ಪಡಿತರ ಚೀಟಿ ಇರುವ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ : ಸಚಿವ ಸುನೀಲ್ ಕುಮಾರ್

ಪಡಿತರ ಚೀಟಿ ಇರುವ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ : ಸಚಿವ ಸುನೀಲ್ ಕುಮಾರ್

ಬೆಂಗಳೂರು: `ಪಡಿತರ ಚೀಟಿ ಇರುವ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ ನೀಡುವುದನ್ನೂ ಒಳಗೊಂಡಂತೆ ಆಯವ್ಯಯದಲ್ಲಿ ಘೋಷಿಸಿರುವ ಎಲ್ಲ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ.ಸುನೀಲ್ ಕುಮಾರ್ ಸೂಚನೆ ನೀಡಿದ್ದಾರೆ.

 

ಬುಧವಾರ ಬೆಂಗಳೂರಿನ ಕಾವೇರಿ ಭವನದಲ್ಲಿರುವ ಕೆಪಿಟಿಸಿಎಲ್ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ಇಂಧನ ಇಲಾಖೆ, ವಿದ್ಯುತ್ ಸರಬರಾಜು ಕಂಪೆನಿಗಳು ಮತ್ತು ಅದರ ಅಂಗ ಸಂಸ್ಥೆಗಳ ಕಾರ್ಯ ನಿರ್ವಹಣೆಯ ಪರಾಮಾರ್ಶೆ ಸಭೆ ನಡೆಸಿ ಮಾತನಾಡಿಸಿದ ಅವರು, `ಬಜೆಟ್‍ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳು ಮತ್ತು ಕೇಂದ್ರ ಸರಕಾರದ ಸಹಯೋಗದ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಇದರಲ್ಲಿ ನಾನು ಯಾವುದೇ ಕಾರಣಕ್ಕೆ ರಾಜಿಯಾಗುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

 

ವಿದ್ಯುತ್ ಟ್ರಾನ್ಸ್‍ಫಾರ್ಮರ್‍ಗಳ ದುರಸ್ಥಿ, ಬದಲಾವಣೆ ಕುರಿತಂತೆ ಬಹಳಷ್ಟು ದೂರುಗಳು ಬರುತ್ತವೆ. ಅವುಗಳ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಟ್ರಾನ್ಸ್‍ಫಾರ್ಮರ್ ಬದಲಾವಣೆ ಮಾಡಲು ವಿಳಂಬ ಮಾಡಬಾರದೆಂದು ಅವರು ಸೂಚಿಸಿದರು. ಕೇಂದ್ರ ಸರಕಾರಕ್ಕೆ ರಾಜ್ಯದಿಂದ ಸಲ್ಲಿಕೆಯಾಗಬೇಕಾಗಿರುವ ಪ್ರಸ್ತಾವನೆಗಳನ್ನೂ ಯಾವುದೇ ವಿಳಂಬ ಮಾಡದೇ ನಿಗದಿತ ಕಾಲಾವಧಿಯೊಳಗೆ ಸಲ್ಲಿಸಲು ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.

 

`ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕ ನೀಡುವ ಕೆಲಸವೂ ಕಾಲಮಿತಿಯೊಳಗೆ ಮತ್ತು ಪರಿಣಾಮಕಾರಿಯಾಗಿ ಆಗಬೇಕು. ಅನಧಿಕೃತ ಸಂಪರ್ಕ, ವಿದ್ಯುತ್ ಸೋರಿಕೆ, ವಿದ್ಯುತ್ ಸಂಪರ್ಕ ನೀಡುವಲ್ಲಿ ವಿಳಂಬ, ಮೀಟರ್‍ಗಳ ಅಳವಡಿಕೆಯಲ್ಲಿ ಆಗುವ ವಿಳಂಬ ಇತ್ಯಾದಿ ಕಾರಣಗಳಿಂದ ಇಂಧನ ಸರಬರಾಜು ಕಂಪೆನಿಗಳಿಗಾಗುವ ನಷ್ಟ ತಡೆಯಲು ಕಾರ್ಯಯೋಜನೆ ರೂಪಿಸಬೇಕು. ಅದನ್ನು ಅನುಷ್ಠಾನಗೊಳಿಸಲು ಎಲ್ಲ ವಿಧವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.

