ಪಾವಗಡ ದೇವರ ಬೆಟ್ಟ ರಂಗನಾಥ ಸ್ವಾಮಿ ಇತಿಹಾಸ….

 

 

ಪಾವಗಡದಿಂದ ಪಶ್ಚಿಮದಲ್ಲಿರುವ ದೇವಲಕೆರೆ ರಸ್ತೆಯಲ್ಲಿ ಸುಮಾರು ಹತ್ತು ಕಿ.ಮೀ. ದೂರದಲ್ಲಿ ದೇವರಬೆಟ್ಟ ಕೋಟೆ ಇದೆ. ಸದರೀ ಬೆಟ್ಟದಲ್ಲಿ ರಂಗನಾಥಸ್ವಾಮಿಯ ದೇವಾಲಯವಿದೆ. ಬಹಳ ಕಲಾತ್ಮಕವಾದ ರೀತಿಯಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಬೆಟ್ಟದಲ್ಲಿ ಮತ್ತು ತಳಭಾಗದಲ್ಲಿ ಕೋಟೆಗಳನ್ನು ನಿರ್ಮಿಸಿರುವುದು ಕಂಡುಬರುತ್ತದೆ. ಇದೇನೂ ದೊಡ್ಡ ಪ್ರಬಲವಾದ ಕೋಟೆಯಲ್ಲ. ಬೆಟ್ಟದ ಮೇಲೆ ನೀರಿನ ಆಸರೆ ಇಲ್ಲ. ವಿಶಾಲವಾದ ಪ್ರದೇಶಗಳಿಲ್ಲ, ಇದು ಕೇವಲ ಒಂದು ಗ್ರಾಮವನ್ನು ರಕ್ಷಣೆ ಮಾಡಲು ನಿರ್ಮಿಸಿರುವ ಕೋಟೆ. ವಿಜಯನಗರ ಕಾಲದ ನಂತರ ಕ್ರಿ.ಶ.1600ರ ವೇಳೆಗೆ ಪೆನುಗೊಂಡೆ ರಾಜ್ಯಕ್ಕೂ ಪಾವಗಡ ಸಂಸ್ಥಾನಕ್ಕೂ ನಿಡುಗಲ್ ಸಂಸ್ಥಾನಕ್ಕೂ ಗಡಿಯಲ್ಲಿದ್ದ ಕೋಟೆ ಇದಾಗಿದ್ದು ಸದರೀ ಕೋಟೆಯ ಅಧಿಕಾರ ನಿಡುಗಲ್ ದೊರೆಗಳಿಗಿತ್ತು.

