ಲಂಖಿಂಪುರ ಖೇರಿಯಲ್ಲಿ ಮೃತಪಟ್ಟ ರೈತರ ಕುಟುಂಬವನ್ನು ಭೇಟಿಯಾದ ರಾಹುಲ್, ಪ್ರಿಯಾಂಕ

ಲಂಖಿಂಪುರ ಖೇರಿಯಲ್ಲಿ ಮೃತಪಟ್ಟ ರೈತರ ಕುಟುಂಬವನ್ನು ಭೇಟಿಯಾದ ರಾಹುಲ್, ಪ್ರಿಯಾಂಕ

ಲಕ್ನೊ: ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ನಡೆದ ಹಿಂಸಾಚಾರದಲ್ಲಿ ರೈತರು ಸಾವನ್ನಪ್ಪಿದ ಘಟನೆಗೆ ಸಾಕ್ಷಿಯಾದ ಉ.ಪ್ರ,ದ ಲಖಿಂಪುರ ಖೇರಿಗೆ ಮೇಲೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಬುಧವಾರ ರಾತ್ರಿ ತಲುಪಿದ್ದಾರೆ. ಅಲ್ಲಿ ಅವರು ಮೃತಪಟ್ಟ ರೈತ 19 ವರ್ಷದ ಲವಪ್ರೀತ್ ಸಿಂಗ್ ಅವರ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ನೀಡಿದ್ದಾರೆ.

ಕಾಂಗ್ರೆಸ್ ನಿಯೋಗದಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಚತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಾೇಲ್, ಪಂಜಾಬ್ ಮುಕ್ಯಮಂತ್ರಿ ಚರಣ್‌ಜೀತ್ ಸಿಂಗ್ ಚೆನ್ನ, ಕೆ.ಸಿ. ವೇಣುಗೋಪಾಲ್, ರಣದೀಪ್ ಸುರ್ಜೇವಾಲ ಹಾಗೂ ದೀಪೇಂದರ್ ಹೂಡ ಇದ್ದರು.

ಇದಕ್ಕೂ ಮುನ್ನ ಲಕ್ನೊ ವಿಮಾನ ನಿಲ್ದಾಣದಲ್ಲಿ ಬಂದಿಳಿದ ರಾಹುಲ್ ಗಾಂಧಿ, ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ, ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಬಾೇಲ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಹಾಗೂ ರಣದೀಪ್ ಸುರ್ಜೇವಾಲಾ ಅವರನ್ನು ಬುಧವಾರ ಸಂಜೆಯವರೆಗೆ ಪೊಲೀಸ್ ಅಧಿಕಾರಿಗಳು ತಡೆದು ನಿಲ್ಲಿಸಿದ್ದರು. ಲಕ್ನೊ ವಿಮಾನ ನಿಲ್ದಾಣದಿಂದ ಪ್ರಿಯಾಂಕಾ ಅವರನ್ನು ಬಂಧನದಲ್ಲಿ ಇರಿಸಿರುವ ಸೀತಾಪುರಕ್ಕೆ ಪೊಲೀಸ್ ಕಾರಿನಲ್ಲಿ ತೆರಳುವಂತೆ ಉತ್ತರಪ್ರದೇಶದ ಅಧಿಕಾರಿಗಳು ರಾಹುಲ್ ಗಾಂಧಿ ಅವರಿಗೆ ಸೂಚಿಸಿದ್ದರು. ಆದರೆ, ಇದಕ್ಕೆ ನಿರಾಕರಿಸಿದ ರಾಹುಲ್ ಗಾಂಧಿ ಅವರು ವಿಮಾನ ನಿಲ್ದಾಣದಲ್ಲಿ ಅಲ್ಪ ಕಾಲ ಧರಣಿ ನಡೆಸಿದರು.

ಆನಂತರ ಅವರಿಗೆ ಸ್ವಂತ ಕಾರಿನಲ್ಲಿ ತೆರಳಲು ಅನುಮತಿ ನೀಡಲಾಯಿತು. ರಾಹುಲ್ ಗಾಂಧಿ ಅವರು ಪ್ರಿಯಾಂಕಾ ಗಾಂಧಿ ಅವರನ್ನು ವಶದಲ್ಲಿ ಇರಿಸಲಾಗಿರುವ ಸೀತಾಪುರದ ಪಿಎಸಿ ಅತಿಥಿ ಗೃಹಕ್ಕೆ ತೆರಳಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಲಖಿಂಪುರಕ್ಕೆ ತೆರಳಿದರು. ರಾಹುಲ್ ಗಾಂಧಿ ಅವರು ಲಖಿಂಪುರಕ್ಕೆ ಭೇಟಿ ನೀಡಲು ಉತ್ತರಪ್ರದೇಶ ಸರಕಾರ ಬುಧವಾರ ಬೆಳಗ್ಗೆ ಅವಕಾಶ ನೀಡಿರಲಿಲ್ಲ. ಆನಂತರ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಇತರ ಮೂವರಿಗೆ ಲಖಿಂಪುರಕ್ಕೆ ಭೇಟಿ ನೀಡಲು ಅವಕಾಶ ನೀಡಿತು. ಈ ನಡುವೆ ಆಪ್‌ನ ನಿಯೋಗ ಲಖಿಂಪುರಕ್ಕೆ ತೆರಳಿ ರೈತರ ಕುಟುಂಬವನ್ನು ಭೇಟಿಯಾಗಿದೆ. ಆಪ್ ನಾಯಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರೈತರ ಕುಟುಂಬದ ಸದಸ್ಯರೊಂದಿಗೆ ಫೋನ್ ಮೂಲಕ ಮಾತುಕತೆ ನಡೆಸಿದ್ದಾರೆ. ‘‘ಘಟನೆಯಿಂದ ನಮಗೆ ದುಃಖ ಉಂಟಾಗಿದೆ. ಈ ಘಟನೆ ಉತ್ತರಪ್ರದೇಶದಲ್ಲಿ ಕಾನೂನು ವ್ಯವಸ್ಥೆ ಕುಸಿದಿರುವುದನ್ನು ತೋರಿಸುತ್ತದೆ. ನಾವು ನಿಮ್ಮೆಂದಿಗೆ ಇದ್ದೇವೆ. ಆರೋಪಿಗಳ ವಿರುದ್ಧ ಕಾನೂನು ಹೋರಾಟದಲ್ಲಿ ನಾವು ನಿಮಗೆ ನೆರವು ನೀಡುತ್ತೇವೆ’’ ಎಂದು ಕೇಜ್ರಿವಾಲ್ ಹೇಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!