ತಾನು ಕಬಡ್ಡಿ ಆಡುವ ವೀಡಿಯೊ ಮಾಡಿದವನ ʼಜನ್ಮ ಜನ್ಮ ಹಾಳಾಗಿ ಹೋಗಲಿದೆʼ ಎಂದು ಶಾಪ ಹಾಕಿದ ಪ್ರಜ್ಞಾ ಸಿಂಗ್
ಭೋಪಾಲ್: ತಮ್ಮ ಲೋಕಸಭಾ ಕ್ಷೇತ್ರ ಭೋಪಾಲ್‍ನಲ್ಲಿ ಇತ್ತೀಚೆಗೆ ಸಂಸದೆ ಪ್ರಜ್ಞಾ ಠಾಕುರ್ ಅವರು ಕಬಡ್ಡಿ ಆಡುತ್ತಿರುವ ವೀಡಿಯೋ ವೈರಲ್ ಆಗಿತ್ತು. ದೀರ್ಘಕಾಲದಿಂದ ಗಾಲಿಕುರ್ಚಿಯಲ್ಲಿಯೇ ಅತ್ತಿತ್ತ ಸಾಗುತ್ತಿದ್ದ ಹಾಗೂ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ಪಡೆದಿರುವ ಪ್ರಜ್ಞಾ ಠಾಕುರ್ ಅದು ಹೇಗೆ ಸಲೀಸಾಗಿ ಕಬಡ್ಡಿ ಆಡಿದರೆಂದು ಹಲವರು ಪ್ರಶ್ನಿಸಿದ್ದರು.
ಇದೀಗ ಪ್ರಜ್ಞಾ ಅವರು ತಾವು ಕಬಡ್ಡಿ ಆಡುತ್ತಿದ್ದ ವೀಡಿಯೋ ಹರಿಯಬಿಟ್ಟ ವ್ಯಕ್ತಿಯ ವಿರುದ್ಧ ಹರಿಹಾಯ್ದಿದ್ದಾರಲ್ಲದೆ ಆತನನ್ನು `ರಾವಣ’ ಎಂದೂ ಜರಿದಿದ್ದಾರೆ ಹಾಗೂ ಆತನ ಮುಪ್ಪು ಹಾಗೂ ಮುಂದಿನ ಜನ್ಮ ಹಾಳಾಗಲಿದೆ ಎಂದು ಹಿಡಿಶಾಪ ಹಾಕಿದ್ದಾರೆ.
ಭೋಪಾಲದ ಸಿಂಧಿ ಸಮುದಾಯದ ಮಂದಿ ಹೆಚ್ಚಾಗಿ ವಾಸಿಸುವ ಸಂತ ನಗರದಲ್ಲಿ ದಸರಾ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿದ ಪ್ರಜ್ಞಾ “ನಾನು ದುರ್ಗಾ ಪೆಂಡಾಲಿನಲ್ಲಿ ಎರಡು ದಿನಗಳ ಹಿಂದೆ ಆರತಿ ನೀಡಲೆಂದು ಹೋಗಿದ್ದ ಸಂದರ್ಭ ಹತ್ತಿರದ ಮೈದಾನದಲ್ಲಿ ಆಡುತ್ತಿದ್ದ ಕೆಲವರು ನನ್ನನ್ನು ಕಬಡ್ಡಿ ಆಡಲು ಕರೆದರು. ಇದರ ಒಂದು ಸಣ್ಣ ತುಣುಕನ್ನು ಮಾಧ್ಯಮದಲ್ಲಿ ತೋರಿಸಿದ್ದಾರೆ. ನಿಮ್ಮ ನಡುವೆ ಇರುವ ರಾವಣ, ಯಾರೋ ಸಿಂಧಿ ಸೋದರ, ನನ್ನ ವೈರಿ ಹೀಗೆ ಮಾಡಿದ್ದಾರೆ. ನಾನು ಅವರ ವೈರಿಯಲ್ಲ, ಆದರೆ ಅವರು ನನ್ನನ್ನು ತನ್ನ ವೈರಿ ಎಂದು ತಿಳಿದಿದ್ದಾರೆ. ಅವರಿಂದ ಏನು ಬೆಲೆಬಾಳುವುದನ್ನು ನಾನು ಸೆಳೆದಿದ್ದೇನೆಂದು ಗೊತ್ತಿಲ್ಲ, ಆದರೆ ರಾವಣ ಎಲ್ಲಿಯೂ ಇರಬಹುದು” ಎಂದರು.
“ಸಂಸ್ಕಾರಗಳು ಹಾಳಾಗಿರುವ ಈ ವ್ಯಕ್ತಿಗೆ ತನ್ನನ್ನು ಸುಧಾರಿಸಿಕೊಳ್ಳಲು ಹೇಳುತ್ತಿದ್ದೇನೆ, ಹಾಗಾಗದೇ ಇದ್ದರೆ ನಿನ್ನ ಮುಪ್ಪು, ಮುಂದಿನ ಜನ್ಮ ಜನ್ಮ ಹಾಳಾಗಿ ಹೋಗಲಿದೆ. ದೇಶಭಕ್ತರು, ಕ್ರಾಂತಿಕಾರಿಗಳು ಮತ್ತು ಸಂತರ ವಿರುದ್ಧ ಸೆಣಸಿದವರು – ರಾವಣ ಅಥವಾ ಕಂಸ ಕೂಡ ಬದುಕುಳಿಯಲಿಲ್ಲ, ಈಗಿನ ಅಧರ್ಮಿ ಅಥವಾ ವಿಧರ್ಮಿ ಕೂಡ ಬಚಾವಾಗುವುದಿಲ್ಲ” ಎಂದರು.
ಆಕೆಯ ಮಾತುಗಳನ್ನು ಖಂಡಿಸಿರುವ ರಾಜ್ಯ ಕಾಂಗ್ರೆಸ್ ವಕ್ತಾರ ಕೆ ಕೆ ಮಿಶ್ರಾ “ರಾವಣನ ಸಿದ್ಧಾಂತವನ್ನು ಅನುಸರಿಸುವವರಿಗೆ ಎಲ್ಲಾ ಕಡೆಯೂ ಅಸುರ ಅರಸನೇ ಕಾಣುತ್ತಾನೆ” ಎಂದು ವ್ಯಂಗ್ಯವಾಡಿದ್ದಾರೆ.