ಮೊದಲು ಈ ಕೋಟೆಯನ್ನು ವಿಜಯನಗರ ಸಂಸ್ಥಾನ ಹುಟ್ಟುವುದಕ್ಕೆ ಮೊದಲು ನಿಡುಗಲ್ ದೊರೆಗಳು ನಿರ್ಮಿಸಿದ್ದಾರೆ. ಆಧಾರ ಶಾಸನಗಳಿಲ್ಲ. ರಂಗನಾಥನ ದೇವಾಲಯ ಯಾವಾಗ ನಿರ್ಮಾಣವಾಯಿತೆಂದು ಹೇಳಲಾಗುವುದಿಲ್ಲ. ಒಂದು ಊಹೆಯ ಪ್ರಕಾರ ಈ ಎರಡೂ ದೇವಾಲಯಗಳು ಶ್ರೀವೈಷ್ಣವ ಪಾಂಚರಾತ್ರ ಆಗಮದ ರೀತಿಯಲ್ಲಿ ನಿರ್ಮಿಸಿರುವುದರಿಂದ 13-14ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಸಾಧ್ಯತೆಗಳಿವೆ. ಇಲ್ಲಿನ ಜನರ ಕಟ್ಟು ಕಥೆಯಂತಿರುವ ಒಂದು ಕಥೆಯನ್ನು ಕೇಳಿ. ರತ್ನಗಿರಿ ಪಾಳ್ಳೆಗಾರರಿಗೂ ನಿಡುಗಲ್ಲು ದೊರೆಗಳಿಗೂ ಒಂದು ಸಂಘರ್ಷವನ್ನು ಹುಟ್ಟಿಸಿದ್ದಾರೆ. ಇದು ನಂಬಲಾಗದ ಕಥೆ. ಐತಿಹಾಸಿಕವಾಗಿ ದೇವರಬೆಟ್ಟ ರತ್ನಗಿರಿ ಪಾಳ್ಳೆಗಾರರ ವಶವಾಗಿರುತ್ತದೆ. ಈ ಕೋಟೆಯನ್ನು ಹೇಗಾದರೂ ಮಾಡಿ ಕಿತ್ತುಕೊಳ್ಳಬೇಕೆಂದು ನಿಡುಗಲ್ ದೊರೆಗಳು ಪ್ರಯತ್ನ ಮಾಡುತ್ತಾರೆ. ಅವರಿಗೆ ಕ್ಯಾತಗಾನಹಳ್ಳಿ ಕರಿಯಣ್ಣ ಮತ್ತು ಲಿಂಗಣ್ಣ ಎಂಬ ಇಬ್ಬರು ಬುದ್ಧಿವಂತರನ್ನು ನಿಯೋಜಿಸಿ ಈ ಕೆಲಸವನ್ನು ಹೇಗಾದರೂ ಸಾಧಿಸಬೇಕೆಂದು ಹುರಿದುಂಬಿಸಿ, ಕೋಟೆಯನ್ನು ರತ್ನಗಿರಿಯವರಿಂದ ಬಿಡಿಸಿಕೊಂಡರೆ ನಿಮಗೇ ಆ ಕೋಟೆಯ ಒಡೆತನವನ್ನು ನೀಡುವುದಾಗಿ ನುಡಿಯುತ್ತಾರೆ. ಸಹೋದರರಿಬ್ಬರೂ ದೇವರಬೆಟ್ಟವನ್ನು ಸೇರಿಕೊಂಡು ಊರ ಮುಂದಿನ ಹೊಲದಲ್ಲಿ ಕಟ್ಟಿಗೆ ಆರಿಸುತ್ತಿದ್ದ ಮುದುಕಿಗೆ ಸುಳ್ಳು ಹೇಳಿ ಕೋಟೆಯನ್ನು ಸೇರಿಕೊಳ್ಳುತ್ತಾರೆ. ಅದರ ಮಾರನೆ ದಿವಸ ಹಳ್ಳಿಯವರ ಸಹಕಾರದಿಂದ ಅದೇ ದಿನ ರಾತ್ರಿ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರ ಮಾಡಿಸಿ ಬಂದ ಜನಕ್ಕೆಲ್ಲಾ ಭಾರೀ ಔತಣವನ್ನು ಏರ್ಪಾಟು ಮಾಡುತ್ತಾರೆ. ಊರಿನ ಕೋಟೆ ನಾಯಕ ಅವನ ಸಹಾಯಕರು ಎಲ್ಲರೂ ಶಸ್ತ್ರಾಸ್ತ್ರಗಳನ್ನು ಮನೆಯಲ್ಲಿಟ್ಟು ಊಟಕ್ಕೆ ಬರುತ್ತಾರೆ. ಭಾರೀ ಔತಣ ನಡೆಯುತ್ತದೆ. ಹಬ್ಬದ ಅಡುಗೆಯಲ್ಲಿ ಮತ್ತಿನ ಔಷಧಿಯನ್ನು ಸೇರಿಸುತ್ತಾರೆ. ಊಟ ಮಾಡಿದವರೆಲ್ಲಾ ಜ್ಞಾನವಿಲ್ಲದೆ ನಿದ್ದೆಗೆ ಜಾರುತ್ತಾರೆ. ಅವರನ್ನೆಲ್ಲಾ ನಿರ್ಧಾಕ್ಷಿಣ್ಯವಾಗಿ ಸಹೋದರರು ಕೊಲೆ ಮಾಡುತ್ತಾರೆ. ಬೆಟ್ಟದ ಮೇಲೆ ನಿಂತು ತನ್ನವರನ್ನು ಕರೆಯುತ್ತಾರೆ. ಸೈನ್ಯವೊಂದು ಬಂದು ಅಳಿದುಳಿದ ದೇವರಬೆಟ್ಟದ ಜನರನ್ನು ಕೊಂದು ಹಾಕಿ ಕೋಟೆಯನ್ನು ಸ್ಮಶಾನ ಮಾಡುತ್ತಾರೆ. ಮಾರನೆ ದಿವಸ ಎದ್ದ ಹೆಂಗಸರು ಮಕ್ಕಳು ವಿಷಯವನ್ನು ತಿಳಿದು ದಿಗ್ಬ್ರಾಂತರಾಗಿ ತಮ್ಮವರೆಲ್ಲಾ ಮೋಸದಿಂದ ಮರಣ ಹೊಂದಿರುವ ವಿಷಯ ತಿಳಿದು ನಿಡುಗಲ್ಲಿನವರನ್ನು ಶಾಪಹಾಕುತ್ತಾ ತಮ್ಮ ಗಂಡಂದಿರನ್ನು ನೆನೆಯುತ್ತಾ ಬೆಂಕಿಯ ಕೊಂಡವನ್ನು ಮಾಡಿ ಅದರಲ್ಲಿ ಬಿದ್ದು ಸಾಯುತ್ತಾರೆ.

