಯನ್ನು 5 ಲಕ್ಷಕ್ಕೆ ಹೆಚ್ಚಿಸಲು ಚರ್ಚೆ ನಡೆಯುತ್ತಿದೆ. ಸ್ಲಂ‌ ನೀತಿಯನ್ವಯ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲು ವಸತಿ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗುವುದು. ಹಾಗೂ ಜಿಲ್ಲಾ ಮಟ್ಟದ ಸಮಸ್ಯೆಗಳ ಕುರಿತು ಮಂಡಳಿ‌ ಅಧಿಕಾರಿಗಳ ಸಮ್ಮುಖದಲ್ಲಿ ಕುಂದುಕೊರತೆ ಸಭೆ ಕರೆಯಲಾಗುವುದು. ಮತ್ತು ಇನ್ನಿತರೆ ಹಕ್ಕೊತ್ತಾಯಗಳ ಕುರಿತು ವಸತಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಾಲಾಗುವುದು ಎಂದರು. ಪ್ರತಿಭಟನಾ ಧರಣಿಯನ್ನು ಬೆಂಬಲಿಸಿ ಪೌರಕಾರ್ಮಿಕ ಸಂಘಟನೆಯ ಮುಖಂಡರುಗಳಾದ ವಿಜಯ ಗುಂಟ್ರಾಳ್, ಎಂ.ಬಿ.ನಾಗಣ್ಣ ಮತ್ತು ಸಾಧನಾ ಮಹಿಳಾ ಸಂಘದ ಗೀತಾ ಮಾತನಾಡಿದರು.

 

ಪ್ರತಿಭಟನಾ ಸ್ಥಳಕ್ಕೆ ಕಾಂಗ್ರೇಸ್ ಪಕ್ಷದ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೋಳಿ ಆಗಮಿಸಿ ನಮ್ಮ ಹಕ್ಕೋತ್ತಾಯಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದರು.

 

ಪ್ರತಿಭಟನೆಯ ನೇತೃತ್ವವನ್ನು ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯ ಚಂದ್ರಮ್ಮ, ಶೋಭಾ ಕಮತಾರ, ರೇಣುಕಾ ಸರಡಗಿ, ವೆಂಕಮ್ಮ, ಪರ್ವೀನ್, ನಿರ್ಮಲ, ಬಿಜಾಪುರದ ಅಕ್ರಮ್‌ಮಾಶಾಳ್ಕರ್, ಗದಗ್‌ಸಮಿತಿಯ ಇಮ್ತಿಯಾಜ್ ಮಾನ್ಚಿ, ರಾಯಚೂರು ಸಮಿತಿಯ ಜನಾರ್ಧಾನ್ ಹಳ್ಳಿಬೆಂಚಿ, ಕಲ್ಬುರ್ಗಿ ಸಮಿತಿಯ ಅಲ್ಲಮಪ್ರಭು, ಯಾದಗಿರಿ‌ಯ ಹಣಮಂತ ಶಾಪೂರ್ಕರ್, ಬಳ್ಳಾರಿಯ ಶೇಖರ್ ಬಾಬು, ಚಿತ್ರದುರ್ಗದ ಕೆ.ಮಂಜಣ್, ತುಮಕೂರಿನ‌ ಅರುಣ್, ತಿರುಮಲಯ್ಯ, ಕೆಂಪರಾಜು, ದಾವಣಗೆರೆಯ ಶಬ್ಬೀರ್, ಸುಹೈಲ್, ಬೆಳಗಾವಿ ಸಮಿತಿಯ ಫಕೀರಪ್ಪ ತಳವಾರ, ವಿಷ್ಣು ಇಂಗಳಗಿ, ಜಾಫರ್ ಮುಂತಾದವರು ವಹಿಸಿದ್ದರು. ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!