ಹಾಲಿನ ಉತ್ಪಾದನೆ ಕುಸಿತ: ಹಾಲಿನ ಪುಡಿ ದರ ಆಕಾಶಕ್ಕೆ
ವಾಷಿಂಗ್ಟನ್, ಅ.12: ಜಾಗತಿಕವಾಗಿ ಹಾಲಿನ ಉತ್ಪಾದನೆಯಲ್ಲಿ ಅನಿರೀಕ್ಷಿತ ಕುಸಿತವಾಗಿರುವುದರಿಂದ ಹಾಲಿನ ಪೌಡರ್‌ಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಹಾಲಿನ ಪುಡಿಯ ದರ ಆಕಾಶಕ್ಕೇರಿದೆ ಎಂದು ವರದಿಯೊಂದು ತಿಳಿಸಿದೆ. 100 ಪೌಂಡ್ ಹಾಲಿನ ಪುಡಿಯ ಬೆಲೆ 135 ಸೆಂಟ್ಸ್‌ಗೆ ಏರಿದ್ದು ಇದು 2014ರ ಆಗಸ್ಟ್‌ನ ಬಳಿಕದ ಅತ್ಯಧಿಕ ದರವಾಗಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ವಿಶ್ವದಲ್ಲಿ ಅಗ್ರಸ್ಥಾನದಲ್ಲಿರುವ ಯುರೋಪ್ ಮತ್ತು ನ್ಯೂಝಿಲ್ಯಾಂಡ್‌ಗಳಲ್ಲಿ ಹಾಲು ಉತ್ಪಾದನೆ ಕುಂಠಿತಗೊಂಡಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ‘ಡೈರಿ ಮಾರ್ಕೆಟ್ ಅನಾಲಿಸ್ಟ್’ನ ಸಂಪಾದಕ ಮ್ಯಾಟ್ ಗೌಲ್ಡ್ ಬರೆದಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹಾಲಿನ ಪುಡಿ, ಚೀಸ್, ಬೆಣ್ಣೆ ಮುಂತಾದವುಗಳಿಗೆ ಅಂತರ್‌ರಾಷ್ಟ್ರೀಯ ಗ್ರಾಹಕರಿಂದ ಬೇಡಿಕೆ ಹೆಚ್ಚಿರುವುದಾಗಿ ಅಮೆರಿಕದ ರಫ್ತುದಾರರು ಹೇಳುತ್ತಿದ್ದಾರೆ. ಹಾಲನ್ನು ತಯಾರಿಸಲು, ಸೂಪ್ ಮುಂತಾದ ಸಂಸ್ಕರಿಸಿದ ಉತ್ಪನ್ನಗಳ ತಯಾರಿಕೆಗೆ, ಬೇಕರಿ ಉತ್ಪನ್ನಗಳ ತಯಾರಿಯಲ್ಲಿ ಹಾಲಿನ ಪುಡಿಗೆ ವಿಪರೀತ ಬೇಡಿಕೆಯಿದೆ. ಆದರೆ ಈಗ ಹಾಲಿನ ಪೂರೈಕೆ ಕುಸಿತವಾಗಿರುವುದರ ಪರಿಣಾಮ ಹಾಲಿನ ಪುಡಿಯ ಮೇಲೆ ತಟ್ಟಿದ್ದು ಹಾಲಿನ ಪುಡಿಯ ಬೆಲೆ ಕಳೆದ 7 ವರ್ಷಗಳಲ್ಲೇ ಅತ್ಯಧಿಕ ಮಟ್ಟಕ್ಕೆ ಹೆಚ್ಚಿದೆ ಎಂದು ವರದಿ ಹೇಳಿದೆ.