ಮುಂದೆ ಕೋಟೆಯ ಯಜಮಾನ್ಯ ಕರಿಯಣ್ಣ ಲಿಂಗಣ್ಣರಿಗೆ ದಕ್ಕುತ್ತದೆ. ಅವರು ಕೆಲವು ಕಾಲ ಇಲ್ಲಿ ಇದ್ದು ಮುಂದಿನವರು ಈ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತಾರೆ. ಇಡೀ ಪಾವಗಡ ತಾಲ್ಲೂಕಿನ ಇತಿಹಾಸದಲ್ಲಿ ಹುಡುಕಿ ನೋಡಿದರೂ ಕೂಡ ರತ್ನಾಗಿರಿಯವರು ದೇವರ ಬೆಟ್ಟದಲ್ಲಿ ಬಂದು ಭೇದವನ್ನು ಮಾಡಿ ಕೋಟೆಯನ್ನು ವಶ ಮಾಡಿಕೊಂಡ ವಿಷಯ ಬರುವುದೇಯಿಲ್ಲ. ರತ್ನಗಿರಿಯವರಿಗೆ ದೇವರ ಬೆಟ್ಟದವರೆಗೂ ಬರುವ ಅವಕಾಶವೇ ದೊರೆತಿಲ್ಲ. ಆದರೇ ಮಡಕಶಿರಾದ ಬಳಿ ಎರಡು ಗ್ರಾಮಗಳನ್ನು ರತ್ನಗಿರಿಯವರು ಪಾವಗಡದ ಪಾಳೇಗಾರರಿಂದ ಗೆದ್ದುಕೊಂಡಿದ್ದರು ಎಂದು ಮೆಕೆನ್ ಜಿ ಹಿತಿಹಾಸ ಸಂಶೋಧಕ ಹೇಳುತ್ತಾನೆ.

ದೇವರಬೆಟ್ಟಕ್ಕೆ ಸುತ್ತಲೂ ಕೋಟೆಯನ್ನು ನಿರ್ಮಿಸಲಾಗಿದೆ. ಕೋಟೆ ಬಲಿಷ್ಠವಾಗಿಲ್ಲ. ಪೂರ್ವದ ಕಡೆ ಪ್ರವೇಶದ್ವಾರವಿದ್ದು ಒರಟು ಕಲ್ಲುಗಳಿಂದ ನಿರ್ಮಿಸಲಾಗಿದೆ. ಹೆಚ್ಚು ಎತ್ತರವಿಲ್ಲ. ಕೋಟೆ ಗೋಡೆಗಳು ಬೆಟ್ಟದಿಂದ ಪ್ರಾರಂಭವಾಗಿ ಪುನಃ ಬೆಟ್ಟವನ್ನು ಸೇರುತ್ತದೆ. ಹೊರಕೋಟೆಯಲ್ಲಿ ಕಂದಕವಿದೆ. ಕಂದಕವನ್ನು ಈಜಿ ಶತೃಗಳು ಕೋಟೆಯನ್ನು ಹಿಡಿಯಬೇಕು.

ಈ ಕೋಟೆಯನ್ನು ಪ್ರವೇಶ ಮಾಡಲು ಕೆಲವು ಬಾಗಿಲುಗಳಿವೆ. ಅದರಲ್ಲಿ ಕೆಲವು ದಿಡ್ಡಿ ಬಾಗಿಲುಗಳು. ಲೆಕ್ಕದಲ್ಲಿರುವ ಹಲವು ಬಾಗಿಲುಗಳು ಬಿದ್ದು ಹೋಗಿದೆ. ಕೋಟೆಯನ್ನು ನಿರ್ಮಿಸಲು ಚಿಕ್ಕ ಅಳತೆಯ ಕಲ್ಲುಗಳನ್ನು ಉಪಯೋಗಿಸಿರುವುದರಿಂದ ಕೋಟೆ ಭದ್ರತೆಯನ್ನು ಕಳೆದುಕೊಂಡಿದೆ. ಮುಖ್ಯವಾದ ಸ್ಥಳಗಳಲ್ಲಿ ಕಟ್ಟಿರುವ ಕೊತ್ತಲದ ಬುರುಜುಗಳು ನಾಶವಾಗಿದೆ. ಮೂರನೆ ಸುತ್ತಿನ ಕೋಟೆ ಭದ್ರವಾಗಿದ್ದು ಎರಡು ಬಾಗಿಲುಗಳಿಂದ ಕೂಡಿದೆ. ಬಾಗಿಲುಗಳೂ ಚಿಕ್ಕವು. ದಿಡ್ಡಿ ಬಾಗಿಲಿನಂತಿವೆ. 2 ಕೊತ್ತಲುಗಳಿವೆ. ರಂಗನಥಸ್ವಾಮಿ ದೇವಾಲಯವನ್ನು ಸುತ್ತುವರಿದು ಒಂದು ಕೋಟೆ ಗೋಡೆ ಇದೆ. ಇಲ್ಲಿಂದ ಇನ್ನೂ ಮೇಲೆ ಹೋಗಲು ಮತ್ತೊಂದು ಬಾಗಿಲಿದೆ.

