ಗಡಿಭಾಗದ ಜನತೆಗೆ ಆಸರೆಯಾಗಿರುವ ಶ್ರೀ ಜಪಾನಂದ ಸ್ವಾಮಿಗಳು : ಪ್ರಧಾನಿಗಳ ಪ್ರಶಂಸೆಗೂ ಪಾತ್ರರಾಗಿದ್ದಾರೆ

 

 

 

ತುಮಕೂರು ಜಿಲ್ಲೆಯ, ಪಾವಗಡ ತಾಲ್ಲೂಕು, ನೆರೆಯ ಆಂಧ್ರ ಪ್ರದೇಶದ ಗಡಿ ಭಾಗವನ್ನು ಹಂಚಿಕೊಂಡಿದ್ದು, ಇಲ್ಲಿನ ಜನರು ವಿವಿಧ ಕಾರಣಗಳಿಂದ ತುಂಬಾ ಹಿಂದುಳಿದಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಇಂತಹ ಗಡಿ ಭಾಗದಲ್ಲಿ ಕಳೆದ ಮೂರು ದಶಕಗಳಿಂದ ಈ ಭಾಗದ ಜನರಿಗೆ ಆಸರೆಯಾಗಿ ನಿಂತವರೇ ಸ್ವಾಮೀ ಜಪಾನಂದ್ ಜೀ ರವರು.

ಶ್ರೀಯುತರು ಇಲ್ಲಿನ ಜನರ ಸಮಸ್ಯೆಗಳನ್ನು ಅರಿತು ಮೊಟ್ಟ ಮದಲಾಗಿ ಪುಟ್ಟದಾದ ಆಸ್ಪತ್ರೆಯೊಂದನ್ನು ತರೆದರು, ಅದರಲ್ಲಿ ಪ್ರಮುಖವಾಗಿ ಕ್ಷಯರೋಗ ನಿರ್ಮೂಲನೆಯನ್ನು ಮಾಡುವಲ್ಲಿ ಮೊಟ್ಟಮೊದಲು ಶ್ರಮ ವಹಿಸಿ ಅಲ್ಲಿನ ಭಾಗದ ಜನರಲ್ಲಿ ಕ್ಷಯ ರೋಗವನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅದನ್ನೇ ಮುಂದುವರೆಸಿಕೊಂಡು ಹಲವಾರು ಸಮಸ್ಯೆಗಳನ್ನು ಬಗೆಹೊಡೆದು, ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರವನ್ನು ಸ್ಥಾಪಿಸಿ ನೂರಾರು ಜನರಿಗೆ ವೈದ್ಯಕೀಯ ಸೇವೆಯನ್ನು ನೀಡಲು ಮುಂದಾದರು, ಹೀಗೆ ವರ್ಷಗಳು ಕಳೆದಂತೆ ಆಗಿನ ಕರ್ನಾಟಕದ ರಾಜ್ಯಪಾಲರಾಗಿದ್ದ ಶ್ರೀಮತಿ ರಮಾದೇವಿರವರ ಕಾಲದಲ್ಲಿ ಇನ್ಫೋಸಿಸ್ ಫೌಂಡೇಷನ್‌ನ ಸಹಯೋಗದೊಂದಿಗೆ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ ಪಾವಗಡ ತಾಲ್ಲೂಕಿನ ಸುತ್ತಮುತ್ತಲಿನ ಪ್ರದೇಶದ ಜನರಿಗೆ ದೃಷ್ಠಿ ಸಮಸ್ಯೆಗಳನ್ನು ನಿವಾರಿಸುವಲ್ಲಿ ಮುಂದಾದರು.

ಈ ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಸುಸಜ್ಜಿತವಾದ ದೃಷ್ಠಿ ತಪಾಸಣೆಯನ್ನು ಮಾಡುವುದಲ್ಲದೇ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಬಡವರಿಗೆ ಉಚಿತವಾಗಿಯೂ ಮಾಡಿರುವ ಉದಾಹರಣೆಗಳುಂಟು, ಇನ್ನೂ ಈ ಆಸ್ಪತ್ರೆಯಲ್ಲಿ ತಪಾಸಣೆ ಮತ್ತು ಚಿಕಿತ್ಸೆಯನ್ನು ಪಡೆಯಲು ಈ ಮೊದಲು ತುಮಕೂರು, ಬೆಂಗಳೂರು, ಪಕ್ಕದ ಆಂಧ್ರ ಭಾಗದ ಜನರೂ ಸಹ ಇಲ್ಲಿಗೆ ಬಂದು ಚಿಕಿತ್ಸೆ ಪಡೆದಿರುವ ಉದಾಹರಣೆಗಳು ಇವೆ.

