ಶಿವಮೊಗ್ಗದಲ್ಲಿ ಮೊಳಗಿದ “ರೈತ ಕಹಳೆ”! ರೈತ ಮಹಾ ಪಂಚಾಯತ್: 20 ಸಾವಿರ ಭಾಗಿ , ರೈತ ಹೋರಾಟಕ್ಕೆ ಭಾರೀ ಸ್ಪಂದನೆ .ಸಿಎಂ ತವರಿಂದಲೇ ಹೋರಾಟ ಶುರು
ಶಿವಮೊಗ್ಗ: ರಾಜ್ಯದಲ್ಲಿ ರೈತರ ಹೋರಾಟದ ಕಿಚ್ಚು ಇದೀಗ ಸಿಎಂ ತವರು ಶಿವಮೊಗ್ಗದಿಂದಲೇ ಆರಂಭಗೊಂಡಿದೆ. ದಕ್ಷಿಣ ಭಾರತದಲ್ಲಿ ರೈತ ದನಿ ಮೊಳಗಿದೆ. ಇದು ಮುಂದೆ ದೊಡ್ಡ ಹೋರಾಟದ ರೂಪ ಪಡೆಯುವ ಸಾಧ್ಯತೆ ಇದೆ.
ಮಾ.20ರಂದು ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ರೈತ ಪಂಚಾಯತ್ ಸಮಾವೇಶಕ್ಕೆ ಸುಮಾರು 20 ಸಾವಿರ ಮಂದಿ ರೈತರು ಆಗಮಿಸಿ, ರೈತ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಬಹುತೇಕ ರೈತ ಹೋರಾಟಗಾರರು ಭಾಗಿಯಾಗಿ ರೈತ ಕಹಳೆ ಮೊಳಗಿಸಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕೃಷಿ, ಕಾರ್ಮಿಕ ಕಾಯ್ದೆ ವಿರೋಧಿಸಿ ಈ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ದೆಹಲಿ ಹೋರಾಟಗಾರರಾದ
ರಾಕೇಶ್ ಟಿಕಾಯತ್, ಡಾ. ದರ್ಶನ್ ಪಾಲ್, ಯಧುವೀರ್ ಸಿಂಗ್ ಹಾಗೂ ರಾಜ್ಯದ ಪ್ರಮುಖ ರೈತ ಹೋರಾಟಗಾರರಾದ ಕಡಿದಾಳ್ ಶಾಮಣ್ಣ, ಕುರಬೂರು ಶಾಂತಕುಮಾರ, ಬಸವರಾಜಪ್ಪ,ಕೋಡಿಹಳ್ಳಿ ಚಂದ್ರಶೇಖರ್, ಶೋಭಾ ಸುಂದರೇಶ್,ಶ್ರೀಪಾಲ್, ಅಶೋಕ್ ಸೇರಿ ಎಲ್ಲಾ ರೈತ ನಾಯಕರು ಇದ್ದರು.
ಹಸಿರು ಶಾಲು ಸಾಲು: ಶಿವಮೊಗ್ಗದಲ್ಲಿ ಎಲ್ಲಿ ನೋಡಿದರೂ ಹಸಿರು ಶಾಲು ಬಿಳಿ ಅಂಗಿ ಕಾಣುತ್ತಿದ್ದವು. ಇದೇ ಮೊದಲ ಬಾರಿಗೆ ಮಲೆನಾಡಿನಲ್ಲಿ ರೈತ ಹೋರಾಟ ಮತ್ತೆ ಮುಂಚೂಣಿಗೆ ಬಂದಿದೆ.