 

 

ದೇವರ ಬೆಟ್ಟ ರಂಗನಾಥ ಸ್ವಾಮಿ ದೇವಾಲಯ.

ದೇವರಬೆಟ್ಟ ಗ್ರಾಮದ ಹತ್ತಿರ ಹೋಗುತ್ತಿದ್ದಂತೆ ಹಸಿರಾದ ಅಡಿಕೆ, ತೆಂಗು, ಬಾಳೆಯ ತೋಟಗಳು ವೀಳೇದೆಲೆ ತೋಟಗಳು ಕಂಡು ಬರುತ್ತದೆ. ವಾತಾವರಣ ಬಹಳ ತಂಪಾಗಿದ್ದು ಈ ಪ್ರದೇಶವೆಲ್ಲಾ ಸಸ್ಯಶ್ಯಾಮಲವಾಗಿದೆ. ಈ ಹಳ್ಳಿಗೆ ಅಂಟಿಕೊಂಡಂತೆ ಒಂದು ಚಿಕ್ಕ ಬೆಟ್ಟವಿದೆ. ಈ ಬೆಟ್ಟವನ್ನು ರಂಗನಾಥನ ಬೆಟ್ಟ ದೇವರಬೆಟ್ಟವೆಂದು ಕರೆಯುತ್ತಾರೆ. ಇದೇನು ಬಹಳ ದೊಡ್ಡ ಬೆಟ್ಟವಲ್ಲ, ಚಿಕ್ಕ ಬೆಟ್ಟ. ಬೆಟ್ಟದ ಮಧ್ಯಭಾಗದಲ್ಲಿ ರಂಗನಾಥಸ್ವಾಮಿಯ ಗುಡಿ ಇದ್ದು ಕೆಳಗಿನಿಂದಲೇ ಗುಡಿ ಭವ್ಯವಾಗಿ ಕಾಣುತ್ತದೆ. ಬೆಟ್ಟವನ್ನು ಹತ್ತಬೇಕಾದರೆ ಊರಿಗಿರುವ ಚಿಕ್ಕ ಕೋಟೆಯ ಬಾಗಿಲನ್ನು ದಾಟಿ ಹೋಗಬೇಕು. ಮೊದಲು ಬೆಟ್ಟ ಮತ್ತು ಊರನ್ನು ಸುತ್ತಿಕೊಂಡಿದ್ದ ಕೋಟೆ ಸಂಪೂರ್ಣವಾಗಿ ನಾಶವಾಗಿದ್ದು, ಊರುಬಾಗಿಲು ಮಾತ್ರ ಉಳಿದುಕೊಂಡಿದೆ. ಅದರಿಂದಲೇ ಬೆಟ್ಟವನ್ನು ಹತ್ತಲು ಪ್ರಾರಂಭಿಸಬೇಕು. ಮೇಲೆ ಹತ್ತಿ ಹೋಗಲು ಅನುಕೂಲವಾಗುವಂತೆ ಹಿಂದೆ ನಿರ್ಮಿಸಿದ್ದ ಮೆಟ್ಟಿಲುಗಳು ಸಂಪೂರ್ಣ ಬಿದ್ದುಹೋಗಿದೆ. ಆದರೂ ಬೆಟ್ಟವನ್ನು ಹತ್ತಬಹುದು.