ಇನ್ನು ಈ ಪಾವಗಡ ಪ್ರದೇಶವು ಅತ್ಯಂತ ಹಿಂದುಳಿದ ಮತ್ತು ಗಡಿಭಾಗವಾಗಿದ್ದರಿಂದ ಜೊತೆಗೆ ಈ ಪ್ರದೇಶವು ಬರಪೀಡಿತ ಪ್ರದೇಶವಾಗಿ ಗುರುತಿಸಿಕೊಂಡಿದ್ದು, ಇಲ್ಲಿನ ದನ-ಕರುಗಳಿಗಾಗಿ ಗೋಶಾಲೆ, ಹುಲ್ಲು ಮೇವುಗಳನ್ನು ಪಕ್ಕದ ರಾಜ್ಯಗಳಿಂದಲೂ ಸ್ವಾಮೀಜಿಗಳು ತರಿಸಿ ದನ-ಕರುಗಳಿಗೆ ಮೇವು ಸರಬರಾಜು ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ಇತ್ತೀಚೆಗೆ ಕೋವಿಡ್ ೧೯ ಲಾಕ್‌ಡೌನ್ ಸಂದರ್ಭದಲ್ಲಿ ಸ್ವಾಮೀಜಿಗಳು ಬಡ ಜನರಿಗೆ ಮಾಸ್ಕ್, ಸ್ಯಾನಿಟೈಸರ್, ದಿನಬಳಕೆ ವಸ್ತುಗಳನ್ನು ಹಲವಾರು ಜನರ ಸಹಕಾರದೊಂದಿಗೆ ವಿತರಿಸಿರುವ ಸತ್ಯಾಂಶಗಳು ಈಗಲೂ ಕಣ್ಮುಂದೆ ಭಾಸವಾಗುತ್ತದೆ.

ಸ್ವಾಮೀಜಿಗಳು ಧಾರ್ಮಿಕವಲ್ಲದೇ, ಶೈಕ್ಷಣಿಕ, ಆರೋಗ್ಯ ಕವಚ, ಹಲವಾರು ವಿಭಿನ್ನ ರೀತಿಯ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಗಳಾಗಿ ಜನರ ನೋವು-ನಲಿವುಗಳಿಗೆ ಸ್ಪಂದಿಸುತ್ತಾ ಬಂದಿರುವವರಿಗೆ ಲಭಿಸಿರುವ ಪ್ರಶಸ್ತಿ ಪಾರಿತೋಷಕಗಳು ಹಲವಾರು, ಇತ್ತೀಚೆಗೆ ಇವರ ಸಾಮಾಜಿಕ ಕಳಕಳಿ ಮತ್ತು ಶ್ರೀ ಶಾರದಾದೇವಿಯವರ ೧೬೮ನೇ ಜನ್ಮದಿನೋತ್ಸವದ ಅಂಗವಾಗಿ ಪ್ರಾರಂಭಿಸುತ್ತಿರುವ ಡಿಜಿಟಲ್ ಕಾರ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಸಹ ಪ್ರಶಂಸೆಯನ್ನು ವ್ಯಕ್ತಪಡಿಸಿರುತ್ತಾರೆ. ಅಲ್ಲದೇ ೨೦೦೪ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ’ಪಾಲ್ ಹ್ಯಾರಿಸ್’ ಪ್ರಶಸ್ತಿ, ಭಗವಾನ್ ಮಹಾವೀರ ಪ್ರಶಸ್ತಿ, ವಿಜಯಶ್ರೀ, ದಿವಾನ್ ಚಂದ್, ಸಿಟಿಜನ್ ಎಕ್ಸ್‌ಟ್ರಾರ್ಡಿನೈರ್, ತುಮಕೂರು ವಿ.ವಿ.ಯಿಂದ ಗೌರವ ಡಾಕ್ಟರೇಟ್, ಸಿದ್ಧಗಂಗಾ ಶ್ರೀ, ಇನ್ನೂ ಹತ್ತು ಹಲವು ಪ್ರಶಸ್ತಿಗಳಿಗೆ ಸ್ವಾಮೀಜಿಯವರು ಭಾಜನರಾಗಿರುತ್ತಾರೆ.

ಇನ್ನೂ ಕೋವಿಡ್ ೧೯ರ ನಂತರ ಮಕ್ಕಳಿಗೆ ಆನ್‌ಲೈನ್ ತರಬೇತಿಗಳು ಹೆಚ್ಚಾಗಿರುವುದರಿಂದ ಮಕ್ಕಳಿಗೆ ಅನುಕೂಲಕರವಾಗುವಂತೆ ಕಣ್ಣಿನ ತಪಾಸಣೆ ಮತ್ತು ಕನ್ನಡಕಗಳ ವಿತರಣೆ ಕಾರ್ಯ ಮಾಡಲಾಗುತ್ತಿದೆ, ಕ್ಷಯ ರೋಗ ನಿರ್ಮೂಲನೆಗಾಗಿ ಪೌಷ್ಠಿಕಾಂಶದ ಪೌಡರ್‌ಗಳನ್ನು ವಿತರಿಸಲಾಗುತ್ತಿದೆ, ಒಟ್ಟಾರೆಯಾಗಿ ಗಡಿಭಾಗದ ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರವು ಇಲ್ಲಿನ ಭಾಗದ ಜನರಿಗೆ ಕಲ್ಪವೃಕ್ಷವಾಗಿದೆಯೆಂದರೆ ಅದಕ್ಕೆ ಸ್ವಾಮೀಜಿಗಳ ಪಾತ್ರ ಅತೀ ಮುಖ್ಯವಾಗಿದ್ದು, ಅವರ ನಿಸ್ವಾರ್ಥ ಸೇವೆಯು ನಿರಂತರವಾಗಿ ನಡೆಯುತ್ತಲೇ ಇದೆ.

ಶೀಘ್ರದಲ್ಲಿಯೇ ಈ ಆರೋಗ್ಯ ಕೇಂದ್ರದ  ನೂತನ ಕಟ್ಟಡವು ಸಹ ಉದ್ಘಾಟನೆಗೊಳ್ಳಲಿದ್ದು, ಇಲ್ಲಿನ ಭಾಗದ ಜನರಿಗೆ ಇನ್ನಷ್ಟು ಅನುಕೂಲಕರವಾಗಲಿದೆಂದು ಸ್ವಾಮೀಜಿಗಳು ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!