ಟಿಕಾಯತ್ ಹೇಳಿದ್ದೇನು..?: ದೆಹಲಿ ಮಾದರಿಯಲ್ಲೇ ಬೆಂಗಳೂರಿನಲ್ಲೂ ರೈತರು ನಾಲ್ಕೂ ದಿಕ್ಕುಗಳಿಂದ ಸುತ್ತುವರೆದು ಹೋರಾಟ ನಡೆಸಬೇಕು ಎಂದು ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಕರೆ ನೀಡಿದ್ದಾರೆ. ರೈತ ಮಹಾಪಂಚಾಯತ್ ಸಮಾವೇಶದ ನೇತೃತ್ವ ವಹಿಸಿ ಮಾತನಾಡಿ, ಹಾಲಿ ನಡೆಯುತ್ತಿರುವ ರೈತ ಹೋರಾಟ ಸುದೀರ್ಘ ಅವಧಿಗೆ ನಡೆಯಲಿದೆ. ಕೇಂದ್ರ ಸರ್ಕಾರ ಮೂರು ಕೃಷಿ ಕಾಯಿದೆಗಳನ್ನು ವಾಪಸ್ ಪಡೆಯುವವರೆಗೆ ಹಾಗೂ ಕನಿಷ್ಟ ಬೆಂಬಲ ಬೆಲೆ ಯೋಜನೆಗೆ ಕಾಯಿದೆ ತರುವರೆಗೂ ಈ ಹೋರಾಟ ನಡೆಯಲಿದೆ ಎಂದರು.
ಮೋದಿ ಹೆಸರು ಕುಸಿತ!: ದೆಹಲಿ ರೈತರ ಹೋರಾಟದಿಂದ ದೇಶದ ಆಂದೋಲನಕ್ಕೆ ಸ್ಪೂರ್ತಿ ದೊರೆತಿದೆ. ಇದರಿಂದ ಮೋದಿಯ ಖ್ಯಾತಿಯೂ ಸಹ ಕುಸಿದುಹೋಗಿದೆ ಎಂದು ಡಾ.ದರ್ಶನ್ ಪಾಲ್ ಹೇಳಿದ್ದಾರೆ.
ಕರ್ನಾಟಕ, ಆಂದ್ರ ಮತ್ತು ತಮಿಳುನಾಡಿನ ರೈತರು ಒಂದಾದದ್ದಲ್ಲಿ ಮಾತ್ರ ಮೋದಿಯ ದುಷ್ಟ ಆಡಳಿತ ಕೊನೆಗಾಣಿಸಬಹುದು. ಈಗ ಜನರಿಗೆ ಮೋದಿ ಸುಳ್ಳಿನ ಅರಿವಾಗಿದೆ ಎಂದರು.
ಕೋಡಿಹಳ್ಳಿ ಕಟು ಮಾತು: ಅಂಬಾನಿ, ಅದಾನಿ ಸಾಲ ಮನ್ನಾ ಮಾಡಿದಂತೆ ಮೋದಿ ಸರಕಾರ ರೈತರ ಸಾಲ ಮನ್ನಾ ಮಾಡದಿದ್ದಲ್ಲಿ ಹಳ್ಳಿ ಹಳ್ಳಿಯಲ್ಲಿ ಕಟ್ಟಿಹಾಕಲಾಗುವುದು ಎಂದು ರಾಜ್ಯ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದ್ದಾರೆ.
ರೈತರು ತಮ್ಮ ಊರುಗಳಿಂದ ತಂಡ ತಂಡವಾಗಿ ಬಂದಿದ್ದರು. ಬಂದ ಎಲ್ಲಾ ರೈತರಿಗೆ ಓರ್ವ ರೈತ ಕಲ್ಲಂಗಡಿ ಹಂಚಿ ಮಾದರಿಯಾದರು.
ಸಂಯುಕ್ತ ಕಿಸಾನ್ ಮೋರ್ಚಾ, ಐಕ್ಯ ಹೋರಾಟ ಸಮಿತಿ, ಕರ್ನಾಟಕ ರೈತ ಸಂಘ, ಹಸಿರು ಮನೆ ಈ ಸಮಾವೇಶ ಅಯೋಜನೆ ಮಾಡಿದ್ದು, ಸಮಾವೇಶ ರಾಜ್ಯದಲ್ಲಿ ಹೊಸ ಇತಿಹಾಸ ಸೃಷ್ಟಿಸುವ ಮೂಲಕ ಮುನ್ನುಡಿ ಬರೆಯುತ್ತಿದೆ.