ಬೆಟ್ಟದ ಮಧ್ಯಭಾಗವನ್ನು ತಲುಪಿದರೆ ರಂಗನಾಥನ ದೇವಸ್ಥಾನದ ಪ್ರಾಕಾರವನ್ನು ತಲುಪುತ್ತೇವೆ. ಪ್ರಾಕಾರದ ಬಳಿ ಹೋಗಲು ಕಲ್ಲಿನ ಬಾಗಿಲನ್ನು ದಾಟಿ ಒಳ ಹೋಗಬೇಕು. ಪ್ರಾಕಾರದ ಗೋಡೆ ಅಲ್ಲಲ್ಲಿ ಬಿದ್ದು ಹೋಗಿದೆ. ಮೊದಲು ಪ್ರಾಕಾರವನ್ನು ದೊಡ್ಡ ದೊಡ್ಡ ಚೌಕನೆಯ ಕಲ್ಲುಗಳಲ್ಲಿ ಕಟ್ಟಿರುವುದು ಕಂಡು ಬರುತ್ತವೆ. ಆ ಭಾಗವೆಲ್ಲಾ ಬಿದ್ದು ಹೋಗಿದ್ದು ಇತ್ತೀಚೆಗೆ ಚಿಕ್ಕ ಚಿಕ್ಕ ಕಲ್ಲುಗಳಿಂದ ಬಿದ್ದು ಹೋಗಿರುವ ಭಾಗವನ್ನು ಬಂದೋಬಸ್ತ್ ಮಾಡಲಾಗಿದೆ. ವಿಶಾಲವಾಗಿರುವ ಪ್ರಾಕಾರದ ಒಳಭಾಗದಲ್ಲಿ ಪೂರ್ವಾಭಿಮುಖವಾಗಿ ಮುಖ್ಯ ದೇವಾಲಯವನ್ನು ನಿರ್ಮಿಸಲಾಗಿದೆ. ಮೇಲ್ನೋಟಕ್ಕೆ ದೇವಸ್ಥಾನಕ್ಕೆ ಪೂರ್ವದಿಂದ ಪ್ರವೇಶಿಸಲು ಒಂದೇ ಬಾಗಿಲಿದ್ದು ಮೂರು ಸಮಾನಳತೆಯ ಗೋಪುರಗಳಿವೆ. ದೇವಸ್ಥಾನವನ್ನು ಒಂದು ಸುತ್ತು ಪ್ರದಕ್ಷಿಣೆ ಮಾಡಿ ನೋಡಿದರೆ ಸುಮಾರು 400 ವರ್ಷಗಳಿಗೂ ಹಿಂದೆ ಈ ನಿರ್ಮಾಣ ನಡೆದಿರಬಹುದು ಎಂದು ಊಹಿಸಬಹುದು. ಗೋಡೆಗಳನ್ನು ದೊಡ್ಡ ಕಲ್ಲು ಚಪ್ಪಡಿಗಳನ್ನು ಒಂದರ ಮೇಲೊಂದನ್ನಿಟ್ಟು ನಿರ್ಮಿಸಲಾಗಿದೆ. ಈ ಕಟ್ಟಡ ನಿಡುಗಲ್ ಬೆಟ್ಟದಲ್ಲಿರುವ ದೇವಾಲಯಗಳ ಕಟ್ಟಡವನ್ನು ಹೋಲುತ್ತದೆ. ಇದನ್ನು ನಿಡುಗಲ್ ನಾಯಕರು ಕಟ್ಟಿರ ಬಹುದು, ಆಧಾರ ಇಲ್ಲ.

 

 

 

 

ರಂಗನಾಥನನ್ನು ಸ್ಥಾಪಿಸಿರುವ ಗರ್ಭಗುಡಿಯ ಜೊತೆಗೆ ಎದುರು ಬದುರು ಇನ್ನೂ ಎರಡು ಗರ್ಭಗುಡಿಗಳಿದ್ದು, ಮೂರು ಗರ್ಭಗೃಹಗಳ ತಲೆಯ ಮೇಲೂ ಪ್ರತ್ಯೇಕವಾದ ಗೋಪುರಗಳಿವೆ. ಇದರಲ್ಲಿ ಎರಡು ಗೋಪುರಗಳು ಒಂದೇ ರೀತಿಯಾಗಿದ್ದು ದಕ್ಷಿಣದ ಒಂದು ಗೋಪುರದ ವಿನ್ಯಾಸ ಉಳಿದೆರಡು ಗೋಪುರಗಳಿಗಿಂತಾ ಸ್ವಲ್ಪ ಭಿನ್ನವಾಗಿದ್ದು, ಸುಮಾರು 200 ವರ್ಷಗಳಷ್ಟು ಹಿಂದೆ ನಿರ್ಮಿಸಿದ ಗೋಪುರದಂತಿದೆ. ಗೋಪುರಗಳಿಂದ ಪ್ರಾರಂಭವಾದ ಕೈಪಟ್ಟಿ ದೇವಸ್ಥಾನದ ಮಾಳಿಗೆಯ ಸುತ್ತಾ ಇದ್ದು ಅದರಲ್ಲಿ ವಿವಿಧ ಅಳತೆಯ ಕಲಾತ್ಮಕವಾದ ಗಾರೆ ಇಟ್ಟಿಗೆಗಳಿಂದ ನಿರ್ಮಿತವಾದ ಗೂಡುಗಳಿದ್ದು ಪ್ರಭಾವಳಿ ಮುಖದಿಂದ ಚಿಕ್ಕ ಗೋಪುರಗಳಿಂದ ಅಲಂಕಾರ ಮಾಡಲಾಗಿದೆ. ಇವುಗಳಲ್ಲಿ ಮೊದಲು ನಾನಾ ಬಗೆಯ ದೇವತಾಮುರ್ತಿಗಳ ನಯಗಾರೆಯ ಗೊಂಬೆಗಳನ್ನು ಮಾಡಲಾಗಿದ್ದು ಅವುಗಳೆಲ್ಲಾ ಒಡೆದು ಹೋಗಿದೆ. ಒಡೆದುಹೋಗಿ ಉಳಿದಿರುವ ಭಾಗಗಳು ಬಹಳ ಕಲಾತ್ಮಕವಾಗಿದ್ದು ಉನ್ನತ ಮಟ್ಟದ ಶಿಲ್ಪದಿಂದ ಕೂಡಿದೆ. ದೇವಾಲಯವು ಉತ್ತಮ ಸ್ಥಿತಿಯಲ್ಲಿದ್ದಾಗ, ಈ ವಿಗ್ರಹಗಳಿಂದ ಕೂಡಿದ ಗೋಪುರಗಳು ಬಹಳ ಅಂದಗಾಣುತ್ತಿದ್ದುವೆಂದು ಊಹಿಸಲಾಗಿದೆ. ಉಳಿದಿರುವ ವಿಗ್ರಹಗಳ ವಿನ್ಯಾಸವನ್ನೂ ಶಿಲ್ಪವನ್ನೂ ಗಮನಿಸಿದಾಗ ಸುಮಾರು 400 ವರ್ಷಗಳಷ್ಟು ಹಿಂದಿನದೆಂದು ಅಂದಾಜು ಮಾಡಬಹುದು.