 

ವಿದ್ಯುತ್ ರೀಚಾರ್ಜ್ ಕೇಂದ್ರಗಳ ಆರಂಭಕ್ಕೆ ಆದ್ಯತೆ: ಕೃಷಿ ಮತ್ತು ಕೈಗಾರಿಕೆಗಳಿಗೆ ಮತ್ತು ಎಲ್ಲಾ ವರ್ಗದ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಹಾಗೂ ಸಮರ್ಪಕ ವಿದ್ಯುತ್ ಸರಬರಾಜು ನಮ್ಮ ಆದ್ಯತೆಯಾಗಬೇಕು ಎಂದ ಅವರು, ವಿದ್ಯುತ್ ಚಾಲಿತ ವಾಹನಗಳು ಹೆಚ್ಚಾಗಿ ಬರುತ್ತಿರುವುದರಿಂದ ವಿದ್ಯುತ್ ವಾಹನ ಚಾಜಿರ್ಂಗ್ ಕೇಂದ್ರಗಳನ್ನು ಆರಂಭಿಸಲು ಆದ್ಯತೆ ನೀಡಬೇಕು. ಈಗಾಗಲೇ ಗುರುತಿಸಿರುವ ಸ್ಥಳಗಳಲ್ಲಿ ವಿದ್ಯುತ್ ರೀಚಾಜಿರ್ಂಗ್ ಮಾಡುವ ಕಾರ್ಯಕ್ಕೆ ವೇಗ ನೀಡಬೇಕೆಂದು ಸಲಹೆ ನೀಡಿದರು.

 

ಗ್ರಾಹಕ ಸಂಬಂಧಿ ಸಮಸ್ಯೆಗಳ ಪರಿಹಾರ, ಹೊಸ ವಿದ್ಯುತ್ ಸಂಪರ್ಕ ನೀಡಿಕೆ ಸೇರಿದಂತೆ ವಿವಿಧ ಸೇವೆಗಳನ್ನು ಒಂದೇಕಡೆ 24 ಗಂಟೆಯೊಳಗೆ ಒದಗಿಸುವ ಫಾಸ್ಟ್ಟ್ರಾಕ್ ಸೆಲ್ ಅನ್ನು ಕೂಡಲೇ ಆರಂಭಿಸಬೇಕು. ಸಭೆಯಲ್ಲಿ ಮುಂದಿನ 100 ದಿನಗಳ ಕಾಲಮಿತಿಯಲ್ಲಿ ಏನೆಲ್ಲಾ ಯೋಜನೆಗಳು ಅನುಷ್ಠಾನಗೊಳಿಸಬಹುದು ಎಂಬ ಬಗ್ಗೆ ಸಚಿವ ಸುನೀಲ್ ಕುಮಾರ್ ಇದೇ ವೇಳೆ ಪರಾಮರ್ಶೆ ನಡೆಸಿದರು.

ಸಭೆಯಲ್ಲಿ ಕೆಜಿಎಫ್ ಉಪವಿಭಾಗಕ್ಕೆ ಜುಲೈ ತಿಂಗಳ ಅತ್ಯುತ್ತಮ ಕಾರ್ಯ ನಿರ್ವಹಣೆಗಾಗಿ ಅಲ್ಲಿನ ಸಹಾಯಕ ಎಂಜಿನಿಯರ್ ಹೇಮಲತಾ ಅವರಿಗೆ ಪ್ರಶಸ್ತಿ ಫಲಕ ಮತ್ತು 10 ಸಾವಿರ ರೂ.ನಗದು ಬಹುಮಾನವನ್ನು ನೀಡಿದರು. ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಜಿ.ಕುಮಾರ ನಾಯಕ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಮಂಜುಳ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಸೇರಿದಂತೆ ಉನ್ನತ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!