ದೇವಸ್ಥಾನದ ಮುಂಭಾಗದಲ್ಲಿ ವಿಶಾಲವಾದ ಅಂಗಳವಿದೆ. ಅಂಗಳಕ್ಕೆ ಸುತ್ತುವರಿದು ಪ್ರಾಕಾರದ ಗೋಡೆ ಇದೆ. ಈ ಅಂಗಳದ ಮಧ್ಯಭಾಗದಲ್ಲಿ 3 ಕಲ್ಲಿನಿಂದ ನಿರ್ಮಾಣವಾದ ಗರುಡಗಂಭಗಳಿವೆ. ಅವುಗಳನ್ನು ಹತ್ತಲು ಸಹಾಯವಾಗುವಂತೆ ಒಂದು ಏಣಿ ಕಲ್ಲಿದೆ. ಗರುಡಗಂಭಗಳ ಮೇಲೆ ದೀಪದ ತಟ್ಟೆಗಳನ್ನು ಅಳವಡಿಸಲಾಗಿದ್ದು ದೀಪೋತ್ಸವದ ಸಮಯದಲ್ಲಿ ಇದರಲ್ಲಿ ಎಣ್ಣೆಯ ದೀಪಗಳನ್ನು ಹಚ್ಚಲಾಗುತ್ತದೆ. ಗರುಡಗಂಭಗಳ ಎರಡೂ ಕಡೆ ಆಂಜನೇಯ ಮತ್ತು ಗರುಡನ ಉಬ್ಬುಶಿಲ್ಪಗಳಿವೆ. ಪ್ರಾಕಾರದ ದಕ್ಷಿಣ ಭಾಗದ ಗೋಡೆಯಲ್ಲಿರುವ ದಿಡ್ಡಿ ಬಾಗಿಲಿನಿಂದ ಇನ್ನೂ ಬೆಟ್ಟವನ್ನು ಹತ್ತಿ ಗಾಳಿಗೋಪುರದ ಮಂಟಪವನ್ನು ತಲುಪಬಹುದು. ಪ್ರಾಕಾರದ ಗೋಡೆಗೆ ಅಂಟಿಕೊಂಡಂತೆ ಒಂದು ಕೊಠಡಿ ಇದ್ದು ಈಗ ಅದು ಹಾಳುಬಿದ್ದಿದೆ.

ಇನ್ನು ಮುಖ್ಯದ್ವಾರದಿಂದ ದೇವಾಲಯವನ್ನು ಪ್ರವೇಶ ಮಾಡಿದರೆ ನವರಂಗ ಮಂಟಪ, ಸುಖನಾಶಿ ಮತ್ತು ಮೂಲದೇವರು ಕುಳಿತಿರುವ ಗರ್ಭಗೃಹ ಕಂಡುಬರುತ್ತದೆ. ಮೂಲಗರ್ಭಗೃಹದ ಎಡಬಲಗಳಲ್ಲಿ ಎದುರು ಬದುರಾಗಿ ಎರಡು ಗರ್ಭಗುಡಿಗಳಿವೆ.

ಮೂಲದೇವರು ಸುಮಾರು 3 ಅಡಿ ಎತ್ತರವಿರುವ ಶಿಲಾಫಲಕ, ವಿಗ್ರಹವಲ್ಲ. ಅದರಲ್ಲಿ ಕಣ್ಣು, ಮೂಗು, ಬಾಯಿಗಳು ಮೂಡಿರುವುದು ಕಂಡು ಬರುತ್ತದೆ. ಈ ದೇವರ ಶಿಲೆ, ಮೂಲಬೆಟ್ಟದ ಮೇಲ್ಮೆಯಿಂದ ಮೇಲಕ್ಕೆದ್ದು ಬಂದಿದೆ. ಆದ್ದರಿಂದ ಇದರಲ್ಲಿ ದೈವಸಾನ್ನಿಧ್ಯವನ್ನು ಕಂಡು ಹಿಂದಿನವರು ಶ್ರೀ ರಂಗನಾಥನನ್ನು ಸದರೀ ಶಿಲೆಯಲ್ಲಿ ಪ್ರಾಣಪ್ರತಿಷ್ಠೆ ಮಾಡಿದ್ದಾರೆ.

ರಂಗನಾಥ ಸ್ವಾಮಿ ದೇವಾಲಯದಲ್ಲಿ ಆಳ್ವಾರುಗಳ ಜೊತೆಯಲ್ಲಿ ನಿಂತ ಭಂಗಿಯಲ್ಲಿದ್ದು ಕತ್ತಿ ಮತ್ತು ಗುರಾಣಿಯನ್ನು ಹಿಡಿದುಕೊಂಡಿರುವ ವಿಗ್ರಹಗಳಿವೆ. ಇವರು ಶ್ರೀವೈಷ್ಣವ ಭಕ್ತರಾದ ಆಳ್ವಾರುಗಳಲ್ಲ ಈ ದೇವಾಲಯವನ್ನು ನಿರ್ಮಾಣ ಮಾಡಿದ ವೀರಭಕ್ತಾಗ್ರೇಸರಿರಬಹುದು. ಇವರು ರಂಗನಾಥನ ಪರಮಭಕ್ತರಾಗಿದ್ದು ಕಾರ್ಯ ನಿರತರಾಗಿದ್ದರಿಂದ ಇವರನ್ನು ಆಳ್ವಾರುಗಳ ಮಧ್ಯದಲ್ಲಿ ಸ್ಥಾಪನೆ ಮಾಡಿರುವ ಸಾಧ್ಯತೆ ಇದೆ.

ದೇವಸ್ಥಾನದ ನವರಂಗದ ಮೂಲೆಯಲ್ಲಿ ಕಬ್ಬಿಣದ ತಗಡುಗಳಿಂದ ಮಾಡಿರುವ 5 ಅಡಿ ಎತ್ತರದ ನಗಾರಿಯೊಂದಿದೆ. ಇದು ಹಂಪೆಯ ವಿರೂಪಾಕ್ಷ ದೇವಾಲಯಾದಲ್ಲಿರುವ ನಗಾರಿಯನ್ನು ಜ್ಞಾಪಿಸುತ್ತದೆ. ಇದು ಸರಿಯಾದ ಸ್ಥಿತಿಯಲ್ಲಿದ್ದಾಗ ದೇವತಾ ಕೈಂಕರ್ಯದ ಸಮಯದಲ್ಲಿ ಇದನ್ನು ಭಾರಿಸಲಾಗುತ್ತಿತ್ತಂತೆ ಇದರ ಶಬ್ಧ ಹಲವು ಹಳ್ಳಿಗಳಿಗೆ ಕೇಳಿಸುತ್ತಿತ್ತಂತೆ. ಸುಮಾರು 25 ಕಿ.ಮೀ. ದೂರದ ಕೃಷ್ಣಗಿರಿ ಗ್ರಾಮಕ್ಕೆ ನಗಾರಿಯ ಶಬ್ಧ ಕೇಳಿಬರುತ್ತಿತ್ತೆಂದು ಇಂದಿಗೂ ಇಲ್ಲಿನ ಜನ ಹೇಳುತ್ತಾರೆ. ಇದೇ ಅಳತೆಯ ಇದೇ ಮಾದರಿಯ ನಗಾರಿಯೊಂದು ಹಂಪಿಯ ವಿರೂಪಾಕ್ಷನ ದೇವಾಲಯದಲ್ಲಿದೆ.

ಈ ಮೇಲಿನ ಅನೇಕ ಅಂಶಗಳನ್ನು ಗಮನಿಸಿದಾಗ ದೇವರಬೆಟ್ಟದ ಶ್ರೀ ರಂಗನಾಥಸ್ವಾಮಿ ದೇವಾಲಯವು ಹಲವು ವೈವಿಧ್ಯತೆ ಮತ್ತು ಪ್ರತಿಷ್ಠೆಗಳಿಂದ ಕೂಡಿರುವುದು ಕಂಡುಬರುತ್ತದೆ.

 

ಗಾಳಿಗೋಪುರ.

ರಂಗನಾಥ ಸ್ವಾಮಿಯ ದೇವಾಲಯದ ದಕ್ಷಿಣಕ್ಕಿರುವ ದಿಡ್ಡಿಬಾಗಿಲನ್ನು ದಾಟಿ ಹಿಂದೆ ಹೋದರೆ ಹಲವು ಬಿದ್ದು ಹೋಗಿರುವ ಮೆಟ್ಟಿಲುಗಳಿವೆ. ಅದನ್ನು ಹತ್ತಿ ಸುಮಾರು 60 ಅಡಿ ಮೇಲೆ ಹೋದರೆ ಬೆಟ್ಟದ ವಿಶಾಲವಾದ ಕುಂಭಿಯ ಮೇಲಕ್ಕೆ ಬರುತ್ತೇವೆ. ಸದರೀ ಭಾಗದ ಸುತ್ತಲೂ ಕಲ್ಲಿನ ಗೋಡೆಯನ್ನು ಕಟ್ಟಲಾಗಿದೆ. ಮಧ್ಯಭಾಗದಲ್ಲಿ ಒಂದು ವೇದಿಕೆ ಇದ್ದು ಅದರ ಮೇಲೆ ನಾಲ್ಕು ಕಲಾತ್ಮಕ ಕಂಬಗಳಿಂದ ಕೂಡಿದ ಎತ್ತರವಾದ ಮಂಟಪವಿದೆ. ಕಂಬ ಮತ್ತು ಬೋದಿಗೆಗಳು ಸುಂದರವಾಗಿದೆ. ಇದಕ್ಕೆ ಎತ್ತರವಾದ ಗೋಪುರವಿದೆ. ಈ ಮಂಟಪದ ಪಕ್ಕದಲ್ಲಿ ಸುಂದರವಾದ ದೀಪಸ್ತಂಭವಿದೆ. ವಿಶೇಷವಾದ ಸಮಯದಲ್ಲಿ ಇಲ್ಲಿ ದೀಪವನ್ನು ಹಚ್ಚಲಾಗುತ್ತದೆ. ಹಿಂದೆ ಗಾಳಿ ಗೋಪುರದ ಮಂಟಪದಲ್ಲಿ ದೇವರ ಉತ್ಸವವನ್ನು ಬಿಜಯ ಮಾಡಿಸಲಾಗುತ್ತಿತ್ತು. ಇಲ್ಲಿ ನಿಂತು ನೋಡಿದರೆ ದೂರದ ಹಳ್ಳಿಗಳು, ಮನೆ, ತೋಟ, ಹಸಿರು ವನಗಳು, ಗುಡ್ಡಗಳು, ಬಯಲು, ದನಕರುಗಳ ಓಡಾಟ ಬಹಳ ರಮ್ಯವಾಗಿ ಕಾಣುತ್ತಿತ್ತು. ದೇವರಬೆಟ್ಟದ ರಂಗನಾಥಸ್ವಾಮಿ ದೇವಾಲಯದ ಹಿಂದೆ ಹುಟ್ಟು ಗುಂಡಿನ ಮೇಲೆ ಕನ್ನಡ ಶಾಸನವಿದೆ.

ಜಯಸಂವತ್ಸರದ ಪಾಲ್ಗುಣ ಬಹುಳ…..ಪೆನುಗೊಂಡೆ ವಾಸಿ ಕೊಮಾರ ಕಾಸಿನಾಗಯ್ಯ ರಂಗನಾಥಸ್ವಾಮಿಯ ಚರಣಾರವಿಂದಕ್ಕೆ ನಮಃ, ಎಂಬ ಶಾಸನವಿದೆ. ದೇವಸ್ಥಾನದ ಸುತ್ತಮುತ್ತಲ ಜಮೀನುಗಳಲ್ಲಿ ವೀರಗಲ್ಲುಗಳು ಮತ್ತು ಮಾಸ್ತಿಕಲ್ಲುಗಳಿವೆ.

Leave a Reply

Your email address will not be published. Required fields are marked *

You cannot copy content of this page

error: Content is protected !!